*ರೂ.101 ಕೋಟಿ ವ್ಯವಹಾರ, ರೂ.48.58 ಲಕ್ಷ ಲಾಭ,
* ಶೇ.99.14 ಸಾಲ ವಸೂಲಾತಿ
* ಡಿವಿಡೆಂಡ್, ಸಿಬ್ಬಂಧಿ ಬೋನಸ್ಸ್ನ ಶೇ.50 ಸಂಘದ ನಿವೇಶನಕ್ಕೆ ದೇಣಿಗೆ
ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22ನೇ ಸಾಲಿನಲ್ಲಿ ರೂ.101 ಕೋಟಿ ವ್ಯವಹಾರ ನಡೆಸಿ, ರೂ.48,58,230.86 ನಿವ್ವಳ ಲಾಭಗಳಿಸಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.14 ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಮಹಾಸಭೆಯು ಸೆ.18ರಂದು ಬೆಳಿಯೂರುಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಸಂಘದಲ್ಲಿ ಎ ತರಗತಿ ಸದಸ್ಯರಿಂದ ರೂ.1,92,89,020, ಸಿ ತರಗತಿ ಸದಸ್ಯರಿಂದ ರೂ.45,010 ಹಾಗೂ ಡಿ ತರಗತಿ ಸದಸ್ಯರಿಂದ 1,400 ಪಾಲು ಬಂಡವಾಳ ಹೊಂದಿದೆ. ರೂ.6,53,20,061.80 ವಿವಿಧ ರೂಪದ ಠೇವಣಿ ಹೊಂದಿದೆ. ವರದಿ ವರ್ಷದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ರೂ.14,17,53,000 ಸಾಲ ಪಡೆದುಕೊಳ್ಳಲಾಗಿದೆ. ರೂ.48,88,000 ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.14 ಸಾಧನೆ ಮಾಡಿದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ `ಎ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದರು.
ಡಿವಿಡೆಂಡ್, ಸಿಬಂದಿ ಬೋನಸ್ಸ್ನ ಶೇ.50 ಸಂಘದ ನಿವೇಶನಕ್ಕೆ ದೇಣಿಗೆ:
ಸಹಕಾರಿಯ ಕೇಂದ್ರ ಕಚೇರಿ ಕಟ್ಟಡವು ನಾದುರಸ್ಥಿಯಲ್ಲಿದ್ದು ನೂತನ ಕಟ್ಟಡ ನಿರ್ಮಾಣವಾಗಬೇಕಿದೆ. ಕಟ್ಟಡದಲ್ಲಿ ಭದ್ರತೆಯಿಲ್ಲದೇ ಇದ್ದು ನೂತನ ಕಟ್ಟಡ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಸಮೀಪದ ಸಂಘದ ಜೊತೆಗೆ ವಿಲೀನಗೊಳಿಸುವಂತೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸೂಚನೆ ಬಂದಿದೆ. ಹೀಗಾಗಿ ಈಗಿರುವ ಕಟ್ಟಡವಿರುವ ಜಾಗವು ರಸ್ತೆ ಮಾರ್ಜಿನ್‌ನಲ್ಲಿ ಬರುತ್ತದೆ. ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಹೊಸ ಜಾಗ ಖರೀದಿಸಬೇಕಾಗಿದೆ. ಹೀಗಾಗಿ ಈ ವರ್ಷದ ಡಿವಿಡೆಂಡ್‌ನ್ನು ಸಂಘದ ಪ್ರಧಾನ ಕಚೇರಿಯ ನಿವೇಶನ ಖರೀದಿಗೆ ಸದಸ್ಯರು ಕೊಡುಗೆ ನೀಡಬೇಕು ಎಂದು ಅಧ್ಯಕ್ಷರು ವಿನಂತಿಸಿದರು. ಇದಕ್ಕೆ ಪ್ರಾರಂಭದಲ್ಲಿ ಸಭೆಯು ಅನುಮೋದನೆ ನೀಡಿತು. ಇದಾದ ಬಳಿಕ, ಸದಸ್ಯರು ಡಿವಿಡೆಂಡ್‌ನ ದೇಣಿಗೆ ನೀಡಿದಂತೆ ಸಂಘದ ಉಳಿವಿಗಾಗಿ ಸಿಬಂದಿಗಳು ಬೋನಸ್‌ನ್ನು ಕೊಡುಗೆ ನೀಡುವಂತೆ ನಿರ್ದೇಶಕ ಪ್ರಕಾಶ್ಚಂದ್ರ ಆಳ್ವ ವಿನಂತಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಿಬಂದಿಗಳು ಬೋನಸ್ಸ್ನಲ್ಲಿ ಶೇ.50ರಷ್ಟು ನೀಡಲು ಒಪ್ಪಿಗೆ ಸೂಚಿಸಿದರು. ಆಗ ಸದಸ್ಯರು ಡಿವಿಡೆಂಡ್‌ನ ಶೇ.50 ಸಂಘದ ನಿವೇಶನಕ್ಕೆ ಖರೀದಿಗೆ ದೇಣಿಗೆ ನೀಡಲು ಸಹಮತ ವ್ಯಕ್ತಪಡಿಸಿದ್ದು ಅದರಂತೆ ಡಿವಿಡೆಂಡ್ ಹಾಗೂ ಸಿಬಂದಿ ಬೋನಸ್ಸ್ನ ಶೇ.50 ಸಂಘದ ನಿವೇಶನಕ್ಕೆ ಖರೀದಿಗೆ ದೇಣಿಗೆ ನೀಡಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ವಿಶೇಷ ಸಭೆ:
ಸಂಘದ ಕೇಂದ್ರ ಕಚೇರಿ ನಿರ್ಮಾಣಕ್ಕೆ ನಿವೇಶನ ಖರೀದಿ, ಸೂಕ್ತವಾದ ಜಾಗ ಗುರುತಿಸುವುದು ಹಾಗೂ ಯೋಜನೆ ಮೊತ್ತ ಸೇರಿದಂತೆ ಎಲ್ಲಾ ಮಾಹಿತಿಗಳ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು, ಸಂಘದ ಮುಂದಿನ ಕ್ರಮಗಳ ಕುರಿತು ಸದಸ್ಯರಿಗೆ ಸಮರ್ಪಕವಾಗಿ ಮಾಹಿತಿ ನೀಡುವ ನಿಟ್ಟಿನಲ್ಲಿ ವಿಶೇಷ ಸಭೆ ಕರೆಯುವಂತೆ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಲಹೆ ನೀಡಿದರು. ಇದಕ್ಕೆ ಆಡಳಿತ ಮಂಡಳಿಯು ಒಪ್ಪಿಗೆ ಸೂಚಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವುದಾಗಿ ತಿಳಿಸಿದರು.
5 ಸೆಂಟ್ಸ್ ಜಾಗ ಉಚಿತವಾಗಿ ನೀಡಲು ನಿರ್ದೇಶಕ ಸಹೋದರರ ಒಪ್ಪಿಗೆ:
ಜಾಗ ಖರೀದಿಯ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಈಗಿರುವ ಸಂಘದ ಕಚೇರಿಗೆ ನಮ್ಮ ಹಿರಿಯ ಜಾಗವನ್ನು ನೀಡಿದ್ದರು. ಆ ಪರಂಪರೆಯನ್ನು ಉಳಿಸುವುದಕ್ಕಾಗಿ ಸಂಘದ ಹೊಸ ಕಟ್ಟಡದ ನಿರ್ಮಾಣಕ್ಕೆ 5 ಸೆಂಟ್ಸ್ ಜಾಗವನ್ನು ನಾನು ಉಚಿತವಾಗಿ ನೀಡುತ್ತೇನೆ. ಇದಕ್ಕಿಂತ ಹೆಚ್ಚುವರಿ ಜಾಗ ಬೇಕಿದ್ದರೆ ಅದರ ಮೊತ್ತ ಪಾವತಿಸುವಂತೆ ತಿಳಿಸಿದರು. ನಿರ್ದೇಶಕ ಪ್ರಕಾಶ್ಚಂದ್ರ ಆಳ್ವ ಮಾತನಾಡಿ, ಈ ಹಿಂದೆ ಒಂದು ಬಾರಿ ನನ್ನ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶವನ್ನು ಗುರುತಿಸಲಾಗಿತ್ತು. ಅದು ರಸ್ತೆ ಮಾರ್ಜಿನ್‌ನಿಂದ ಹೊರತಾಗಿದೆ. ಅಲ್ಲಿ ಸಂಘದ ಕಚೇರಿಗೆ ಸೂಕ್ತವೆನಿಸಿ, ಖರೀದಿಸುವುದಾರೆ ನಾನು 5 ಸೆಂಟ್ಸ್ ಜಾಗ ಉಚಿತವಾಗಿ ನೀಡುತ್ತೇನೆ. ಉಳಿದ 10 ಸೆಂಟ್ಸ್ ಜಾಗಕ್ಕೆ ಪಾವತಿಸಿದರೆ ಸಾಕು ಎಂದು ತಿಳಿಸಿದರು.
ಕಳೆದ ಮಹಾಸಭೆಯಲ್ಲಿ ತೀರ್ಮಾನಿಸಿದಂತೆ ಸಂಘದ ಉಜ್ರುಪಾದೆ ಶಾಖೆಗೆ ಜಾಗ ಖರೀದಿಸಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಈಗ ಸಂಘದ ಕೇಂದ್ರ ಕಚೇರಿ ಕಟ್ಟಡವು ನಾದುರಸ್ಥಿಯಲ್ಲಿದ್ದು ನೂತನ ಕಟ್ಟಡದ ನಿರ್ಮಿಸಬೇಕಾದ ಆವಶ್ಯಕತೆಯಿದೆ. ಇದಕ್ಕಾಗಿ ಸುಮಾರು ರೂ.1ಕೋಟಿ ವೆಚ್ಚದ ಆವಶ್ಯಕತೆಯಿದೆ. ಸಂಘದ ಕಚೇರಿಯು ಅಂತರಾಜ್ಯ ಹೆದ್ದಾರಿಯ ಮಾರ್ಜಿನಲ್ಲಿದ್ದು ಹೊಸ ಜಾಗ ಖರೀದಿಸಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಎಲ್ಲಾ ಸದಸ್ಯ ಬಾಂಧವರು ನಮ್ಮ ಜೊತೆ ಕೈಜೋಡಿಸಿ, ನೂತನ ಕಟ್ಟಡ ನಿರ್ಮಿಸಲು ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ ತಿಳಿಸಿದರು.
ಸದಸ್ಯರಾದ ಶ್ರೀಕೃಷ್ಣ ಭಟ್, ಬಾಲಕೃಷ್ಣ ರೈ, ರವಿಕೃಷ್ಣ ಭಟ್ ಕಲ್ಲಾಜ, ರಾಮಚಂದ್ರ ರೈ, ತ್ರಿವಿಕ್ರಮಮೂರ್ತಿ ಭಟ್, ಮಹಮ್ಮದ್ ಶರೀಪ್ ಸೇರಿದಂತೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ನವೀನ್ ಕರ್ಕೇರ, ಪ್ರಮೋದ್ ಬಿ, ಸೀತಾರಾಮ ಗೌಡ, ವಿನಯ ವಸಂತ್, ಶುಕವಾಣಿ, ಅಂಬ್ರೋಸ್ ಡಿ’ಸೋಜ, ಹಾಗೂ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಲ್ಪಾ ಹಾಗೂ ದೀಪ ಪ್ರಾರ್ಥಿಸಿದರು. ಅಧ್ಯಕ್ಷ ಸತೀಶ್ ಗೌಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸೀತಾರಾಮ ಗೌಡ ವಾರ್ಷಿಕ ವರದಿ ಹಾಗೂ ಆಯವ್ಯಯ ಮಂಡಿಸಿದರು. ನಿರ್ದೇಶಕ ಚಂದಪ್ಪ ಪೂಜಾರಿ ವಂದಿಸಿದರು. ಸಿಬಂದಿಗಳಾದ ಕೆ.ಶುಭ, ಕೀರ್ತನ್ ಶೆಟ್ಟಿ, ಪುಷ್ಪಾ ಎಂ. ಹಾಗೂ ವೆಂಕಟಕೃಷ್ಣ ಸಹಕರಿಸಿದರು.