ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿಗಳಿಗೆ ನ್ಯಾಯಾಂಗ ಬಂಧನ

0

ಪುತ್ತೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರು ಪ್ರಮುಖ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಪ್ರಮುಖ ಆರೋಪಿಗಳಾಗಿರುವ ಮಹಮ್ಮದ್ ಶಿಹಾಬ್, ಅಬ್ದುಲ್ ಬಶೀರ್, ರಿಯಾಜ್‌ರನ್ನು ಆ.16ರಂದು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆ.24ರ ತನಕ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತ ಪ್ರಮುಖ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ನ್ಯಾಯಾಲಯದ ಮೂಲಕ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು.ಕಳೆದ ಒಂದು ವಾರದಿಂದ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದರು.ಕೃತ್ಯ ನಡೆಸಿದ ಬಳಿಕ ಪರಾರಿಯಾಗಿದ್ದ ಆರೋಪಿಗಳು ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡುವಿನ ವಿವಿಧ ಕಡೆಗಳಲ್ಲಿ ತಂಗಿದ್ದ ಮಾಹಿತಿಯನ್ನು ವಿಚಾರಣೆ ವೇಳೆ ಪಡೆದುಕೊಂಡಿದ್ದ ಪೊಲೀಸರು ಆರೋಪಿಗಳನ್ನು ಅಲ್ಲಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ ಮಾತ್ರವಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಕೆಲವೊಂದು ಮಹತ್ವದ ಮಾಹಿತಿಯನ್ನು ಆರೋಪಿಗಳಿಂದ ಪೊಲೀಸರು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಏಳು ಮಂದಿ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರಾಷ್ಟ್ರೀಯ ತನಿಖಾ ದಳದವರೂ ಆ.4ರಂದು ಎಫ್‌ ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಬೆಳ್ಳಾರೆ ಪೊಲೀಸರು ಎಫ್‌ ಐಆರ್‌ನಲ್ಲಿ ದಾಖಲಿಸಿದ್ದ ಅಂಶಗಳನ್ನು ಎನ್‌ಐಎ ಕೂಡಾ ಎಫ್‌ ಐಆರ್‌ನಲ್ಲಿ ದಾಖಲಿಸಿದೆ.

ಭಯ ಹುಟ್ಟಿಸಲು ಹತ್ಯೆ ಮಾಡಿದರೇ?

ಪ್ರವೀಣ್ ನೆಟ್ಟಾರು ಅವರ ಹತ್ಯೆಗೆ ಕಾರಣ ಏನು ಎನ್ನುವುದನ್ನು ಪೊಲೀಸರು ಈಗಾಗಲೇ ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸಿ ಪತ್ತೆ ಮಾಡಿದ್ದಾರೆ.ಸ್ಥಳೀಯವಾಗಿ ಭಯ ಹುಟ್ಟಿಸಲೆಂದೇ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆನ್ನಲಾಗಿದೆ.ಬೆಳ್ಳಾರೆ ಕಳೆಂಜದಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಮಸೂದ್ ಅವರ ಕೊಲೆಯಾದ ನಂತರದ ಬೆಳವಣಿಗೆಯಲ್ಲಿ ಬೆಳ್ಳಾರೆ ಪರಿಸರದಲ್ಲಿ ಹಿಂದೂಗಳಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದಲೇ ಪ್ರವೀಣ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಆರೋಪಿಗಳು ಹೇಳಿರುವುದಾಗಿ ಸುದ್ದಿ ಯಾಗಿದೆಯಾದರೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here