ಕೊಯಿಲ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವಿಫುಲ ಅವಕಾಶಗಳು ಸಿಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಮಕ್ಕಳು ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಹೇಳಿದರು.
ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ,ಸಮೂಹ ಸಂಪನ್ಮೂಲ ಕೇಂದ್ರ ರಾಮಕುಂಜ ಇದರ ಸಂಯುಕ್ತ ಆಶ್ರಯದಲ್ಲಿ ಕಡಬ ತಾಲೂಕು ಕೊಯಿಲ ಗ್ರಾಮದ ಕೆ. ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.13ರಂದು ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಕೇಶವ ಅಮೈ ಮಾತನಾಡಿ, ಕೋವಿಡ್ ಕಾರಣದಿಂದ ಶೈಕ್ಷಣಿಕ ಕ್ಷೇತ್ರ ನಲುಗಿ ಹೋಗಿತ್ತು. ಮಕ್ಕಳು ಬೌತಿಕ ಶಿಕ್ಷಣದಿಂದ ಬಹಳಷ್ಟು ಸಮಯ ದೂರವಾಗುವ ಸಂಕಷ್ಟ ಎದುರಾಗಿತ್ತು. ಇದೀಗ ಮತ್ತೆ ಶೈಕ್ಷಣಿಕ ಚಟುವಟಿಕೆಗಳು ತೆರೆದುಕೊಂಡಿದೆ. ವಿದ್ಯಾರ್ಥಿಯ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿಗಳು ವೇದಿಕೆಯಾಗುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸುವಂತೆ ಶಿಕ್ಷಕರು, ಪೋಷಕರು ಪ್ರೇರೆಪಿಸಬೇಕು ಎಂದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಜೊಹರಾ, ಪುಷ್ಪಾ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಪುತ್ಯೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ರಾಜ್ಯ ಸರ್ಕಾರಿ ನೌಕರರ ಸಂಘದ ನಾಮನಿರ್ದೇಶಿತ ಸದಸ್ಯೆ ಹೇಮಲತಾ ಬಾಕಿಲ, ಸಿಆರ್‌ಪಿ ಮಹೇಶ್, ನಿವೃತ್ತ ಮುಖ್ಯಗುರು ಕುಶಾಲಪ್ಪ ಗೌಡ ಶುಭಹಾರೈಸಿದರು. ಮುಖ್ಯ ಶಿಕ್ಷಕಿ ಸುಜಾತ ಸ್ವಾಗತಿಸಿದರು. ಶಿಕ್ಷಕಿ ಅನುಪಮ ಕೆ ಎನ್ ವಂದಿಸಿದರು. ಶಿಕ್ಷಕಿ ರೇಖಾ ಪಿ, ಶಿಕ್ಷಕ ವೆಂಕಟೇಶ್ ನಿರೂಪಿಸಿದರು.