ಬಾಲ್ಯವಿವಾಹ ತಡೆ ಸಾರ್ವಜನಿಕರದ್ದೂ ಜವಾಬ್ದಾರಿ

0

  •  ವಿಶೇಷ ಆದೇಶದ ಹೊರಡಿಸುವುದಾಗಿ ತಿಳಿಸಿದ ತಹಸೀಲ್ದಾರ್
  • ನಿಸರ್ಗಪ್ರಿಯ ಅಧ್ಯಕ್ಷತೆಯಲ್ಲಿ  ಮಹಿಳಾ-ಮಕ್ಕಳ ಸಮಿತಿಗಳ ಪ್ರಗತಿಪರಿಶೀಲನಾ ಸಭೆ

ಪುತ್ತೂರು: ಬಾಲ್ಯ ವಿವಾಹದಂತಹ ಪ್ರಕರಣಗಳು ನಡೆದಾಗ ಸಾರ್ವಜನಿಕರು, ಇದು ತಮ್ಮ ಕರ್ತವ್ಯವಲ್ಲ ಎನ್ನುವಂತಿಲ್ಲ. ಅಽಕಾರಿಗಳು, ಸಮಿತಿ ಸದಸ್ಯರ ಜೊತೆ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ ನಡೆಸಬೇಕಾದ ಅಗತ್ಯ ಇದೆ. ಇದಕ್ಕೆ ಪೂರಕವಾಗಿ ವಿಶೇಷ ಆದೇಶವನ್ನು ಹೊರಡಿಸಲಾಗುವುದು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಹೇಳಿದರು.

ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಪಟ್ಟ 12 ಸಮಿತಿಗಳ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗೊಂಡಾಗ ಮಾತನಾಡಿದ ತಹಸೀಲ್ದಾರ್, ಬಾಲ್ಯವಿವಾಹ ಸಾಮಾಜಿಕ ಪಿಡುಗು. ಇದನ್ನು ತಡೆಯುವುದು ಇಲಾಖೆಗಳು ಹಾಗೂ ಸಮಿತಿಗಳದ್ದಷ್ಟೇ ಜವಾಬ್ದಾರಿಯಲ್ಲ. ಸಾರ್ವಜನಿಕರೂ ಕೈ ಜೋಡಿಸಬೇಕು. ಸಾರ್ವಜನಿಕರು ತಮ್ಮ ಜವಾಬ್ದಾರಿ ಇದಲ್ಲ ಎಂದು ಹೇಳುವಂತಿಲ್ಲ. ಬಾಲ್ಯವಿವಾಹಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಬಾಲ್ಯವಿವಾಹದಿಂದ ಎದುರಾಗುವ ಸಮಸ್ಯೆಗಳ ಕುರಿತು ಗ್ರಾ.ಪಂ.ನ ಸಮಿತಿಗಳು ತಿಳಿಸಿಕೊಡಬೇಕು. ತಳಮಟ್ಟದಲ್ಲಿ ಸಮಿತಿಗಳು ಸಕ್ರಿಯವಾಗಿ ತೊಡಿಗಿಸಿಕೊಂಡರೆ ಮಾತ್ರ ಸಾಮಾಜಿಕ ಪಿಡುಗುಗಳಿಂದ ಸಮಾಜವನ್ನು ರಕ್ಷಿಸಲು ಸಾಧ್ಯ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಸುಜಾತಾ ಮಾತನಾಡಿ, ಬಾಲ್ಯವಿವಾಹಗಳು ಈಗಲೂ ಕದ್ದುಮುಚ್ಚಿ ನಡೆಯುತ್ತಿರುವ ಘಟನೆಗಳು ಇವೆ. ಬಾಲ್ಯವಿವಾಹವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಿದ್ದುಪಡಿ ಮಾಡಿ ನಮಗೆ ನೀಡುತ್ತಾರೆ. ಅಲ್ಲದೆ ವಧುವಿನ ಮನೆ ನಮ್ಮ ತಾಲೂಕಿನಲ್ಲಿದ್ದರೆ, ವರನ ಮನೆ ಇನ್ನೊಂದು ತಾಲೂಕಿನಲ್ಲಿರುತ್ತದೆ. ಅದನ್ನು ವಿಚಾರಿಸುವಲ್ಲಿ ತೊಡಕುಂಟಾಗುತ್ತದೆ. ಪ್ರಕರಣಗಳು ಕಂಡು ಬಂದು, ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಲ್ನೋಟಕ್ಕೆ ನಿಯಮಗಳನ್ನು ಒಪ್ಪಿಕೊಂಡಂತೆ ವರ್ತಿಸಿದರೂ ಮತ್ತೆ ಬೇರೆಯೇ ಯೋಜನೆಗಳನ್ನು ರೂಪಿಸಿ ಮದುವೆ ಮಾಡಲು ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು. ಇದಕ್ಕೆ ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ ಧ್ವನಿಗೂಡಿಸಿದರು.

ಪ್ರತಿಕ್ರಿಯಿಸಿದ ತಹಶೀಲ್ದಾರ್ ನಿಸರ್ಗಪ್ರಿಯ ಅವರು, ದಾಖಲೆಗಳನ್ನು ತಿರುವಿ ನೀಡಿದ್ದಾರೆ ಎಂದಾಗ ಅದನ್ನು ಅಽಕಾರಿಗಳು, ಸಮಿತಿ ಸದಸ್ಯರು ಒಪ್ಪಬೇಕೆಂದೇನಿಲ್ಲ. ಅನುಮಾನ ಕಂಡುಬಂದರೆ ಎಲ್ಲಾ ರೀತಿಯಿಂದಲೂ ಪರಿಶೀಲನೆ ನಡೆಸಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ವಿಶೇಷ ಆದೇಶವನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.

ವರದಕ್ಷಿಣೆ ಇದೆ, ದೂರು ಇಲ್ಲ: ವರದಕ್ಷಿಣೆ ಪ್ರಕರಣಗಳು ತಾಲೂಕಿನಲ್ಲಿ ನಡೆಯುತ್ತಿವೆಯೇ ಎಂದು ತಹಸೀಲ್ದಾರ್ ಪ್ರಶ್ನಿಸಿದಾಗ, ಉತ್ತರಿಸಿದ ಸಿಡಿಪಿಓ ಶ್ರೀಲತಾ ಅವರು, ವರದಕ್ಷಿಣೆ ನೀಡುವ ಹಾಗೂ ಪಡೆಯುವ ಘಟನೆಗಳು ಇವೆ. ಆದರೆ ಪ್ರಕರಣ ದಾಖಲಾದದ್ದು ತೀರಾ ಕಡಿಮೆ. ಇದಕ್ಕೆ ಕಾರಣ ವರದಕ್ಷಿಣೆ ನೀಡುವವರು ಹಾಗೂ ಪಡೆಯುವವರು ದೂರು ನೀಡದೇ ಇರುವುದು. ದಾಖಲಾಗುವ ಕೆಲ ಘಟನೆಗಳನ್ನು ಗಮನಿಸುವಾಗ ಸುಳ್ಳು ದೂರು ಎಂಬಂತೆ ಭಾಸವಾಗುತ್ತದೆ ಎಂದು ಮಾಹಿತಿ ನೀಡಿದರು.

ಕೌಟುಂಬಿಕ ದೌರ್ಜನ್ಯ: ಸಭೆಯಲ್ಲಿ ಕೌಟುಂಬಿಕ ದೌರ್ಜನ್ಯದ ಕುರಿತು ಮಾಹಿತಿ ನೀಡಿದ ಶಿಶು ಅಭಿವೃದ್ಧಿ ಯೋಜನಾಽಕಾರಿ ಶ್ರೀಲತಾ ಅವರು ಕೌಟುಂಬಿಕ ದೌರ್ಜನ್ಯದ ಕುರಿತು ಹೆಚ್ಚಿನ ದೂರುಗಳು ಮಾತುಕತೆ, ಕೌನ್ಸಿಲ್‌ಗಳ ಮೂಲಕ ಇತ್ಯರ್ಥವಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ದೂರು ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಸೂಚಿಸಿದರು.

ನಿರಾಶ್ರಿತ ಕೇಂದ್ರಗಳ ಮಾಹಿತಿ: ವಿವಿಧ ವಿಚಾರಗಳಿಗೆ ಸಂಬಂಽಸಿದಂತೆ ನಿರಾಶ್ರಿತರಾದವರಿಗೆ ಇರುವ ಕೇಂದ್ರಗಳ ಕುರಿತು ಪೋಸ್ಟರ್‌ಗಳ ಮೂಲಕ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ, ಪ್ರಚಾರ ಪಡಿಸುವ ಕೆಲಸ ಆಗಬೇಕು ಎಂದು ತಹಶೀಲ್ದಾರ್ ಸೂಚನೆ ನೀಡಿದರು. ರೈಲ್ವೇ ನಿಲ್ದಾಣದಲ್ಲಿ ಮಹಿಳೆಯರಿಗೆ ಸಮಸ್ಯೆ ಉಂಟಾದ ಕುರಿತು ಸಿಡಿಪಿಒ ಇಲಾಖೆಯ ಭಾರತಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ತಹಸಿಲ್ದಾರ್ ರೈಲ್ವೇ ನಿಲ್ದಾಣಗಳಲ್ಲೂ ಮಹಿಳೆಯರ ರಕ್ಷಣೆಗೆ ಸಂಬಂಧಿಸಿ ಪ್ರತ್ಯೇಕ ಸೆಲ್ ಇರುತ್ತದೆ. ಇಂತಹ ವಿಚಾರಗಳ ಬಗ್ಗೆ ನಿಗಾ ವಹಿಸುವ ಸಲುವಾಗಿ ಪೊಲೀಸ್ ಬೀಟ್ ವ್ಯವಸ್ಥೆಯನ್ನೂ ಮಾಡಬೇಕು ಎಂದು ತಹಸೀಲ್ದಾರ್ ಸೂಚನೆ ನೀಡಿದರು.

ಗೃಹಾಧಾರಿತ ಶಿಕ್ಷಣ: ಮನೆಯಲ್ಲಿ ಉಳಿದಿರುವ ಅಂಗವಿಕಲರ, ಬುದ್ಧಿಮಾಂದ್ಯ ಮಕ್ಕಳಿಗೆ ಹಿಂದೆ ಗೃಹಾಧಾರಿತ ಶಿಕ್ಷಣ ನೀಡುವ ವ್ಯವಸ್ಥೆ ಇತ್ತು. ಆದರೆ ಈಗ ಇಲ್ಲ. ಇದರಿಂದ ಕಲಿಕಾ ನ್ಯೂನ್ಯತೆ ಉಳ್ಳವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎನ್ನುವ ವಿಚಾರ ಸಭೆಯಲ್ಲಿ ಪ್ರಸ್ತಾವವಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈಲ್ವೇ ನಿಲ್ದಾಣದಲ್ಲಿ ಪೊಲೀಸ್ ಬೀಟ್: ಎಸಿಡಿಪಿಓ ಭಾರತಿ ಮಾತನಾಡಿ, ಪುತ್ತೂರು ಪೇಟೆಯಲ್ಲಿ ಸಣ್ಣ ಮಕ್ಕಳು ಭಿಕ್ಷಾಟನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಮಕ್ಕಳು ರೈಲಿನ ಮೂಲಕ ದೂರದ ಊರಿನಿಂದ ಬರುತ್ತಿದ್ದಾರೆ. ಆದ್ದರಿಂದ ರೈಲ್ವೇ ಇಲಾಖೆಯ ಗಮನಕ್ಕೆ ತಂದು, ಇದರ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡುವ ಅಗತ್ಯವಿದೆ ಎಂದು ಗಮನ ಸೆಳೆದರು. ಪ್ರತಿಕ್ರಿಯಿಸಿದ ತಹಸೀಲ್ದಾರ್ ನಿಸರ್ಗಪ್ರಿಯ, ಈ ಬಗ್ಗೆ ರೈಲ್ವೇ ಇಲಾಖೆಗೆ ಬರೆಯುವುದು ಉತ್ತಮ. ಇದರ ಜೊತೆಗೆ ಪೊಲೀಸ್ ಇಲಾಖೆಯೂ ರೈಲ್ವೇ ನಿಲ್ದಾಣದಲ್ಲಿ ಬೀಟ್ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಪುತ್ತೂರು ಶಿಕ್ಷಣದ ಹಬ್: 6ನೇ ತರಗತಿಯ ಮಗುವೊಂದು ಕುಡಿತದ ವ್ಯಸನಕ್ಕೆ ಬಲಿಯಾಗಿದ್ದು, ಈ ಮಗುವನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ ಎಂದು ಸಭೆಯಲ್ಲಿ ಅಽಕಾರಿಗಳು ಪ್ರಸ್ತಾಪ ಮಾಡಿದರು. ಪ್ರತಿಕ್ರಿಯಿಸಿದ ಸಮಿತಿ ಸದಸ್ಯೆ ಉಷಾ ಅಂಚನ್, ಮಗುವಿನ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಕ್ರಮ ಕೈಗೊಳ್ಳುವುದರಿಂದ ಮಗುವನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ಆದ್ದರಿಂದ ಮಗುವಿನ ಮನಃ ಪರಿವರ್ತನೆಗೆ ಪ್ರಯತ್ನಿಸಿ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ತಹಸೀಲ್ದಾರ್ ನಿಸರ್ಗಪ್ರಿಯ, ಪುತ್ತೂರು ಈಗಾಗಲೇ ಶಿಕ್ಷಣದ ಹಬ್ ಎಂದು ಗುರುತಿಸಲ್ಪಟ್ಟಿದೆ. ಆದರೆ ಶಾಲಾ – ಕಾಲೇಜುಗಳ ಆಸುಪಾಸಿನಲ್ಲೇ ಮಾದಕ ವ್ಯಸನಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಪೊಲೀಸರು ಪ್ರೋ ಆಕ್ಟೀವ್ ಆಗಿ ಕೆಲಸ ನಿರ್ವಹಿಸಬೇಕು. ಪೊಲೀಸ್ ಗಸ್ತು ಹೆಚ್ಚಿಸಿ, ನಿಗಾ ವಹಿಸಬೇಕು. ಸರಿಯಾಗಿ ಕ್ರಮ ಕೈಗೊಂಡರೆ ಮಾದಕ ವ್ಯಸನಗಳನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

ಶಾಲೆ ಬಿಟ್ಟಿರುವ ಮಕ್ಕಳನ್ನು ಶಾಲೆಗೆ ಮರುಸೇರ್ಪಡೆ ಮಾಡುವ ಕೆಲಸವನ್ನು ಈಗಾಗಲೇ ಸಮಿತಿ ನಡೆಸುತ್ತಿದೆ. ಆದರೆ ಇದು ಸಮಿತಿ ಸದಸ್ಯರದ್ದಷ್ಟೇ ಜವಾಬ್ದಾರಿಯಲ್ಲ. ಸಾರ್ವಜನಿಕ ವಲಯದವರೂ ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಹಸೀಲ್ದಾರ್ ತಿಳಿಸಿದರು.

ಅಂಗವಿಕಲರಿಗೆ ವಾಹನದ ವ್ಯವಸ್ಥೆ: ತಾಲೂಕಿನಲ್ಲಿ ಅನೇಕ ಅಂಗವಿಕಲರಿದ್ದಾರೆ. ಅವರಿಗೆ ಇಲಾಖೆಯಿಂದ, ವಿವಿಧ ಸಂಘಟನೆಗಳಿಂದ ಅನೇಕ ಸವಲತ್ತುಗಳನ್ನು ವಿತರಿಸುವ ಕೆಲಸವೂ ನಡೆಯುತ್ತಿದೆ. ಆದರೆ ಇವರು ಆರ್ಥಿಕವಾಗಿ ದುರ್ಬಲವಾಗಿರುವ ಕಾರಣ, ಆ ಕೇಂದ್ರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಇವರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಉಷಾ ಅಂಚನ್ ಪ್ರಶ್ನಿಸಿದರು. ಉತ್ತರಿಸಿದ ತಹಸೀಲ್ದಾರ್, ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸೂಕ್ತ ಸ್ಪಂದನೆ ನೀಡುವುದು ತೀರಾ ಅಗತ್ಯ. ಅಂಗವಿಕಲರು ಔಷಽಗಾಗಿಯೋ, ವೈದ್ಯಕೀಯ ತಪಾಸಣೆಗಾಗಿಯೋ, ಸಲಕರಣೆ ಅಥವಾ ಇನ್ನಿತರ ಸವಲತ್ತುಗಳನ್ನು ಪಡೆದುಕೊಳ್ಳಲು ತೆರಳುವಾಗ ಗ್ರಾಮ ಪಂಚಾಯತ್ ವತಿಯಿಂದ ವಾಹನದ ವ್ಯವಸ್ಥೆಯನ್ನು ಮಾಡಿಕೊಡಲು ಅವಕಾಶ ಇದೆ ಎಂದರು.

ಪುತ್ತೂರು ತಾಲೂಕು ಪಂಚಾಯತ್ ಯೋಜನಾಽಕಾರಿ ಸುಕನ್ಯಾ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ನಮಿತಾ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಾಮಕೃಷ್ಣ ಉಪಸ್ಥಿತರಿದ್ದರು.

ವರದಕ್ಷಿಣೆ ನಿಷೇಧ ಕಾಯಿದೆ ಸಮಿತಿ, ಮಾದಕ ವಸ್ತು ಸೇವನೆ ನಿಷೇಧ, ಸೀಶಕ್ತಿ ಯೋಜನೆಯ ಸಮನ್ವಯ ಸಮಿತಿ, ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರುದ್ಧ ಸಮಿತಿ, ಭಾಗ್ಯಲಕ್ಷ್ಮೀ ಯೋಜನೆಯ ಕಾರ್ಯಪಡೆ, ಕೌಟುಂಭಿಕ ದೌರ್ಜನ್ಯ ತಡೆ, ತಾಲೂಕು ಮಟ್ಟದ ಮಕ್ಕಳ ರಕ್ಷಣ ಸಮಿತಿ, ಅಂಗವಿಕಲರ ತಾಲೂಕು ಸಮಿತಿ, ಮಹಿಳಾ ದೌರ್ಜನ್ಯ ತಡೆ, ಮಾತೃ ವಂದನಾ, ಬೇಟಿ ಬಜಾವೋ ಬೇಟಿ ಪಡಾವೋ ಸೇರಿದಂತೆ ೧೨ ಸಮಿತಿಗಳ ಪ್ರಗತಿ ಪರಾಮರ್ಶೆ ಸಭೆಯಲ್ಲಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ತುರ್ತು ಸಂದರ್ಭದಲ್ಲೂ ಸಭೆ

ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ಕಾವಲು ಸಮಿತಿಯ ಸಭೆಯು ಗ್ರಾಮ ಮಟ್ಟದಲ್ಲಿ ೩ ತಿಂಗಳಿಗೊಮ್ಮೆ ನಡೆಯುತ್ತದೆ. ಹಾಗೆಂದು ತುರ್ತು ಸಂದರ್ಭದಲ್ಲಿ ಇನ್ನೊಂದು ಸಭೆಗಾಗಿ 3 ತಿಂಗಳು ಕಾಯಬೇಕಾದ ಅಗತ್ಯವಿಲ್ಲ. ತುರ್ತು ಸಂದರ್ಭದಲ್ಲಿ ಸಭೆಯನ್ನು ನಡೆಸಲಾಗುವುದು ಎಂದು ಸಮಿತಿ ಸದಸ್ಯರಿಗೆ ತಿಳಿಸಲಾಯಿತು.

LEAVE A REPLY

Please enter your comment!
Please enter your name here