ಸಂಪ್ಯ ನವಚೇತನಾ ಯುವಕ ಮಂಡಲದಿಂದ 40ನೇ ವರ್ಷದ ಗಣೇಶೋತ್ಸವ

0

ಪುತ್ತೂರು:ಸಂಪ್ಯ ನವಚೇತನಾ ಯುವಕ ಮಂಡಲದ ವತಿಯಿಂದ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31 ಹಾಗೂ ಸೆ.1ರಂದು ವಿವಿಧ ಧಾರ್ಮಿಕ, ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಬಳಿಕ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಧಾರ್ಮಿಕ ಸಭಾ ಕಾರ್ಯಕ್ರಮ:

ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಸುಳ್ಯ ಎನ್‌ಎಂಸಿ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಮಾತನಾಡಿ, ಗಣಪತಿಯ ದೇಹದ ಪ್ರತಿಯೊಂದು ಅಂಗಗಳು ಬದುಕಿಗೆ ಒಂದೊಂದು ಸಂದೇಶ ನೀಡುತ್ತಿದೆ. ಅರ್ಥಮಾಡಿ ಸ್ವೀಕರಿಸಿ ಮುನ್ನಡೆದಾಗ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಏಕ ಮನಸ್ಸಿನಿಂದ ಮುನ್ನಡೆದಾಗ ಸದೃಢ ಸಮಾಜವಾಗಿ ಮುನ್ನಡೆಯಲು ಸಾಧ್ಯ. ಸಮಾಜದಲ್ಲಿರುವ ಜಾತಿ, ಸಾಮಾಜಿಕ ಪಿಡುಗುಗಳ ಅಡ್ಡಗೋಡೆಯಿಂದ ಹೊರಬರಬೇಕು ಎಂದರು.

ಮುಖ್ಯ ಅತಿಥಿ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಯುವಕ ಮಂಡಲದ ಕಾರ್ಯಕ್ರಮಗಳ ಜೊತೆಗೆ ಗಣೇಶೋತ್ಸವ ಆಚರಿಸುವ ಮೂಲಕ ಕಳೆದ 40 ವರ್ಷಗಳಲ್ಲಿ ಧಾರ್ಮಿಕ ಪರಂಪರೆಯನ್ನು ಉಳಿಸುವ ಕಾರ್ಯವನ್ನು ನವಚೇತನ ಯುವಕ ಮಂಡಲದ ಮೂಲಕ ನಡೆಯುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಅನೇಕ ರೋಗಗಳು ಹಿಂದು ಸಮಾಜವನ್ನು ಬಾಧಿಸುತ್ತಿದೆ. ಇದನ್ನು ಪ್ರಮುಖವಾಗಿ ನಿವಾರಿಸಬೇಕಾಗಿದೆ. ನಮ್ಮ ಸಂಘಟನೆ ಧಾರ್ಮಿಕ ಹಬ್ಬಗಳಿಗೆ ಸೀಮಿತವಾದರೆ ಇದು ಸಾಧ್ಯವಿಲ್ಲ. ಸಮಾಜದಲ್ಲಿರುವ ಮೇಲು ಕೀಳು ಭಾವನೆಗಳನ್ನು ತೊಡೆದುಹಾಕಬೇಕು. ಸಾಮಾಜಿಕ ಜೀವನದಲ್ಲಿ ನಮ್ಮೊಳಗೆ ವ್ಯವಹರಿಸಿದಾಗ ಆರ್ಥಿಕ ಸದೃಡತೆಯೊಂದಿಗೆ ಸಮಾಜಕ್ಕೆ ಬಲಬರಲು ಸಾಧ್ಯ ಎಂದರು.

ಮುಕ್ರಂಪಾಡಿ ಸಾಯಿ ಭಗವಾನ್ ಪ್ಯೂಯೆಲ್ಸ್ ಮ್ಹಾಲಕ ದಾಳಿಂಬ ಸೂರ್ಯನಾರಾಯಣ ರಾವ್ ಹಾಗೂ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಸಂದರ್ಭೋಚಿತವಾಗಿ ಮಾತನಾಡಿದರು.

ಸನ್ಮಾನ;

ಯಕ್ಷಗಾನ ಕ್ಷೇತ್ರದ ವಿಶಿಷ್ಟ ಸಾಧಕ ಪೂಕಳ ಲಕ್ಷ್ಮೀ ನಾರಾಯಣ ಭಟ್, ಪದವಿ ವಿದ್ಯಾಭ್ಯಾಸದಲ್ಲಿ ವಿಶಿಷ್ಠ ಸಾಧನೆ ಮಾಡಿದ ನಿರೀಷ್ಮಾ ಎನ್.ಸುವರ್ಣ, ಎಸ್.ಎಸ್.ಎಲ್.ಸಿ ಸಾಧಕರಾದ ರಕ್ಷಿತಾ, ಪ್ರಣವಿ, ತನಿಷಾ ರೈ, ಮೈಥಿಲಿ ಆರ್.ಎಸ್., ಹರ್ಷಿತಾ ರೈ, ತನುಷ್, ಕ್ರೀಡಾ ಕ್ಷೇತ್ರದ ಯಶಸ್ವಿನಿ, ಪೂರ್ಣಲಕ್ಷ್ಮೀ, ಮೈಥಿಲಿ ಆರ್.ಎಸ್., ಆಜ್ಞಾ ರೈ, ಶ್ರಾವ್ಯರವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವ ಅನ್ನದಾನಿಗಳಾದ ಚಂದ್ರಾವತಿ ರಮಾನಾಥ ಗೌಡ ಬೈಲಾಡಿ, ಐತ್ತಪ್ಪ ರೈ ಬೈಲಾಡಿ, ಸ್ಥಳದಾನಿ ಚಂದ್ರಾವತಿ ಉಗ್ಗಪ್ಪ ಗೌಡ ರವರನ್ನು ಗೌರವಿಸಲಾಯಿತು.

ಮೈಥಿಲಿ ಹಾಗೂ ಶಾಲ್ಮಿಲಿ ಪ್ರಾರ್ಥಿಸಿದರು. ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಎಸ್.ಕೆ ವರದಿ ವಾಚಿಸಿದರು. ಪ್ರವೀಣ್ ಉದಯಗಿರಿ ಸನ್ಮಾನಿತ ಪರಿಚಯ ಮಾಡಿದರು. ರಾಜೇಶ್ ರೈ ಬಹುಮಾನ ವಿಜೇತರ ಪಟ್ಟಿ ಓದಿದರು. ಜತೆಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಉದಯ ಕುಮಾರ್ ರೈ ಎಸ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮಂಜಪ್ಪ ಗೌಡ ಬೈಲಾಡಿ, ಕೋಶಾಧಿಕಾರಿ ಜಯಕರ ಬೈಲಾಡಿ, ಸದಸ್ಯರಾದ ರವಿನಾಥ ಬೈಲಾಡಿ, ಲಕ್ಷ್ಮಣ್ ಬೈಲಾಡಿ, ಮಾಜಿ ಅಧ್ಯಕ್ಷ ನಾಗೇಶ್ ಸಂಪ್ಯ ಅತಿಥಿಗಳನ್ನು ಶಾಲು ಹಾಕಿ, ಸ್ಮರಣಿಕೆ ನೀಡಿ ಸ್ವಾಗತಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರದವರಿಂದ ಭಜನ್ ಸಂದ್ಯಾ-ವಿಭಿನ್ನ ಶೈಲಿಯ ಭಜನ್ ಪ್ರಸ್ತುತಿ ಮತ್ತು ಭಕ್ತಿ ಭಾವಾಂಜಲಿ ನಡೆಯಿತು.

ಸೆ.1 ಶೋಭಾಯಾತ್ರೆ:

ಸೆ.1ರಂದು ಬೆಳಿಗ್ಗೆ ಗಣಹೋಮ, ಶ್ರೀಸತ್ಯನಾರಾಯಣ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3 ಗಂಟೆಯಿಂದ ಶ್ರೀಗಣೇಶನ ವಿಗ್ರಹ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯತ್ರೆಯು ಸಂಪ್ಯ ದೇವಸ್ಥಾನದಿಂದ ಹೊರಟು ಮುಕ್ರಂಪಾಡಿ, ಮೊಟ್ಟೆತ್ತಡ್ಕ ಮಾರ್ಗವಾಗಿ ಸಂಚರಿಸಿ, ಸಂಪ್ಯಕ್ಕೆ ಹಿಂತಿರುಗಿ ಸಂಪ್ಯ ಕೆರೆಯಲ್ಲಿ ಗಣೇಶನ ವಿಗ್ರಹದ ಜಲಸ್ಥಂಬನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here