ಪುಣಚ : ಆರ್.ಕೆ. ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಸೆ.೧೧ ರಂದು ಜರುಗಿತು.
ಉದ್ಘಾಟನೆಯನ್ನು ಶ್ರೀದೇವಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಗಣಪತಿ ಭಟ್ ನೀರ್ಕಜೆ ನೆರವೇರಿಸಿ ಮಕ್ಕಳ ಕುಣಿತ ಭಜನಾ ತಂಡವು ಯಶಸ್ಸನ್ನು ಗಳಿಸುತ್ತಾ ಸಾಗಲಿ ಎಂದು ಹಾರೈಸಿದರು. ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ದೇವಿ ಪ್ರಸಾದ್ ಕಲ್ಲಾಜೆ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಸಹ ಶಿಕ್ಷಕ ಕೊಟ್ರೇಶ್ ಅಗ್ರಾಳ ಹಾಗೂ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಶುಭ ಹಾರೈಸಿ ಮಕ್ಕಳನ್ನು ಹಾಗೂ ಕಾರ್ಯಕ್ರಮದ ಸಂಘಟಕರನ್ನು ಪೋಷಕರನ್ನು ಅಭಿನಂದಿಸಿದರು. ಕುಣಿತ ಭಜನಾ ತರಗತಿಯ ನಿರ್ದೇಶಕರಾದ ರಾಜೇಶ್ ವಿಟ್ಲ ಭಜನೆ ಹಾಗೂ ಕುಣಿತ ಭಜನೆಯ ಮಹತ್ವವನ್ನು ವಿವರಿಸಿ ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವಂತೆ ಕರೆ ನೀಡಿದರು. ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಈ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಒಂದು ಒಳ್ಳೆಯ ತಂಡ ನಿರ್ಮಾಣವಾಗಬೇಕೆಂದು ಕೇಳಿಕೊಂಡರು. ಶ್ರೀದೇವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಜನಿ ಮಾತಾಜಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶ್ರೀದೇವಿ ಪ್ರಾಥಮಿಕ ಶಾಲೆಯ ಶ್ವೇತಾ ಮಾತಾಜಿ ವಂದಿಸಿದರು. ಕಾರ್ಯಕ್ರಮದ ಸಂಘಟಕರಾದ ಪವಿತ್ರ ಹರೀಶ್, ಭವಾನಿ ಗಣೇಶ್ ಹಾಗೂ ಮಕ್ಕಳ ಹೆತ್ತವರು ಸಹಕರಿಸಿದರು.