ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ನಿವಾಸಿಗಳು ಶಾಸಕ ಅಶೋಕ್ ರೈ ಗೆ ದೂರು ನೀಡಿದ್ದಾರೆ.
ಜಿಡೆಕಲ್ಲು ಬಳಿ ಇರುವ ಹತ್ತು ಮನೆಗಳಿಗೆ ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದರೂ ಸಮಸ್ಯೆ ಬಗೆಹರಿದಿಲ್ ಎಂದು ಸಮಸ್ಯೆಯಾದ ಹತ್ತು ಮನೆಯ ಮಹಿಳೆಯರು ಶಾಸಕರ ಕಚೇರಿಗೆ ಬಂದು ವಿಷಯ ಪ್ರಸ್ತಾಪಿಸಿದ್ದಾರೆ. ಕೂಡಲೇ ಸ್ಪಂಧಿಸಿದ ಶಾಸಕರು, ಜಲಸಿರಿ ಇಂಜನಿಯರ್ ಮಾದೇಶ ಅವರನ್ನು ಕಚೇರಿಗೆ ಕರೆಸಿ ನೀರು ಪೂರೈಕೆಯಾಗದೇ ಇರುವ ಬಗ್ಗೆ ವಿವರಣೆ ಪಡೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಜಿನಿಯರ್ ಮಾದೇಶ ಅವರು ಈ ಹತ್ತು ಮನೆಗಳು ಸ್ವಲ್ಪ ಎತ್ತರದಲ್ಲಿರುವ ಕಾರಣ ಪೈಪ್ ಲೈನ್ ಮೂಲಕ ಪೂರೈಕೆಯಾಗುವ ನೀರಿನಲ್ಲಿ ವೇಗ ಕಡಿಮೆ ಇದ್ದು ಅಲ್ಲಿನ ಟ್ಯಾಂಕ್ ತುಂಬುತ್ತಿಲ್ಲ ಈ ಕಾರಣಕ್ಕೆ ಅಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.
ಮನೆ ಎತ್ತರದಲ್ಲಿರಲಿ , ತಗ್ಗಿನಲ್ಲಿರಲಿ ನೀರು ಪೂರೈಕೆ ಮಾಡಬೇಕಾದ್ದು ನಿಮ್ಮ ಜವಾಬ್ದಾರಿ, ಅಲ್ಲಿಗೆ ಯಾವ ರೀತಿ ನೀರು ಪೂರೈಕೆ ಮಾಡಬೇಕೋ ಹಾಗೇ ಮಾಡಿ, ಅಲ್ಲಿಂದ ಇನ್ನು ಮುಂದೆ ನೀರಿಲ್ಲ ಎಂಬ ದೂರು ಬರದಂತೆ ಮಾಡಿ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಎಂದು ಶಾಸಕರು ಇಂಜನಿಯರ್ಗೆ ಸೂಚನೆ ನೀಡಿದರು.