ನಮೀಬಿಯಾದಿಂದ ಭಾರತಕ್ಕೆ 8 ಚೀತಾ ಆಗಮನ;ಚೀತಾ ಸಾಗಾಟದ ತಂಡದಲ್ಲಿ ಪುತ್ತೂರಿನ ಡಾ.ಸನತ್ ಕೃಷ್ಣ ಭಾಗಿ

0

ಪುತ್ತೂರು : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಂದು ನಮೀಬಿಯಾದಿಂದ 8 ಚೀತಾಗಳನ್ನು ಬಾರತಕ್ಕೆ ಕರೆತಂದ ತಂಡದಲ್ಲಿ ಪುತ್ತೂರಿನ ಪಶುವೈದ್ಯ ಡಾ.ಸನತ್ ಕೃಷ್ಣ ಒಬ್ಬರಾಗಿದ್ದರು.

ದೇಶದಲ್ಲಿ ನಶಿಸಿಹೋಗುತ್ತಿರುವ ಚೀತಾಗಳನ್ನು ಮತ್ತೆ ಪರಿಚಯಿಸುವ ಮಹತ್ವಾಕಾಂಕ್ಷಿ “ಪ್ರಾಜೆಕ್ಚ್ ಚೀತಾ” ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಹುಟ್ಟುಹಬ್ಬದಂದು ಆರಂಭಿಸಿದ್ದು ಆಫ್ರೀಕಾ ಖಂಡದ ನಮೀಬಿಯಾದಿಂದ ೮ ಚೀತಾಗಳನ್ನು ಭಾರತಕ್ಕೆ ವಿಶೇಷ ವಿಮಾನದಲ್ಲಿ ತರಲಾಗಿತ್ತು. ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಾಗೂ ಹುಲಿ ಮೊಖವನ್ನು ಹೊತ್ತ ವಿಮಾನದಲ್ಲಿ ನಮೀಬಿಯಾದಿಂದ ಮಧ್ಯಪ್ರದೇಶದ ಗ್ರಾವಲಿಯರ್‌ಗೆ ಕರೆತರಲಾಯಿತು. ನಂತರ ಭಾರತೀಯ ವಾಯುಪಡೆಯ ಎರಡು ಕೆಲಿಕಾಪ್ಟರ್‌ಗಳಲ್ಲಿ ತಂದು ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯನಾವನಕ್ಕೆ ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಮೂರು ಚೀತಾವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುವ ಮೂಲಕ ಹುಟ್ಟು ಹಬ್ಬ ವಿಶೇಷವಾಗಿ ಆಚರಿಸಿದರು. ಉಳಿದ ಐದನ್ನು ಇತರ ಗಣ್ಯರು ಬಿಡುಗಡೆಗೊಳಿಸಿದ್ದರು. 8 ಚೀತಾಗಳನ್ನು ವಿಶೇಷ ವಿಮಾನದಲ್ಲಿ ಕರೆತಂದಿರುವ ತಂಡದಲ್ಲಿ 8 ಮಂದಿ ತಜ್ಞರು, ಅಧಿಕಾರಿಗಳು, ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರುಗಳಿದ್ದು ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್ ಅಗರ್‌ವಾಲ್ ಈ ತಂಡದ ಮುಖ್ಯಸ್ಥರಾಗಿದ್ದರು. ತಂಡದಲ್ಲಿದ್ದ ಮೂವರು ಭಾರತೀಯರ ಪೈಕಿ ಓರ್ವರು ಪುತ್ತೂರಿನ ಪಶುವೈದ್ಯ ಡಾ.ಸನತ್ ಕೃಷ್ಣರವರು.

ಡಾ.ಸನತ್ ಕೃಷ್ಣ: ಪುತ್ತೂರಿನ ಮುಳಿಯ ದಿ.ಕೇಶವ ಭಟ್ ಮತ್ತು ಉಷಾ ದಂಪತಿ ಪುತ್ರರಾದ ಡಾ.ಸನತ್ ಕೃಷ್ಣರವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಬಳಿಕ ಬೆಂಗಳೂರು ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ, ಕೊಡಗಿನ ವೈಲ್ಡ್ ಲೈಫ್ ವೆಟೇರಿಯನ್ ರಿಸರ್ಚ್ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡೆಹ್ರಾಡೂನ್‌ನ ಭಾರತೀಯ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜ್ಞಾನಿಯಾಗಿದ್ದು ಅಲ್ಲದೆ ಆಫ್ರೀಕಾದ ಬೋಸ್ವಾನ್‌ನಲ್ಲಿ ಒಂದೂವರೆ ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ದೆಹಲಿಯ ರಾಷ್ಟ್ರೀಯ ಝೂವಲಾಜಿಕಲ್ ಪಾರ್ಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಡಾ.ಪ್ರಿಯಾಂಕ ಕೂಡ ಪಶುವೈದ್ಯೆಯಾಗಿದ್ದಾರೆ.

LEAVE A REPLY

Please enter your comment!
Please enter your name here