ಗುಂಡ್ಯ: ಸ್ಕೂಟಿ ಕದ್ದು ಧರ್ಮಸ್ಥಳ ಪೊಲೀಸರಿಗೆ ಸಿಕ್ಕಿಬಿದ್ದ ಕೇರಳದ ಕೊಲೆ ಆರೋಪಿ

0

ನೆಲ್ಯಾಡಿ: ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು ಕೇರಳದ ಕೋಯಿಕ್ಕೋಡ್‌ನ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದು ಎಂಜಿರದಲ್ಲಿ ಮಹಿಳೆಯೋರ್ವರ ಸ್ಕೂಟಿ ಕದ್ದು ಪರಾರಿಯಾಗುತ್ತಿದ್ದ ವೇಳೆ ಗುಂಡ್ಯದಲ್ಲಿ ಧರ್ಮಸ್ಥಳ ಪೊಲೀಸರ ವಶವಾದ ಘಟನೆ ಆ.15ರಂದು ನಡೆದಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ವಿನೀಶ್(21ವ.) ಪೊಲೀಸ್ ವಶವಾದ ಆರೋಪಿ. ರೆಖ್ಯ ಸಮೀಪದ ಎಂಜಿರ ಮಲ್ನಾಡ್ ಹೋಟೆಲ್ ಸಮೀಪ ಮಹಿಳೆಯೋರ್ವರು ಕೀ ಅನ್ನು ಸ್ಕೂಟಿಯಲ್ಲಿಯೇ ಬಿಟ್ಟು ಹೋಟೆಲ್‌ಗೆ ಹೋಗಿದ್ದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ವಿನೀಶ್ ಸ್ಕೂಟಿಯನ್ನು ಕದ್ದು ಗುಂಡ್ಯ ಕಡೆಗೆ ಪರಾರಿಯಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಗುಂಡ್ಯ ಪೊಲೀಸ್ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದ್ದರು. ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಆರೋಪಿಯನ್ನು ಸ್ಕೂಟಿ ಸಮೇತ ವಶಕ್ಕೆ ಪಡೆದುಕೊಂಡರು. ಈ ಮಧ್ಯೆ ಮಹಿಳೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಈತ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು ವಿಚಾರಣೆ ವೇಳೆ ಮಲಪ್ಪುರಂ ಜಿಲ್ಲೆಯವನೆಂದೂ, ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದು ಆ.೧೬ರಂದು ಬೆಳಿಗ್ಗೆ ಧರ್ಮಸ್ಥಳಕ್ಕೆ ಆಗಮಿಸಿದ ಕೇರಳ ಪೊಲೀಸರ ವಶಕ್ಕೆ ಆರೋಪಿಯನ್ನು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆ ಪ್ರಕರಣದ ಆರೋಪಿಯಾಗಿರುವ ವಿನೀಶ್ ಮಾನಸಿಕ ಅಸ್ವಸ್ಥನಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕೋಯಿಕ್ಕೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡು ಈತ ರೈಲು ಹತ್ತಿ ಮಂಗಳೂರಿಗೆ ಬಂದಿದ್ದಾನೆ. ಅಲ್ಲಿಂದ ಈತ ಎಂಜಿರಕ್ಕೆ ಬಂದು ಸ್ಕೂಟಿ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

LEAVE A REPLY

Please enter your comment!
Please enter your name here