ಪುತ್ತೂರು: ಅಕ್ವೆಟಿಕ್ ಕ್ಲಬ್ ಪುತ್ತೂರು ಇದರ ವತಿಯಿಂದ ದ.ಕ ಜಿಲ್ಲಾ ಇಂಟರ್ ಕ್ಲಬ್ ಈಜು ಸ್ಪರ್ಧೆಯು ಆ.೨೮ರಂದು ಪರ್ಲಡ್ಕ ಶಿವರಾಮ ಕಾರಂತ ಬಾಲವನದ ಈಜುಕೊಳದಲ್ಲಿ ನಡೆಯಿತು.
ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗೋಲೆಕ್ಸ್ ಪಶು ಆಹಾರದ ಮ್ಹಾಲಕ ಪಿಕೆಎಸ್ ಭಟ್ ಮಾತನಾಡಿ, ಮಕ್ಕಳು ಈಜುವುದರಿಂದ ಮಕ್ಕಳಲ್ಲಿ ಬುದ್ದಿ ಶಕ್ತಿಯನ್ನು ವೃದ್ಧಿಸುತ್ತದೆ. ಮಕ್ಕಳು ಎಲ್ಲಿಗೆ ಹೋದರೂ ನಿಮ್ಮ ಪ್ರಯತ್ನ ಉತ್ತಮವಾಗಿರಬೇಕು. ಆಗ ಪ್ರತಿಫಲ ದೊರೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಹರ್ಷಗುಪ್ತರಿಂದ ನಿರ್ಮಾಣವಾದ ಪುತ್ತೂರಿನ ಚಿಕ್ಕ ಈಜುಕೊಳವನ್ನು ಪುತ್ತೂರಿನ ವಾರನಾಸಿಯ ಅಧುನಿಕ ಪಾರ್ಥ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿಖ್ಯಾತಗೊಳಿಸಿದ್ದಾರೆ ಎಂದರು. ನಾನು ಶಾಸಕರಾಗಿದ್ದ ಅವಧಿಯಲ್ಲಿ ಮಕ್ಕಳ ಬೇಡಿಕೆಯಂತೆ ಯುವ ಜನ ಸೇವಾ ಇಲಾಖೆಯೊಂದ ರೂ.೧೦ಲಕ್ಷದಲ್ಲಿ ಜಿಮ್ ಸೆಂಟರ್ ಪ್ರಾರಂಭಿಸಲಾಗಿದ್ದರೂ ಅದರ ಬಳಕೆಗೆ ಯಾರ‍್ಯಾರೋ ತೊಂದರೆ ಕೊಟ್ಟಿದ್ದರು. ಜೊತೆಗೆ ಗ್ಲಾಸ್ ಹೌಸ್ ನಿರ್ಮಾಣಕ್ಕೂ ಜಿಲ್ಲಾಧಿಕಾರಿ ಹಾಗೂ ಶಾಸಕರ ಅನುದಾನ ನೀಡಿದ್ದರೂ ಅದಕ್ಕೂ ವಕ್ರದೃಷ್ಠಿ ಬಿದ್ದಿದು ಜಿಮ್ ಕೇಂದ್ರವೇ ಇಲ್ಲಿಂದ ಹೋಗುವಂತಾಯಿತು ಎಂದು ನೋವು ವ್ಯಕ್ತಪಡಿಸಿದ ಅವರು, ವಿಶ್ವಕ್ಕೆ ಮಾದರಿಯಾಗುವಂತಹ ಈಜುಪಟುಗಳು ಇಲ್ಲಿ ತಯಾರಾಗಲಿ ಎಂದು ಹಾರೈಸಿದರು.
ಮಾಸ್ಟರ್ ಪ್ಲಾನರಿಯ ಆಕಾಸ್ ಎಸ್.ಕೆ., ಕೃಷಿ ವಿಜ್ಞಾನಿ ಅಶ್ವಿನಿಕೃಷ್ಣ, ಅಕ್ವೆಟಿಕ್ ಕ್ಲಬ್‌ನ ಗೌರವ ಕಾರ್ಯದರ್ಶಿ ಪಾರ್ಥ ವಾರನಾಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರಾತ್ಯಕ್ಷಿಕೆ:
ಪ್ರವಾಹ ಹಾಗೂ ಇನ್ನಿತರ ಹಲವು ಸಂದರ್ಭಗಳಲ್ಲಿ ನೀರಿನನಲ್ಲಿ ಮುಳುಗಿದವರನ್ನು ರಕ್ಷಣೆ ಮಾಡುವ ವಿವಿಧ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆಗಳು ನಡೆಯಿತು. ಅಕ್ವೆಟಿಕ್ ಕ್ಲಬ್ ಅಧ್ಯಕ್ಷ ದಿವ್ಯ ಅನಿಲ್ ರೈ ಸ್ವಾಗತಿಸಿದರು. ರಂಜಿತ್ ರೋಲಿನ್ ಮಿನೇಜಸ್ ಹಾಗೂ ಪ್ರತಿಮಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ನರಸಿಂಹ ಶೆಣೈ ವಂದಿಸಿದರು. ಸ್ಪರ್ಧೆಯಲ್ಲಿ ಟೈಮ್ ಕೀಪರ್‌ಗಳು, ತರಬೇತುದಾರರ, ಹಾಗೂ ಸಹಕರಿಸಿದವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.