ದಾರಂದಕುಕ್ಕು: ಮಾಜಿ ಸೈನಿಕನ ಮನೆ ಗೇಟ್‌ನ ಎದುರು ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಆರೋಪ

0

  • ನಾವು ಸರಕಾರಿ ಸ್ಥಳದಲ್ಲೇ ಬಸ್ ತಂಗುದಾಣ ನಿರ್ಮಿಸುತ್ತಿದ್ದೇವೆ-ಗ್ರಾ.ಪಂ. ಜಯ
  • ಪಿಡಬ್ಲ್ಯೂಡಿ ಎನ್‌ಒಸಿ ಸಿಗುವ ತನಕ ಕಾಮಗಾರಿ ನಿಲ್ಲಿಸಲಿ-ಮನೆಯವರ ಆಗ್ರಹ

ದಾರಂದಕುಕ್ಕು: ಬಸ್ ತಂಗುದಾಣ ಸ್ಥಳದ ವಿವಾದ

`ಕೋರ್ಟ್, ಕೇಸ್ ಯಾಕೆ ಗೊಂದಲ ಮುಗಿಸಿಕೊಳ್ಳಿ’
 ದೂರುದಾರರೊಂದಿಗಿನ ಸಂಧಾನ ಮಾತುಕತೆ ವಿಫಲ

ಪುತ್ತೂರು:ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಯ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕುವಿನಲ್ಲಿ ನಮ್ಮ ಮನೆಯ ಗೇಟ್‌ನ ಮುಂದೆಯೇ ಬಸ್ ತಂಗುದಾಣ ನಿರ್ಮಾಣ ಮಾಡುತ್ತಿರುವುದಲ್ಲದೆ ಲೋಕೋಪಯೋಗಿ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಲಭ್ಯವಾಗುವ ತನಕ ಕಾಮಗಾರಿ ನಡೆಸಬಾರದೆಂಬ ನೋಟೀಸ್ ಜಾರಿಯಲ್ಲಿದ್ದರೂ ಕಾಮಗಾರಿ ನಡೆಸಲಾಗುತ್ತಿದೆ ಎಂದು ಮಾಜಿ ಸೈನಿಕರೋರ್ವರ ದೂರು, ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರ ನಿಯೋಗವು ಬನ್ನೂರು ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಮಾತುಕತೆ ನಡೆಸಿದೆ.ಸಂಧಾನ ಕುರಿತು ದೂರುದಾರರೊಂದಿಗೆ ನಿಯೋಗ ಮಾತುಕತೆ ನಡೆಸಿದರೂ ಅದು ವಿಫಲವಾದ ಘಟನೆ ಸೆ.೧೪ರಂದು ನಡೆದಿದೆ.ಸರ್ವೆ ಇಲಾಖೆಯವರು ಗುರುತು ಮಾಡಿರುವ ಸ್ಥಳದಲ್ಲೇ ಬಸ್ ತಂಗುದಾಣ ನಿರ್ಮಾಣವಾಗಬೇಕು ಎಂದು ಆಗ್ರಹಿಸಿ ಸಂಜೆ ವೇಳೆಗೆ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಮಾಜಿ ಸೈನಿಕ ಸುನಿಲ್ ರೇಗೋ ಅವರ ತಾಯಿ ಹಿಲ್ಡಾ ರೇಗೋ ಅವರ ಹೆಸರಿನಲ್ಲಿರುವ ಸ್ಥಳದ ಗೇಟ್‌ನ ಮುಂದೆ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘಕ್ಕೆ ದೂರು ನೀಡಲಾಗಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಚೆರಿಯನ್, ಗೌರವಾಧ್ಯಕ್ಷ ಮ್ಯಾಥ್ಯೂ, ಉಪಾಧ್ಯಕ್ಷ ಸೈಮನ್ ಅವರ ನಿಯೋಗ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲೆಂದು ಬಂದಿದ್ದರು.ದೂರು ನೀಡುವ ಮೊದಲು ಸ್ಥಳ ಪರಿಶೀಲನೆಗೆಂದು ಬಂದಿದ್ದ ನಿಯೋಗ ದಾರಂದಕುಕ್ಕು ಬಸ್ ತಂಗುದಾಣ ನಿರ್ಮಾಣದ ಸ್ಥಳಕ್ಕೆ ಬಂದಿದ್ದರು.ಬನ್ನೂರು ಗ್ರಾ.ಪಂ.ಅಧ್ಯಕ್ಷೆ ಜಯ ಮತ್ತು ಸದಸ್ಯರಾದ ಶೀನಪ್ಪ ಕುಲಾಲ್ ಅವರು ಮಾಜಿ ಸೈನಿಕರ ಜೊತೆ ಮಾತುಕತೆ ನಡೆಸಿದರು.ಈ ಸಂದರ್ಭ ವಿಷಯ ಅರಿತ ಮಾಜಿ ಸೈನಿಕರು ದೂರುದಾರರೊಂದಿಗೆ ಮಾತುಕತೆ ನಡೆಸಿದರು.ಅದರೆ ದೂರುದಾರರರು ಗೇಟ್‌ನ ಎದುರಿನ ಬಸ್ ತಂಗುದಾಣದ ವಿಚಾರಕ್ಕೂ ಮೊದಲು ಪಿಡಬ್ಲ್ಯೂಡಿನಿಂದ ನಿರಾಕ್ಷೇಪಣ ಪತ್ರ ಸಿಗುವ ತನಕ ಕಾಮಗಾರಿ ನಡೆಸುವಂತಿಲ್ಲ ಎಂಬ ನೋಟೀಸ್‌ಗೆ ಬೆಲೆ ಕೊಡಲಿ ಎಂದು ಪಟ್ಟು ಹಿಡಿದರಲ್ಲದೆ ನಾವು ಇದಕ್ಕೆ ಸರಿಯಾದ ರೀತಿಯಲ್ಲೇ ಉತ್ತರಿಸಲಿದ್ದೇವೆ ಎಂದರು.

ನಾವು ಸರಕಾರಿ ಜಾಗದಲ್ಲೇ ಬಸ್ ತಂಗುದಾಣ ನಿರ್ಮಿಸುತ್ತಿದ್ದೇವೆ: ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಅವರು ಮಾತನಾಡಿ ಬಹು ಜನರ ಬೇಡಿಕೆಯಂತೆ ಶಾಸಕರ ಅನುದಾನದಲ್ಲಿ ನಾವು ಸರಕಾರಿ ಜಾಗದಲ್ಲೇ ಬಸ್ ತಂಗುದಾಣ ನಿರ್ಮಿಸುತ್ತಿದ್ದೇವೆ.ಸರ್ವೆ ಇಲಾಖೆಯಿಂದ ಎರಡೆರಡು ಬಾರಿ ಅಳತೆ ಮಾಡಿಸಿ,ಸರಕಾರಿ ಜಾಗ ಎಂದು ನಿಗದಿಯಾದ ಬಳಿಕವೇ ಕಾಮಗಾರಿ ನಡೆಸಲು ಮುಂದಾಗಿದ್ದು.ಆದರೆ ಕಾಮಗಾರಿ ನಡೆಸದಂತೆ ನೋಟೀಸ್ ನೀಡಿದ್ದು ನಾವಲ್ಲ ಎಂದರಲ್ಲದೆ,ಪ್ರತಿ ಬಾರಿಯೂ ಇಲ್ಲಿ ಬಸ್ ನಿಲ್ದಾಣಕ್ಕೆ ಮುಂದಾದಾಗ ಪಟ್ಟಾ ಸ್ಥಳದವರು ನಮಗೆ ತೊಂದರೆ ಕೊಡುತ್ತಿದ್ದಾರೆ.ಆದರೆ ನಾವು ಇಲ್ಲಿ ನ್ಯಾಯ ಪ್ರಕಾರವೇ ಕಾಮಗಾರಿ ನಡೆಸುತ್ತಿzವೆ ಎಂದರು.ಸದಸ್ಯ ಶೀನಪ್ಪ ಕುಲಾಲ್ ಧ್ವನಿಗೂಡಿಸಿದರು.

ಕೋರ್ಟು ಕೇಸು ಯಾಕೆ?-ಗೊಂದಲ ಮುಗಿಸಿ: ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸೈಮನ್ ಅವರು ದೂರುದಾರರ ಪುತ್ರ ಮಾಜಿ ಸೈನಿಕ ಸುನಿಲ್ ರೇಗೋ ಅವರಲ್ಲಿ ಮಾತನಾಡಿ, ಇಲ್ಲಿ ರಸ್ತೆ ಅಗಲೀಕರಣ ಆಗುವಾಗ ಪಟ್ಟಾ ಸ್ಥಳವೂ ಹೋಗುತ್ತದೆ.ಆಗ ಇಲ್ಲಿ ನಿರ್ಮಾಣ ಆದ ಬಸ್ ತಂಗುದಾಣವನ್ನೂ ತೆರವು ಮಾಡಬೇಕಾಗುತ್ತದೆ.ಹಾಗಾಗಿ ಸುಮ್ಮನೆ ಕೋರ್ಟು ಕೇಸು ಯಾಕೆ, ಬಸ್ ತಂಗುದಾಣದ ಪಕ್ಕದಲ್ಲೇ ರಸ್ತೆ ನಿರ್ಮಾಣ ಮಾಡಿಕೊಳ್ಳಿ ಎಂದರು.ಇನ್ನೋರ್ವ ಮಾಜಿ ಸೈನಿಕರು ಮಾತನಾಡಿ, ಸ್ಥಳೀಯವಾಗಿ ನಿಂತು ತೀರ್ಮಾನ ಮಾಡಿದರೆ ಉತ್ತಮ ಎಂದರು.ಈ ಸಂದರ್ಬದಲ್ಲಿ ಬಸ್ ನಿಲ್ದಾಣದ ಪಕ್ಕದಲ್ಲಿ ರಸ್ತೆ ಮಾಡಲು ನಮ್ಮ ಅಭ್ಯಂತರವಿಲ್ಲ ಎಂದು ಗ್ರಾ.ಪಂ ಅಧ್ಯಕ್ಷರು ತಿಳಿಸಿದರು.ಆದರೆ ಈ ಮಾತುಕತೆ ವಿಫಲವಾಯಿತು.

ನೋಟೀಸ್‌ಗೆ ಬೆಲೆ ಕೊಟ್ಟು ಕಾಮಗಾರಿ ನಿಲ್ಲಿಸಲಿ: ಬನ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಲೋಕೋಪಯೋಗಿ ಇಲಾಖೆ ಸೆ.೧೨ಕ್ಕೆ ನೋಟೀಸ್ ಜಾರಿ ಮಾಡಿದ್ದು,ಅದರಲ್ಲಿ ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದಾರಂದಕುಕ್ಕು ಎಂಬಲ್ಲಿ ಬಸ್‌ಬೇ/ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಸೆ.೧೫ರಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಪರಿವೀಕ್ಷಣೆಗೆ ಬರಲಿದ್ದಾರೆ.ಈ ಸಂದರ್ಭ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಪಸ್ಥಿತರಿರಬೇಕು.ಜೊತೆಗೆ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಲಭ್ಯವಾಗುವ ತನಕ ಯಾವುದೇ ಕಾರಣಕ್ಕೂ ಬಸ್ ಬೇ/ಬಸ್ ನಿಲ್ದಾಣದ ನಿರ್ಮಾಣ ಮಾಡದಂತೆ ತಿಳಿಸಲಾಗಿದೆ.ಆದರೂ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸುನಿಲ್ ರೇಗೋ ಅವರು ಅಳಲು ತೋಡಿಕೊಂಡರು.

ಸಂಧಾನ ಮಾತುಕತೆ ವಿಫಲ: ನಿರ್ಮಾಣಗೊಳ್ಳುತ್ತಿರುವ ಬಸ್ ತಂಗುದಾಣದ ಹಿಂಬದಿ ಈ ಹಿಂದೆ ಗೇಟ್ ಇರಲಿಲ್ಲ.ಆದರೆ ಈಗ ಹೊಸ ಗೇಟ್ ಅಳವಡಿಸಲಾಗಿದೆ.ಆ ಗೇಟ್ ಬದಲು ಪಕ್ಕದಲ್ಲಿ ರಸ್ತೆ ಮಾಡುವ ಅವಕಾಶವಿದೆ.ಅದನ್ನು ಬಳಸಿಕೊಳ್ಳಬಹುದು ಎಂದು ಗ್ರಾ.ಪಂ ಅಧ್ಯಕ್ಷರು,ಸದಸ್ಯರು ಪಂಚಾಯತ್ ಮಾಜಿ ಸೈನಿಕರಿಗೆ ಮನವರಿಕೆ ಮಾಡಿದರು.ಇದಕ್ಕೆ ಸಹಮತ ವ್ಯಕ್ತಪಡಿಸಿದ ಮಾಜಿ ಸೈನಿಕರು ದೂರುದಾರರ ಜೊತೆ ಅವರ ಮನೆಯಲ್ಲಿ ಮಾತುಕತೆ ನಡೆಸಿದರು.ಆದರೆ ಮಾತುಕತೆ ವಿಫಲವಾಗಿದೆ ಎಂದು ತಿಳಿದು ಬಂದಿದೆ.ಮಾಜಿ ಸೈನಿಕರ ಸಂಘದ ಗೋಪಾಲ್, ವಾಸುದೇವ, ಪ್ರಭಾಕರ್, ವೀರನಾರಿ ಗೀತಾ, ಮೋಹನ್ ಶೆಟ್ಟಿ, ಚಂದಪ್ಪ ಅವರು ಉಪಸ್ಥಿತರಿದ್ದರು.ಗ್ರಾ.ಪಂ ಸದಸ್ಯರಾದ ರಾಘವೇಂದ್ರ, ತಿಮ್ಮಪ್ಪ, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಬಿಜೆಪಿ ಮಹಾಶಕ್ತಿ ಕೇಂದ್ರದ ನಾಗೇಶ್ ಟಿ.ಎಸ್, ಊರಿನ ಸ್ಥಳೀಯರು ಉಪಸ್ಥಿತರಿದ್ದರು.

ನೋಟೀಸ್‌ನಲ್ಲೇನಿದೆ…

ಬನ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಲೋಕೋಪಯೋಗಿ ಇಲಾಖೆ ಸೆ.೧೨ಕ್ಕೆ ನೋಟೀಸ್ ಜಾರಿ ಮಾಡಿದ್ದು, ಅದರಲ್ಲಿ, ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದಾರಂದಕುಕ್ಕು ಎಂಬಲ್ಲಿ ಬಸ್‌ಬೇ/ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಹಿಲ್ಡಾ ರೇಗೋ, ದಾರಂದಕುಕ್ಕು ಮನೆ ಚಿಕ್ಕಮುಡ್ನೂರು ಅವರ ಆಕ್ಷೇಪಣಾ ಪತ್ರ ಕುರಿತು ಉಲ್ಲೇಖಿಸಲಾಗಿದೆ.ಸೆ.೧೫ರಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಪರಿವೀಕ್ಷಣೆಗೆ ಬರಲಿದ್ದಾರೆ.ಈ ಸಂದರ್ಭ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಪಸ್ಥಿತರಿರಬೇಕು. ಜೊತೆಗೆ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಲಭ್ಯವಾಗುವ ತನಕ ಯಾವುದೇ ಕಾರಣಕ್ಕೂ ಬಸ್ ಬೇ/ಬಸ್ ನಿಲ್ದಾಣದ ನಿರ್ಮಾಣ ಮಾಡದಂತೆ ತಿಳಿಸಲಾಗಿದೆ.ಜೊತೆಗೆ ಹಿಲ್ಡಾ ರೇಗೋ ಅವರು ಕೂಡಾ ಜಮೀನಿನ ಎಲ್ಲಾ ದಾಖಲೆಗಳೊಂದಿಗೆ ಸ್ಥಳದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ.

 

LEAVE A REPLY

Please enter your comment!
Please enter your name here