ವಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ: 5.43 ಲಕ್ಷ ರೂ.,ನಿವ್ವಳ ಲಾಭ; ಶೇ.15 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 75ಪೈಸೆ ಬೋನಸ್ ಘೋಷಣೆ

0

ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.16ರಂದು ಬಜತ್ತೂರು ಗ್ರಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

x
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ವಸಂತ ಗೌಡರವರು ಮಾತನಾಡಿ, 1993ರಲ್ಲಿ ಸ್ಥಾಪನೆಗೊಂಡ ಸಂಘ ೨೯ವರ್ಷ ಪೂರೈಸಿದೆ. ೨೦೨೧-೨೨ನೇ ಸಾಲಿನ ವರ್ಷಾಂತ್ಯಕ್ಕೆ ಸಂಘದಲ್ಲಿ 272 ಸದಸ್ಯರಿದ್ದು 58 ಸಾವಿರ ರೂ.ಪಾಲು ಬಂಡವಾಳವಿದೆ. ವರದಿ ವರ್ಷದಲ್ಲಿ 1,03,11,597 ರೂ.ಮೌಲ್ಯದ 3,43,246 ಲೀ.ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಹಾಗೂ ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಪಶು ಆಹಾರ ಮತ್ತು ಲವಣ ಮಿಶ್ರಣ ಖರೀದಿಸಿ ಸಂಘದ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ಒಟ್ಟು ವ್ಯವಹಾರದಲ್ಲಿ ಸಂಘಕ್ಕೆ 5,43,024 ರೂ., ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ ೭೫ ಪೈಸೆಯಂತೆ ಬೋನಸ್ ನೀಡಲಾಗುವುದು ಎಂದರು. ಸಾಂಧ್ರ ಶೀತಲೀಕರಣ ಘಟಕಕ್ಕೆ ಒಕ್ಕೂಟದಿಂದ ಮಂಜೂರಾತಿ ಸಿಕ್ಕಿದ್ದು, ಸ್ಥಳ ಪರಿಶೀಲನೆಯೂ ಮಾಡಲಾಗಿದೆ. ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು.



ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಸತೀಶ್‌ರವರು ಒಕ್ಕೂಟದ ಕುರಿತಂತೆ ಮಾಹಿತಿ ನೀಡಿದರು. ಪಶುವೈದ್ಯ ಡಾ.ಜಿತೇಂದ್ರ ಪ್ರಸಾದ್‌ರವರು ರಾಸುಗಳಿಗೆ ವಿಮೆ ಮಾಡುವಂತೆ ತಿಳಿಸಿ, ವಿಮೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಜಂತುಹುಳದ ಔಷಧಿ ನೀಡುವಂತೆಯೂ ಅವರು ತಿಳಿಸಿದರು. ವಿಸ್ತರಣಾಧಿಕಾರಿ ಮಾಲತಿಯವರು ಮಾತನಾಡಿ, ಸದಸ್ಯರು ಸಂಘಕ್ಕೆ ಸರಬರಾಜು ಮಾಡಿದ ಹಾಲಿನ ಪ್ರಮಾಣಕ್ಕೆ ಒಳಪಟ್ಟು ಒಕ್ಕೂಟದಿಂದ ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ರಬ್ಬರ್ ಮ್ಯಾಟ್ ಖರೀದಿಗೆ ಅನುದಾನ ಸಿಗಲಿದೆ. ಗೊಬ್ಬರ ಅನಿಲ ಸ್ಥಾವರ, ಅಜೋಲಾ ತೊಟ್ಟಿ ನಿರ್ಮಾಣಕ್ಕೆ ಸಹಾಯಧನ ಸಿಗಲಿದೆ. ಹಾಲಿನ ದರದಲ್ಲಿ ಪ್ರೋತ್ಸಾಹಧನ, ಪಶು ಆಹಾರ ಬಳಕೆ ಕುರಿತು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಸುಧಾಕರ ಎನ್., ನಿರ್ದೇಶಕರಾದ ಎಸ್.ಹೊನ್ನಪ್ಪ ಗೌಡ, ಉಮೇಶ್ ಓಡ್ರಪಾಲು, ಡಿ.ಕುಶಾಲಪ್ಪ ಗೌಡ, ಎಸ್.ದಾಮೋದರ ಗೌಡ, ರಾಮಪ್ಪ ಪೂಜಾರಿ, ಅಣ್ಣಿ ಪೂಜಾರಿ, ಸದಾನಂದ ಗೌಡ, ಪಿ.ಸುಲೋಚನಾ, ಪಿ.ಸುಶೀಲ, ಕಮಲ, ಯಮುನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರದ್ದಾಂಜಲಿ:
ಸಂಘದ ಸದಸ್ಯರಾಗಿದ್ದು ಕಳೆದ ಸಾಲಿನಲ್ಲಿ ಮೃತಪಟ್ಟ ಪ್ರಸಾದ್ ಪಟ್ಟೆ, ಕ್ರಿಸ್ತಿನಾ ಡಿ.ಸೋಜ ನೀರಕಟ್ಟೆ, ಸಿಪ್ರಿಯಾನ್ ಡಿ.ಸೋಜ ಮುದ್ಯ ಹಾಗೂ ಮೋನಪ್ಪ ನಾಯ್ಕ್ ಪಡ್ಪು ಅವರ ಆತ್ಮಕ್ಕೆ ಶ್ರದ್ದಾಂಜಲಿ ಕೋರಿ ಸಭೆಯ ಆರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಉಪಾಧ್ಯಕ್ಷ ಸುಧಾಕರ ಯನ್.,ಸ್ವಾಗತಿಸಿದರು. ನಿರ್ದೇಶಕ ಉಮೇಶ್ ಓಡ್ರಪಾಲು ವಂದಿಸಿದರು. ಕಾರ್ಯದರ್ಶಿ ಪದ್ಮಾವತಿ ವರದಿ ವಾಚಿಸಿದರು. ಸದಸ್ಯೆ ಮೋಹಿನಿ ಪ್ರಾರ್ಥಿಸಿದರು. ಹಾಲು ಪರೀಕ್ಷಕ ಷಬೀರ್, ಸಹಾಯಕ ಸಿಬ್ಬಂದಿ ಸಿದ್ದಾರ್ಥ್ ಟಿ.ಜಿ., ಕೃತಕ ಗರ್ಭಧಾರಣಾ ಕಾರ್ಯಕರ್ತ ಎ.ಕಿಶೋರ್ ಸಹಕರಿಸಿದರು.

ಬಹುಮಾನ:
೨೦೨೧-೨೨ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ೧೨,೩೩೮ ಲೀ. ಹಾಲು ಪೂರೈಸಿದ ಅನಂತನಾಭ ಆರಾಲು(ಪ್ರಥಮ), ೧೦,೫೫೩ ಲೀ.ಹಾಲು ಪೂರೈಸಿದ ವಿಲ್ಪ್ರೆಡ್ ಡಿ.ಸೋಜ ಮುದ್ಯ (ದ್ವಿತೀಯ), ೧೦,೨೦೫ ಲೀ.ಹಾಲು ಪೂರೈಸಿದ ಕೆ.ವಾರಿಜ ಕೋಡಿ(ತೃತೀಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವರ್ಷದಲ್ಲಿ ೫೦೦ ಲೀ.ಗಿಂತ ಮೇಲ್ಪಟ್ಟು ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here