ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಿಂದ ಅಧ್ಯಕ್ಷ ವೇಣುಗೋಪಾಲ್ ಗೌಡರವರಿಗೆ ಶ್ರದ್ಧಾಂಜಲಿ

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸುಮಾರು 35 ವರ್ಷಕ್ಕೂ ಮಿಕ್ಕಿ ಸೇವೆ ಸಲ್ಲಿಸಿರುವ ಹಾಗೂ ಕಳೆದ 20 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಅಧ್ಯಕ್ಷ ವೇಣುಗೋಪಾಲ್ ಗೌಡರವರಿಗೆ ದೇವಸ್ಥಾನದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಆ.19 ರಂದು ರಾತ್ರಿ ಪೂಜೆ ಬಳಿಕ ನೆರವೇರಿತು.

ದೇವಸ್ಥಾನದ ಅರ್ಚಕರಾದ ಉದಯ ನಾರಾಯಣ ಕಲ್ಲೂರಾಯರವರು ಮಾತನಾಡಿ, 35 ವರ್ಷ ದೇವರ ಸನ್ನಿಧಾನದಲ್ಲಿ ಸೇವೆ ಮಾಡುವ ಭಾಗ್ಯ ವೇಣುಗೋಪಾಲ್‌ರವರಿಗೆ ಸಿಕ್ಕಿತ್ತು. ಕಳೆದ ಜನ್ಮದ ಪಾಪ, ಪುಣ್ಯದ ಫಲವಾಗಿ ಈ ಜನ್ಮ ದೊರಕಿದೆ. ಕಳೆದ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಈಗ ಅದು ಸುಖದ ರೂಪದಲ್ಲಿ ದೊರಕುತ್ತದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಮುಂದಿನ ಜನ್ಮದಲ್ಲಿ ಅದು ನಮ್ಮ ಖಾತೆಗೆ ಬೀಳಬಹುದು. ವೇಣುಗೋಪಾಲ್ ಗೌಡರವರು ಕಾಯಾ, ವಾಚಾ, ಮನಸಾ ಎಂಬಂತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿರುತ್ತಾರೆ. ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಆಗಬೇಕು, ದಕ್ಷಿಣ ಭಾಗದಲ್ಲಿ ಗೋಪುರವನ್ನು ನಿರ್ಮಿಸಬೇಕೆನ್ನುವ ಆಸೆ-ಆಕಾಂಕ್ಷೆ ಅವರಲ್ಲಿತ್ತು. ಇದೀಗ ನಮ್ಮನ್ನಗಲಿದ ವೇಣುಗೋಪಾಲ್ ಗೌಡರವರಿಗೆ ಮೋಕ್ಷವು ಸಿಗಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ದೇವಸ್ಥಾನದ ಆಂತರಿಕ ಲೆಕ್ಕ ಪರಿಶೋಧಕ ವಿಶ್ವನಾಥ್ ರೈ ಮಾತನಾಡಿ, ಅಗಲಿದ ವೇಣುಗೋಪಾಲ್ ಗೌಡರವರಿಗೆ ಅನೇಕ ಕಷ್ಟಗಳಿದ್ದರೂ ಅದನ್ನು ತೋರಿಸದೆ ಎಲ್ಲರೊಂದಿಗೆ ಹಸನ್ಮುಖಿಯಾಗಿ ಜೀವನ ಕಳೆಯುತ್ತಿದ್ದರು. ಅವರ ಆತ್ಮಕ್ಕೆ ಸದ್ಗತಿ ಕಾರ್ಯಗಳು ಅವರ ಹುಟ್ಟೂರಾದ ಆರಂತೋಡಿನ ಕಿರ್ಲಾಯದಲ್ಲಿ ನಡೆದಿದ್ದು ನಾವೆಲ್ಲಾ ಅಲ್ಲಿಗೆ ಹೋಗಿದ್ದೇವು. ಆದರೆ ಎಲ್ಲರಿಗೂ ಅಲ್ಲಿಗೆ ಹೋಗಲು ಅಸಾಧ್ಯವಾಗಿದ್ದರೂ ಮನಸ್ಸಿನಲ್ಲಿಯೇ ಅವರಿಗೆ ದೇವರು ಮೋಕ್ಷವನ್ನು ಕರುಣಿಸಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂಬುದು ನಮ್ಮ ಪ್ರಾರ್ಥನೆಯಗಿದೆ. ಈ ಪ್ರಪಂಚದಲ್ಲಿ ಅವರು ಹೇಗೆ ನಮ್ಮೊಂದಿಗೆ ಒಡನಾಟದಲ್ಲಿದ್ದಾರೋ ಹಾಗೆಯೇ ದೇವರ ಸನ್ನಿಧಾನದಲ್ಲಿ ಉತ್ಕೃಷ್ಟವಾದ ಸ್ಥಾನಮಾನ ಸಿಗಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಕೆಎಸ್‌ಆರ್‌ಟಿಸಿ ಉದ್ಯೋಗಿ, ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ರಮೇಶ್ ರೈ ಮಿಶನ್‌ಮೂಲೆರವರು ಮಾತನಾಡಿ, ವೇಣುಗೋಪಾಲ್ ಗೌಡರವರು ಬಹಳ ಮೃದು ಸ್ವಭಾದವರು. ಸರಳ-ಸಜ್ಜನಿಕೆಯ ವ್ಯಕ್ತಿತ್ವವುಳ್ಳವರು. ದೇವಸ್ಥಾನದ ಅಭಿವೃದ್ಧಿ ನಿಟ್ಟಿನಲ್ಲಿ ಅವರು ಸದಾ ತಮ್ಮನ್ನು ತಾವು ತೊಡಗಿಸಿಕೊಂಡವರು. ಜೀವಂತವಾಗಿರುವಾಗಲೇ ಮಗಳ ಮದುವೆಯನ್ನು ಕಣ್ತುಂಬಿಕೊಳ್ಳಬೇಕು ಎಂದಾಗ ವಿಧಿ ಬೇರೇನೆ ಆಟವಾಡಿತು. ಮುಂದಿನ ದಿನಗಳಲ್ಲಿ ಅವರ ಮಗಳ ಕಾರ್ಯ ಸುಸೂತ್ರವಾಗಿ ನಡೆಯಲಿ ಹಾಗೂ ವೇಣುಗೋಪಾಲ್ ಗೌಡರವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ರೈ ಮಿಶನ್‌ಮೂಲೆ, ಉಪಾಧ್ಯಕ್ಷ ರಾಮ, ಕಾರ್ಯದರ್ಶಿ ಶೇಖರ್, ಜೊತೆ ಕಾರ್ಯದರ್ಶಿ ಲಕ್ಷ್ಮಣ, ಖಜಾಂಚಿ ಸಂತೋಷ್ ಮುಕ್ರಂಪಾಡಿ, ಸಹಾಯಕ ಅರ್ಚಕ ರಮೇಶ್ ಅಯ್ಯರ್ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಹಾಗೂ ಊರ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ…ಭಾವಚಿತ್ರಕ್ಕೆ ಪುಷ್ಪಾರ್ಚನೆ…

ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ದೇವಸ್ಥಾನದ ಅಧ್ಯಕ್ಷ ವೇಣುಗೋಪಾಲ್ ಗೌಡರವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಅಗಲಿದ ವೇಣುಗೋಪಾಲ್ ಗೌಡರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here