ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಮೃತ ಸ್ವಾತಂತ್ರ್ಯೋತ್ಸವ

0

ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ ಅಮೃತ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹಣಗೈದ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು ಮಾತನಾಡಿ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳಬೇಕಾದರೆ ನಾವು ಪ್ರತಿಯೊಬ್ಬರೂ ನಮ್ಮ ಕರ್ತವ್ಯವನ್ನು ಪಾಲಿಸಬೇಕು. ಇಂದು ಪ್ರಧಾನಿ ಅಥವಾ ಮುಖ್ಯಮಂತ್ರಿ ಒಬ್ಬರಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಈಗಿನ ಕಾಲದ ಅಭಿವೃದ್ಧಿಗೆ ಪೂರಕವಾದ ವಿಚಾರಗಳನ್ನು ನಾವು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ಮಾತ್ರವೇ ನಿಜವಾದ ಸ್ವಾತಂತ್ರ್ಯ ದೊರಕಲು ಸಾಧ್ಯ ಎಂದರು.

ಧ್ವಜಾರೋಹಣದ ಬಳಿಕ ಬ್ಯಾಂಡ್-ವಾದ್ಯ ಘೋಷ, ವಿದ್ಯಾರ್ಥಿಗಳ ಘೋಷಣೆಗಳು ಸಹಿತವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರ ಮೆರವಣಿಗೆ ಪೇಟೆಯುದ್ದಕ್ಕೂ ಸಾಗಿತು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ ನಾವು ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುವುದಕ್ಕಿಂತ ಹೆಚ್ಚಾಗಿ ನಮ್ಮ ಚರಿತ್ರೆಯನ್ನು ತಿಳಿದುಕೊಳ್ಳಬೇಕು. ಆಗ ಮಾತ್ರವೇ ನಾವು ಈ ಸ್ಥಿತಿಯಲ್ಲಿ ಏಕಿದ್ದೇವೆ ಎಂಬ ಜ್ಞಾನ ದೊರಕುತ್ತದೆ ಎಂದರು. ಮುಂದಕ್ಕೆ ಆಝಾದಿ ಕಾ ಅಮೃತ್ ಮಹೋತ್ಸವ್‌ನ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧಾ ವಿಜೇತರುಗಳಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷವಾಗಿ ಭಾರತ ಸಂವಿಧಾನದ ಮುನ್ನುಡಿಯನ್ನು ಉಚ್ಛರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ೧೫೦ ವಿದ್ಯಾರ್ಥಿಗಳು ಆ ಸ್ಪರ್ಧೆಯಲ್ಲಿ ಭಾಗವಹಿಸಿದರು.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಣವ್ ಕೆ.ಯು. ಕವಾಯತನ್ನು ನಿರ್ವಹಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here