ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ : ಬೆಳಿಯೂರುಕಟ್ಟೆ ನಿವಾಸಿ ಸಹಿತ ಮೂವರು ಆರೋಪಿಗಳ ಬಂಧನ

0

  • 138 ಮಂದಿಯಿಂದ 1.84 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚನೆ
  • ನಕಲಿ ನೇಮಕಾತಿ ಪತ್ರ ನೀಡುತ್ತಿದ್ದ ಆರೋಪಿಗಳು
  • ಪ್ರಮುಖ ಆರೋಪಿಯಿಂದ ನಕಲಿ ವಿಸಿಟಿಂಗ್ ಕಾರ್ಡ್
  • ಇನ್ನಷ್ಟು ಮಂದಿಗೆ ವಂಚನೆ ಸಾಧ್ಯತೆ

ಮಂಗಳೂರು:ಸರಕಾರಿ ಸ್ವಾಮ್ಯದ ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ ರೂ.1.84 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಣಧಿಸಿದಂತೆ ಬಲ್ನಾಡು ಬೆಳಿಯೂರುಕಟ್ಟೆ ನಿವಾಸಿಯೋರ್ವನ ಸಹಿತ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಭಂಡಾರಿಕೆರೆ ಅಣ್ಣು ಪೂಜಾರಿ ಎಂಬವರ ಮಗ ರಮೇಶ್ ಪೂಜಾರಿ ಬಿ.(41),ಮಂಗಳೂರಿನ ಅಳಪೆ ಪಡೀಲ್‌ನ ಚಂದ್ರಾವತಿ (36ವ) ಮತ್ತು ಬೆಂಗಳೂರಿನ ಸುರೇಂದ್ರ ರೆಡ್ಡಿ ಜಿ.(36ವ.)ಬಂಧಿತ ಆರೋಪಿಗಳಾಗಿದ್ದಾರೆ.ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿಯಾಗಿದ್ದು ಪ್ರಸ್ತುತ ಮೂಡುಬಿದಿರೆ ತಾಲೂಕಿನ ಮಾಸ್ತಿಕಟ್ಟೆಯ ವಿವೇಕನಗರ ನಿವಾಸಿಯಾಗಿರುವ ರಾಮಪ್ರಸಾದ್ ರಾವ್ ಪಿ. (37ವ.)ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.ಇದರೊಂದಿಗೆ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ಕ್ರಮ ಜರಗಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.ಬಂಧಿತ ಆರೋಪಿ ರಮೇಶ್ ಪೂಜಾರಿಯವರು ಈ ಹಿಂದೆ ಮಂಗಳೂರಿನಲ್ಲಿ ಕ್ಯಾಂಡಲ್ ಉತ್ಪಾದನಾ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದರು.
ಘಟನೆ ವಿವರ: ಬಂಧಿತ ಪ್ರಮುಖ ಆರೋಪಿ ರಾಮಪ್ರಸಾದ್ ರಾವ್ ಎಂಬಾತ ಹರೀಶ್, ಕೇಶವ ಮತ್ತು ಶಶಿಧರ ಎಂಬ ಹೆಸರಿನಲ್ಲಿಯೂ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫರಂಗಿಪೇಟೆ ವಳಚ್ಚಿಲ್ ಪದವಿನ ದೇವಿಪ್ರಸಾದ್ ಎಂಬವರು ಪಿಯುಸಿ ವಿದ್ಯಾಭ್ಯಾಸ ಮಾಡಿ ಉದ್ಯೋಗ ಸಿಗದೆ ಮನೆಯಲ್ಲೇ ಇದ್ದರು.ಆ ಸಂದರ್ಭ ಅವರ ಸ್ನೇಹಿತ ಪ್ರೀತೇಶ್ ಕುಮಾರ್ ಎಂಬವರು ಕೆಎಂಎಫ್ ಡೇರಿಯಲ್ಲಿ ಉದ್ಯೋಗವಿದ್ದು ಗುಟ್ಟಾಗಿ ಹಣ ನೀಡಿದರೆ ಉದ್ಯೋಗ ದೊರೆಯುತ್ತದೆ.ಪಡೀಲ್ ನಿವಾಸಿ, ಕೆಎಂಎಫ್ ಉದ್ಯೋಗಿ ಚಂದ್ರಾವತಿ ಮೂಲಕ ಹಣ ನೀಡಬೇಕು ಎಂದು ತಿಳಿಸಿದ್ದರು.ಇದನ್ನು ನಂಬಿದ ದೇವಿಪ್ರಸಾದ್ ಅವರು ಚಂದ್ರಾವತಿಯನ್ನು ಸಂಪರ್ಕಿಸಿದ್ದರು.ಆಗ ಚಂದ್ರಾವತಿ ಉದ್ಯೋಗ ನೀಡಲು 1.80 ಲಕ್ಷ ರು. ನೀಡಬೇಕು.ಅದರಲ್ಲಿ 80,000 ರೂ.ತುರ್ತಾಗಿ ನೀಡಬೇಕು ಎಂದಿದ್ದರು.ಅದರಂತೆ ದೇವಿಪ್ರಸಾದ್‌ರವರು ಚಂದ್ರಾವತಿಗೆ ಹಣ ಪಾವತಿಸಿದ್ದರು.ಅದಕ್ಕೆ ಪ್ರತಿಯಾಗಿ ಚಂದ್ರಾವತಿ ಅವರು ದೇವಿಪ್ರಸಾದ್ ಅವರಿಗೆ ಕ್ಲರ್ಕ್ ನೇಮಕದ ನಕಲಿ ನೇಮಕಾತಿ ಆದೇಶ ಪತ್ರ ನೀಡಿದ್ದರು.
ನಕಲಿ ವಿಸಿಟಿಂಗ್ ಕಾರ್ಡ್: 2021 ಡಿ.15ರಂದು ರಾಮಪ್ರಸಾದ್ ರಾವ್ ಎಂಬಾತ ಮಂಗಳೂರಿನ ಚಿಲಿಂಬಿಯ ಹಾಲ್‌ವೊಂದರಲ್ಲಿ ಸುಮಾರು 38 ಮಂದಿಗೆ ಕೆಎಂಎಫ್ ತರಬೇತಿ ಆಯೋಜಿಸಿದ್ದ.ರಾಮ್‌ಪ್ರಸಾದ್, ಮೂಡಿಗೆರೆಯ ಡಾ.ಹೇಮಂತ್, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್ ಎಂಬವರು ತರಬೇತಿ ನೀಡಿದ್ದರು.ತರಬೇತಿಯಲ್ಲಿ ದೇವಿಪ್ರಸಾದ್ ಹಾಗೂ ಇತರ 37 ಮಂದಿ ಪಾಲ್ಗೊಂಡಿದ್ದರು. ತಮಗೆ ಉದ್ಯೋಗ ದೊರೆಯಿತು ಎಂಬ ಭರವಸೆ ಅವರಲ್ಲಿ ಮೂಡಿತ್ತು. ರಾಮ್‌ಪ್ರಸಾದ್ ತಾನು ಕೆಎಂಎಫ್‌ನ ಡೈರೆಕ್ಟರ್ ಹರೀಶ್ ಕೆ. ಎಂಬುದಾಗಿ ಪರಿಚಯಿಸಿಕೊಂಡು ವಿಸಿಟಿಂಗ್ ಕಾರ್ಡ್ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಹುಮಂದಿಗೆ ವಂಚನೆ: ತನಗೆ ಉದ್ಯೋಗ ನೇಮಕಾತಿಯಾದ ವಿಚಾರವನ್ನು ದೇವಿಪ್ರಸಾದ್ 2022ರ ಜನವರಿಯಲ್ಲಿ ಸ್ನೇಹಿತರಾದ ಅಶ್ವಿನಿ ಮತ್ತು ದೀಕ್ಷಿತ್‌ಗೆ ತಿಳಿಸಿದ್ದರು.ಅವರು ಕೂಡ ತಮ್ಮನ್ನು ಸೇರ್ಪಡೆಗೊಳಿಸುವಂತೆ ಹೇಳಿದ್ದರು.ಈ ವಿಚಾರವನ್ನು ದೇವಿಪ್ರಸಾದ್ ಅವರು ಚಂದ್ರಾವತಿಗೆ ತಿಳಿಸಿದಾಗ ಅಶ್ವಿನಿ(ಅಸಿಸ್ಟೆಂಟ್ ಎಚ್‌ಆರ್ ಉದ್ಯೋಗಕ್ಕೆ)2.60 ಲಕ್ಷ ರೂ., ದೀಕ್ಷಿತ್ (ಕ್ಲರ್ಕ್ ಉದ್ಯೋಗಕ್ಕೆ) 90,000 ರೂ.ನೀಡುವಂತೆ ತಿಳಿಸಿದ್ದರು.ಆ ಮೊತ್ತವನ್ನು ಕೂಡ ಚಂದ್ರಾವತಿಗೆ ಪಾವತಿ ಮಾಡಿದ್ದರು.2022ರ ಮಾರ್ಚ್ನಲ್ಲಿ ದೇವಿಪ್ರಸಾದ್ ಅವರಲ್ಲಿ ಚಂದ್ರಾವತಿ ಕೆಎಂಎಫ್‌ನಲ್ಲಿ 3 ಅಫೀಸರ್ ಉದ್ಯೋಗವಿದೆ ಎಂದು ತಿಳಿಸಿದ್ದು, ಅದರಂತೆ ಭವ್ಯ ಕೆ., ಧನ್ಯಶ್ರೀ ಮತ್ತು ಯಕ್ಷಿತ್ ಉದ್ಯೋಗಕ್ಕೆ ಸೇರಲು ಮುಂದಾಗಿದ್ದರು.ಚಂದ್ರಾವತಿಯನ್ನು ಸಂಪರ್ಕಿಸಿ, ಮೂವರು ಕೂಡ ತಲಾ 3.50 ಲಕ್ಷ ರೂ.ನೀಡಿದ್ದರು.
ಹಣ ವಾಪಸ್‌ಗೆ ಒತ್ತಾಯ: 2022ರ ಮೇ ತಿಂಗಳವರೆಗೂ ನೇಮಕಾತಿ ಆಗದೇ ಇದ್ದಾಗ ದೇವಿಪ್ರಸಾದ್ ಮತ್ತು ಇತರರು ಚಂದ್ರಾವತಿಗೆ ಕರೆ ಮಾಡಿದ್ದರು.ಆಗ ಚಂದ್ರಾವತಿ ಅದನ್ನು ರಾಮಪ್ರಸಾದ್‌ಗೆ ತಿಳಿಸಿದ್ದರು.ಆಗ ರಾಮಪ್ರಸಾದ್  ನಿಮ್ಮ ಹಣಕ್ಕೆ ನಾನು ಇದ್ದೇನೆ ಎಂದಿದ್ದ.ಅನಂತರ ಕೆಲವು ದಿನಗಳ ಬಳಿಕವೂ ನೇಮಕಾತಿ ಆಗದಿದ್ದಾಗ ದೇವಿಪ್ರಸಾದ್ ಮತ್ತು ಇತರರು ಹಣ ವಾಪಸ್ ನೀಡುವಂತೆ ಚಂದ್ರಾವತಿಯನ್ನು ಒತ್ತಾಯಿಸಿದ್ದರು.2022ರ ಮೇ 4ರಂದು ಚಂದ್ರಾವತಿ 10.70 ಲಕ್ಷ ರೂ. ಮೊತ್ತದ ಚೆಕ್‌ನ್ನು ವಾಪಸ್ ನೀಡಿದ್ದರು.
ಮತ್ತೆ ಹಣ ಪಡೆದ ಆರೋಪಿ: ಚಂದ್ರಾವತಿ ಹಣ ವಾಪಸ್ ನೀಡಿದ ಅನಂತರ ದೇವಿಪ್ರಸಾದ್ ಅವರಿಗೆ ರಾಮ್‌ಪ್ರಸಾದ್ ಕರೆ ಮಾಡಿ ಚಂದ್ರಾವತಿ ನೀಡಿದ ಹಣದ ಪೈಕಿ 1 ಲಕ್ಷ ರೂ.ಮೊತ್ತ ತನ್ನ ಖಾತೆಗೆ ಹಾಕಬೇಕು.ಕೂಡಲೇ ಉದ್ಯೋಗ ನೀಡುತ್ತೇನೆ ಎಂದಿದ್ದ. ಇದನ್ನು ನಂಬಿದ ದೇವಿಪ್ರಸಾದ್ 1 ಲಕ್ಷ ರೂ.ಮತ್ತೆ 50,000 ರೂ.ಗಳಿಗೆ ಬೇಡಿಕೆ ಇಟ್ಟಿದ್ದು,ಅದನ್ನು ಕೂಡ ನೀಡಿದರು. ಆದರೂ ಉದ್ಯೋಗ ನೀಡಲಿಲ್ಲ.ಒಟ್ಟು ಸುಮಾರು 138ಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳಿಂದ ಚಂದ್ರಾವತಿ ಮತ್ತು ರಮೇಶ್ ಪೂಜಾರಿ ಮೂಲಕ ಸುಮಾರು 1.80 ಕೋಟಿ ರೂ.ಗಳಿಗೂ ಅಧಿಕ ಹಣ ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಫ್‌ಐಆರ್‌ನಲ್ಲಿ ರಾಮಪ್ರಸಾದ್ ಅಲ್ಲದೆ ಮೂಡಿಗೆರೆಯ ಹೇಮಂತ್, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್ ಮತ್ತು ಇತರ ಹಲವರನ್ನು ಆರೋಪಿಗಳೆಂದು ಗುರುತಿಸಲಾಗಿದೆ.ಈ ಪೈಕಿ ರಾಮಪ್ರಸಾದ್‌ನ್ನು ಬಂಧಿಸಲಾಗಿದ್ದು,ಇದೀಗ ಮತ್ತೆ ಮೂವರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳಿಗೆ ನ್ಯಾಯಾಂಗ ಬಂಧನ: ಆ.23ರಂದು ಬಂಧಿತರಾಗಿರುವ ಆರೋಪಿಗಳಾದ ರಮೇಶ್ ಪೂಜಾರಿ,ಚಂದ್ರಾವತಿಮತ್ತು ಸುರೇಂದ್ರ ರೆಡ್ಡಿಯವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನವಾಗಿದೆ.

LEAVE A REPLY

Please enter your comment!
Please enter your name here