ಕೊಕ್ಕಡ: ಮಹಿಳೆ ಸಂಶಯಾಸ್ಪದ ಸಾವು ಪ್ರಕರಣ ಕೊಲೆ ಆರೋಪ-ಪತಿ ಪೊಲೀಸ್ ವಶ

0

ನೆಲ್ಯಾಡಿ: ನಾಲ್ಕು ದಿನದ ಹಿಂದೆ ಇಲ್ಲಿಗೆ ಸಮೀಪದ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ನಡೆದ ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣ ಕೊಲೆ ಎಂದು ದೃಢಪಟ್ಟಿದ್ದು, ಕೊಲೆ ಆರೋಪದಲ್ಲಿ ಮಹಿಳೆಯ ಪತಿಯನ್ನು ಧರ್ಮಸ್ಥಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಆರೋಪಿ ಗಣೇಶ್ 

ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಮೋಹಿನಿ(36ವ.)ಮೃತಪಟ್ಟವರಾಗಿದ್ದು ಕೊಲೆ ಆರೋಪದಲ್ಲಿ ಆಕೆಯ ಪತಿ ಗಣೇಶ್(48ವ.)ಎಂಬವರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತ: ಶನಿವಾರಸಂತೆ ನಿವಾಸಿಯಾಗಿರುವ ಗಣೇಶ್‌ರವರು ಸುಳ್ಯ ತಾಲೂಕು ಕೊಲ್ಲಮೊಗ್ರುವಿನ ಮೋಹಿನಿಯವರನ್ನು 8 ವರ್ಷದ ಹಿಂದೆ ಮದುವೆಯಾಗಿದ್ದು ಮದುವೆಯಾದ ಬಳಿಕ ಪತಿ, ಪತ್ನಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ವಾಸವಾಗಿದ್ದರು. ಗಣೇಶ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು ಈ ದಂಪತಿಗೆ 6 ವರ್ಷದ ಗಂಡು ಮಗನಿದ್ದಾನೆ. ಮೋಹಿನಿಯವರು ಮೂರ್ಛೆ ರೋಗ ಹಾಗೂ ಪಾರ್ಶ್ವವಾಯು ಪೀಡಿತರಾಗಿದ್ದು ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಅಲ್ಲದೇ ಇಬ್ಬರಿಗೂ ವಿಪರೀತ ಕುಡಿತದ ಚಟವಿದ್ದು ಇಬ್ಬರ ನಡುವೆ ಮನೆಯಲ್ಲಿ ಆಗಾಗ ಜಗಳ ನಡೆಯುತಿತ್ತು ಎಂದು ಹೇಳಲಾಗಿದೆ.

ಆ.30ರಂದು ಬೆಳಿಗ್ಗೆ ಮಹಿಳೆ ಮನೆಯಲ್ಲಿಯೇ ಮೃತಪಟ್ಟಿದ್ದು ಆಕೆಯ ಹಣೆಯ ಬಳಿ ಗಾಯವಾಗಿ ರಕ್ತ ಬಂದಿತ್ತು. ಈ ಬಗ್ಗೆ ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲರವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಇದೀಗ ಮಹಿಳೆ ಸಾವು ಕೊಲೆ ಎಂದು ದೃಢಪಟ್ಟಿದ್ದು ಕೊಲೆ ಆರೋಪದಲ್ಲಿ ಮಹಿಳೆಯ ಪತಿ ಗಣೇಶ್‌ನನ್ನು ಧರ್ಮಸ್ಥಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮಗು ಪಾಲನಾ ಕೇಂದ್ರಕ್ಕೆ: ಗಣೇಶ್ ಹಾಗೂ ಮೋಹಿನಿ ದಂಪತಿಯ ಕಲಹದಿಂದಾಗಿ ಅವರ 6 ವರ್ಷದ ಮಗು ಅನಾಥವಾಗಿದ್ದು ಈ ಮಗುವನ್ನು ಬೆಳ್ತಂಗಡಿಯ ಮಕ್ಕಳ ಪಾಲನಾಕೇಂದ್ರಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಗಣೇಶ್‌ರನ್ನು ಮದುವೆಯಾದ ಬಳಿಕ ಮೋಹಿನಿಯವರು ತಮ್ಮ ಮನೆಯವರ ಸಂಪರ್ಕ ಕಡಿದುಕೊಂಡಿದ್ದರು. ಶನಿವಾರಸಂತೆ ನಿವಾಸಿಯಾಗಿರುವ ಗಣೇಶ್‌ನ ಮನೆಯವರೂ ಆತನ ಸಂಪರ್ಕದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಈ ದಂಪತಿಯ 6 ವರ್ಷದ ಮಗುವಿನ ಪಾಲನೆಗೆ ಯಾರೂ ಮುಂದೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಮಗುವನ್ನು ಮಹಿಳೆ ಮೃತಪಟ್ಟಿದ್ದ ಆ.30ರಂದೇ ಬೆಳ್ತಂಗಡಿಯ ಪಾಲನಾ ಕೇಂದ್ರಕ್ಕೆ ಒಪ್ಪಿಸಿದ್ದರು.

ಕೊಕ್ಕಡ ಮಹಿಳೆ ಮೃತ್ಯು- ಪತಿಯಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟಿರುವ ಶಂಕೆ

LEAVE A REPLY

Please enter your comment!
Please enter your name here