ಅರಿಯಡ್ಕ ಗ್ರಾ.ಪಂನಿಂದ ತಡರಾತ್ರಿ ಮಿಂಚಿನ ಕಾರ್ಯಾಚರಣೆ

0

ವರದಿ: ಎನ್.ಎಸ್ ಕಾವು

  • ಸೇತುವೆ ಬಳಿ ತ್ಯಾಜ್ಯ ಎಸೆದ ಅಂಗಡಿ ಮಾಲೀಕನಿಗೆ ರೂ.5 ಸಾವಿರ ದಂಡನೆ
  • ಗ್ರಾ.ಪಂನ ಸ್ವಚ್ಛತಾ ಕಾಳಜಿಗೆ ವ್ಯಾಪಕ ಶ್ಲಾಘನೆ

ಕಾವು: ಅಂಗಡಿಯಲ್ಲಿದ್ದ ತ್ಯಾಜ್ಯ ಕಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕಾವು-ಮಾಡ್ನೂರು ಸೇತುವೆ ಬಳಿ ಸುರಿಯುತ್ತಿದ್ದ ಸಂದರ್ಭದಲ್ಲಿ ಅರಿಯಡ್ಕ ಗ್ರಾ.ಪಂನ ಅಧಿಕಾರಿಗಳ ಮತ್ತು ಅಧ್ಯಕ್ಷರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಅಂಗಡಿ ಮಾಲೀಕನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು, ದಂಡ ವಿಧಿಸಿದ ಘಟನೆ ಆ.28ರಂದು ರಾತ್ರಿ ವೇಳೆ ನಡೆದಿದೆ.

 

 

 

ಘಟನೆಯ ವಿವರ:
ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಮಾಡ್ನೂರು ಗ್ರಾಮದ ಕಾವು-ಈಶ್ವರಮಂಗಲ ಸಂಪರ್ಕದ ಮಾಡ್ನೂರು ಸೇತುವೆಯ ಬಳಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಹೊಳೆಗೆ ಕಸ, ತ್ಯಾಜ್ಯಗಳನ್ನು ಎಸೆದು ಕಸ ರಾಶಿ ರಾಶಿಯಾಗಿ ಬಿದ್ದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿತ್ತು, ಅರಿಯಡ್ಕ ಗ್ರಾ.ಪಂಗೂ ಈ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಿದ್ದರು, ಸಾರ್ವಜನಿಕರ ಮತ್ತು ಸ್ಥಳೀಯ ವಾರ್ಡ್ ಸದಸ್ಯರ ಮನವಿಗೆ ಎಚ್ಚೆತ್ತುಕೊಂಡಿದ್ದ ಗ್ರಾ.ಪಂ ಈ ಬಗ್ಗೆ ಘಟನಾ ಸ್ಥಳದಲ್ಲಿ ಸ್ವಚ್ಛತೆಯ ಬಗ್ಗೆ ಎಚ್ಚರಿಕೆಯ ಫಲಕವನ್ನು ಅಳವಡಿಸಿ, ತಪ್ಪಿದಲ್ಲಿ ರೂ. 5 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಎಚ್ಚರಿಕೆ ಫಲಕ ಅಳವಡಿಸಿದರೂ ಸೇತುವೆ ಬಳಿಯಲ್ಲಿ ಕಸ ಹಾಕುವವರು ಇದನ್ನು ಲೆಕ್ಕಿಸದೇ ಹೊಳೆಗೆ ಎಲ್ಲೆಂದರಲ್ಲಿ ಕಸವನ್ನು ರಾಶಿ ರಾಶಿಯಾಗಿ ಹಾಕುತ್ತಿದ್ದರು, ಈ ಬಗ್ಗೆ ಇತ್ತೀಚಿನ ಕೆಲ ವಾರಗಳ ಹಿಂದೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಸ ಎಸೆಯುವವರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು ಮತ್ತು ಗ್ರಾ.ಪಂ ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು.

ಆ.೨೮ರಂದು ಕಾರ್ಯಾಚರಣೆ:
ಸೇತುವೆ ಬಳಿ ಕಸ ಎಸೆಯುವವರನ್ನು ಹೇಗಾದರೂ ಮಾಡಿ ಪತ್ತೆ ಮಾಡಲೇಬೇಕೆಂದು ಹಠ ಹಿಡಿದಿದ್ದ ಗ್ರಾ.ಪಂನ ಸ್ಥಳೀಯ ವಾರ್ಡ್ ಸದಸ್ಯ ವಿಜಿತ್ ಕೆರೆಮಾರುರವರು ಈ ಬಗ್ಗೆ ಸ್ಥಳೀಯ ಜನರ ಸಹಕಾರದೊಂದಿಗೆ ಪ್ರತಿ ದಿನ ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದರು, ಕೊನೆಗೂ ಕಸ ಎಸೆಯುವವರು ಯಾರೆಂಬುದು ಖಚಿತ ಮಾಹಿತಿ ತಿಳಿದ ವಿಜಿತ್ ಕೆರೆಮಾರುರವರು ಗ್ರಾ.ಪಂ ಅಧ್ಯಕ್ಷರಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿ ಆ.28ರಂದು ರಾತ್ರಿ ಕಾರ್ಯಾಚರಣೆಗೆ ಮುಂದಾದರು. ತಡ ರಾತ್ರಿ ಸುಮಾರು 10.30ರ ವೇಳೆಗೆ ಸ್ಕೂಟಿಯಲ್ಲಿ ಬಂದ ವ್ಯಕ್ತಿಯು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿದ್ದ ಕಸ, ತ್ಯಾಜ್ಯವನ್ನು ನೇರವಾಗಿ ಸೇತುವೆಯ ಕೆಳಗೆ ಎಸೆಯಲು ಮುಂದಾದರು, ಅಷ್ಟರ ವೇಳೆಗೆ ಸಮೀಪದಲ್ಲಿಯೇ ಕಾರ್ಯಾಚರಣೆಗೆ ಕಾದು ಕುಳಿತಿದ್ದ ಗ್ರಾ.ಪಂನ ತಂಡ ನೇರವಾಗಿ ಬಂದು ಕಸ ಎಸೆಯುವವರನ್ನು ಹಿಡಿದು, ಯಾರೆಂಬುದನ್ನು ವಿಚಾರಿಸಿದಾಗ ಅಲ್ಲಿಯೇ ಸಮೀಪದಲ್ಲಿರುವ ಕಾವು-ಕಂಕ್ಷನ್ ಈಶ್ವರಮಂಗಲ ಕ್ರಾಸ್‌ನಲ್ಲಿ ಅಂಗಡಿ ಹೊಂದಿರುವ ಸಲಾಂ ಕಾಕಾನವರು ಎಂಬ ಸತ್ಯ ತಿಳಿಯಿತು.

ರೂ.5000 ದಂಡ:
ಸ್ವಚ್ಛ ಭಾರತ್ ಆಂದೋಲನದನ್ವಯ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಲ್ಲೆಂದರಲ್ಲಿ ಬಿಸಾಡಬಾರದು ಎಂಬ ನಿಯಮವಿದ್ದರೂ, ಅಲ್ಲದೇ ಈ ಬಗ್ಗೆ ಗ್ರಾ.ಪಂ ಸಾರ್ವಜನಿಕ ಪ್ರದೇಶದಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಇದನ್ನು ಲೆಕ್ಕಿಸದೇ ಸ್ವಚ್ಛತೆಗೆ ಭಂಗ ಉಂಟು ಮಾಡಿದ ಅಂಗಡಿ ಮಾಲೀಕ ಸಲಾಂ ಕಾಕಾರವರಿಗೆ ಅರಿಯಡ್ಕ ಗ್ರಾಪಂ, ಪಿಡಿಓ ಪದ್ಮಕುಮಾರಿಯವರು ಸ್ಥಳದಲ್ಲಿಯೇ ರೂ.5,000 ದಂಡ ವಿಧಿಸಿ ಶುಲ್ಕವನ್ನು ವಸೂಲಿ ಮಾಡಿಕೊಂಡು ಇನ್ನು ಮುಂದಕ್ಕೆ ಸ್ವಚ್ಛತೆಯ ಬಗ್ಗೆ ಗಮನ ಹರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ಲೋಕೇಶ್ ಚಾಕೋಟೆ, ವಿಜಿತ್ ಕೆರೆಮಾರು, ಪಿಡಿಓ ಪದ್ಮ ಕುಮಾರಿ, ಸಿಬ್ಬಂದಿ ಪ್ರಭಾಕರ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ಸಾರ್ವಜನಿಕರ ಶ್ಲಾಘನೆ:
ಸ್ವಚ್ಛತೆಗಾಗಿ ತಡರಾತ್ರಿಯ ವೇಳೆಯೂ ಕಾರ್ಯಾಚಾರಣೆ ನಡೆಸಿ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯುವವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ದಂಡ ವಿಧಿಸಿದ ಅರಿಯಡ್ಕ ಗ್ರಾ.ಪಂನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸ್ಥಳೀಯರ ಸಹಕಾರದಿಂದ ಯಶಸ್ವಿ ಕಾರ್ಯಾಚರಣೆ-ಪಿಡಿಓ
ಮಾಡ್ನೂರು ಸೇತುವೆ ಬಳಿ ಕಸ ರಾಶಿ ಬಿದ್ದಿರುವ ಬಗ್ಗೆ ಸಾಕಷ್ಟು ಬಾರಿ ಗ್ರಾ.ಪಂಗೆ ದೂರುಗಳು ಬಂದಿತ್ತು, ಈ ಬಗ್ಗೆ ನಾವು ಸ್ಥಳ ಪರಿಶೀಲನೆ ಮಾಡುವಾಗ ಕಸದ ರಾಶಿಯನ್ನು ನೋಡಿ ನಮಗೆ ಬೇಜಾರಾಗಿತ್ತು, ಆದರೆ ಕಸ ಎಸೆಯುವವರು ಯಾರೆಂಬುದು ನಮಗೆ ಗೊತ್ತಾಗಿರಲಿಲ್ಲ, ಆ ಭಾಗದ ಗ್ರಾ.ಪಂ ಸದಸ್ಯರಾದ ವಿಜಿತ್ ಕೆರೆಮಾರುರವರು ಮತ್ತು ಅಲ್ಲಿನ ಸ್ಥಳೀಯ ಜನರ ಸಹಕಾರ ಮತ್ತು ಖಚಿತ ಮಾಹಿತಿಯನ್ವಯ ನಾವು ಕಸ ಎಸೆಯುವವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದೇವೆ, ಕಾವು ಜಂಕ್ಷನ್‌ನಲ್ಲಿ ಅಂಗಡಿ ಹೊಂದಿದ್ದ ಸಲಾಂ ಕಾಕಾ ಎಂಬವರು ಕಸ ಹಾಕುತ್ತಿರುವುದು ಗೊತ್ತಾಗಿ ಅವರಿಗೆ ಸ್ಥಳದಲ್ಲಿಯೇ ರೂ.೫ ಸಾವಿರ ದಂಡ ಹಾಕಿದ್ದೇವೆ, ಕಾರ್ಯಾಚರಣೆಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಹಾಗೂ ಸ್ಥಳೀಯ ಜನರು ಒಳ್ಳೆಯ ಸಹಕಾರ ನೀಡಿದ್ದಾರೆ ಎಂದು ಗ್ರಾ.ಪಂ ಪಿಡಿಓ ಪದ್ಮ ಕುಮಾರಿಯವರು ಹೇಳಿದ್ದಾರೆ.

ಸ್ವಚ್ಛತೆಗೆ ಮೊದಲ ಆದ್ಯತೆ-ಸೌಮ್ಯ ಬಾಲಸುಬ್ರಹ್ಮಣ್ಯ
ಗ್ರಾ.ಪಂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಕಸ ಎಲ್ಲೆಂದರಲ್ಲಿ ಬಿಸಾಡದಂತೆ ಸಾಕಷ್ಟು ಜಾಗೃತಿಯನ್ನು ಮೂಡಿಸಿದ್ದೇವೆ, ಎಲ್ಲಾ ಅಂಗಡಿಯವರಿಗೆ ಕಸ ಹಾಕಲು ಚೀಲಗಳನ್ನು ವಿತರಿಸಿದ್ದೇವೆ ಮತ್ತು ವಿಲೇವಾರಿಗೂ ಕ್ರಮ ವಹಿಸಿದ್ದೇವೆ, ಆದರೂ ಮಾಡ್ನೂರು ಸೇತುವೆ ಬಳಿ ಕಸದ ರಾಶಿ ಬಿದ್ದಿರುವುದು ಗ್ರಾ.ಪಂಗೆ ಸವಾಲಿನ ಪ್ರಶ್ನೆಯಾಗಿತ್ತು, ಇದನ್ನು ಪತ್ತೆ ಹಚ್ಚುವಲ್ಲಿ ನಮ್ಮ ಗ್ರಾ.ಪಂ ತಂಡ ಮತ್ತು ಸ್ಥಳೀಯ ಜನರ ಸಹಕಾರ ಯಶಸ್ವಿಯಾಗಿದೆ, ಈ ಕಾರ್ಯಾಚರಣೆ ಮುಂದಿನ ಸ್ವಚ್ಛಜಾಗೃತಿಗೆ ಮಾದರಿಯಾಗಲಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಸ್ವಚ್ಛತೆಗೆ ಎಲ್ಲರ ಸಹಕಾರ ಅಗತ್ಯ-ವಿಜಿತ್ ಕೆರೆಮಾರು
ಕಳೆದ ಕೆಲ ತಿಂಗಳುಗಳಿಂದ ಮಾಡ್ನೂರು ಸೇತುವೆ ಬಳಿಯ ಕಸದ ರಾಶಿಯ ಬಗ್ಗೆ ಸಾಮಾಜಿಕ ಜಾಲತಾನದಲ್ಲಿ ವ್ಯಾಪಕವಾದ ಚರ್ಚೆ, ಟೀಕೆಗಳು, ದೂರುಗಳು ಬರುತ್ತಿತ್ತು, ಸ್ವಚ್ಛತೆಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿ, ಫಲಕ ಹಾಕಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ, ಹೇಗಾದರೂ ಮಾಡಿ ಕಸ ಎಸೆಯುವವರನ್ನು ಕಂಡುಹಿಡಿಯಬೇಕೆಂಬ ನಮ್ಮ ಪ್ರಯತ್ನ ಯಶಸ್ವಿಯಾಗಿದೆ. ಸಾರ್ವಜನಿಕರು, ಅಂಗಡಿ ಮಾಲೀಕರು ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಬೇಕು, ನಮ್ಮ ಪರಿಸರ ಸ್ವಚ್ಛವಾಗಿರಲು ಗ್ರಾ.ಪಂನೊಂದಿಗೆ ಎಲ್ಲರ ಸಹಕಾರ ಅಗತ್ಯ ಎಂದು ಸ್ಥಳೀಯ ವಾರ್ಡ್ ಸದಸ್ಯ ವಿಜಿತ್ ಕೆರೆಮಾರು ಹೇಳಿದ್ದಾರೆ.

LEAVE A REPLY

Please enter your comment!
Please enter your name here