ಶಾಸಕರ ಸಮಾರಂಭಕ್ಕೆ ಎಲ್ಲ ಸದಸ್ಯರಿಗೆ ಆಹ್ವಾನ ನೀಡದ ಆರೋಪ-ಕೆಲ ಸದಸ್ಯರಿಂದ ಅಸಮಧಾನ
- ಕೆಲವು ಸದಸ್ಯರುಗಳಿಗೆ ಮಾತ್ರ ತಿಳಿಸಿದ್ದು ಯಾಕೆಂದು ಅಧ್ಯಕ್ಷರಿಗೆ ತರಾಟೆ
- ಎಡವಟ್ಟಾಗಿದೆ, ಮುಂದೆ ಸರಿಪಡಿಸಿಕೊಳ್ಳುತ್ತೇವೆ-ಅಧ್ಯಕ್ಷೆ
ಉಪ್ಪಿನಂಗಡಿ: ಶಾಸಕರ ಉಪಸ್ಥಿತಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ‍್ಯಕ್ರಮಕ್ಕೆ ಕೆಲವು ಸದಸ್ಯರನ್ನು ಮಾತ್ರ ಆಹ್ವಾನಿಸಿ, ಉಳಿದವರನ್ನು ಕರೆಯದೆ ಅವಮಾನ ಮಾಡಿದ್ದೀರಿ, ಸರ್ಕಾರಿ ಕಾರ‍್ಯಕ್ರಮವನ್ನು ಪಕ್ಷದ ಕಾರ‍್ಯಕ್ರಮದ ರೀತಿಯಲ್ಲಿ ಮಾಡಿದ್ದೀರಿ ಎಂದು ಕೆಲವು ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಘಟನೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸೆ. 20ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಸಭೆ ಆರಂಭ ಆಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಮಾರಂಭಕ್ಕೆ ಕೆಲವು ಸದಸ್ಯರುಗಳಿಗೆ ಕರೆ ಮಾಡಿ ಆಹ್ವಾನ ನೀಡಿದ್ದೀರಿ, ಇನ್ನು ಕೆಲವರಿಗೆ ತಿಳಿಸಿಯೇ ಇಲ್ಲ, ಈ ರೀತಿ ಯಾಕೆ ಮಾಡಿದ್ದು ಎಂದು ಸದಸ್ಯರು ಅಧ್ಯಕ್ಷರನ್ನು ಪ್ರಶ್ನಿಸಿದರು.
ಆಗ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಪ್ರತಿಕ್ರಿಯಿಸಿ ನಾನು ಪಂಚಾಯಿತಿ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಮಾಹಿತಿ ಹಾಕಿದ್ದೇನೆ, ಆದರೆ ಯು.ಕೆ. ಇಬ್ರಾಹಿಂ ಅವರಿಗೆ ವಾಟ್ಸ್‌ಅಪ್ ಇಲ್ಲದ ಕಾರಣ ಮತ್ತು ಅಬ್ದುಲ್ ರಹಿಮಾನ್‌ರವರು ಕಳುಹಿಸಿದ ಸಂದೇಶವನ್ನು ನೋಡದೆ ಇದ್ದ ಕಾರಣದಿಂದಾಗಿ ಇಬ್ಬರಿಗೆ ಸಿಬ್ಬಂದಿಯ ಮೂಲಕ ತಿಳಿಸಲಾಗಿದೆ, ಹೊರತಾಗಿ ನಾನು ಯಾರಿಗೂ ಪ್ರತ್ಯೇಕವಾಗಿ ಕರೆ ಮಾಡಿ ತಿಳಿಸಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು ನಿಮ್ಮ ಸಮಜಾಯಿಸಿಯನ್ನು ಒಪ್ಪುವುದಕ್ಕೆ ಆಗುವುದಿಲ್ಲ, ನೀವು ಎಲ್ಲರನ್ನೂ ಕರೆಯಬೇಕಿತ್ತು. ಶಾಸಕರು ನಿಮಗೆ ಮಾತ್ರ ಅಲ್ಲ, ನಮಗೂ ಶಾಸಕರು. ಅವರು ಉಪ್ಪಿನಂಗಡಿಗೆ ಅನುದಾನ ನೀಡಿರುವುದರ ಬಗ್ಗೆ ನಮಗೂ ಹೆಮ್ಮೆ ಇದೆ, ನಮ್ಮನ್ನೂ ಸೇರಿಸಿಕೊಂಡು ಕಾರ‍್ಯಕ್ರಮ ನಡೆಸಬೇಕಾಗಿತ್ತು. ಆದರೆ ನೀವುಗಳು ಬಿಜೆಪಿ. ಕಾರ‍್ಯಕ್ರಮದ ರೀತಿಯಲ್ಲಿ ಮಾಡಿದ್ದೀರಿ, ಇದೆಲ್ಲ ಸರಿ ಅಲ್ಲ ಎಂದರು.
ಆಗ ಅಧ್ಯಕ್ಷೆ ಮತ್ತೆ ಪ್ರತಿಕ್ರಿಯಿಸಿ ಈ ಹಿಂದೆ 2 ಬಾರಿ ಈ ಕಾರ‍್ಯಕ್ರಮ ರೂಪಿಸಲಾಗಿ ಬಳಿಕ ಶಾಸಕರು ಲಭ್ಯವಾಗದ ಕಾರಣ ಮುಂದೂಡಲ್ಪಟ್ಟಿತ್ತು. ಹೀಗಿರುವಾಗ ಕಾರ‍್ಯಕ್ರಮಕ್ಕೆ 2 ದಿನ ಮುನ್ನ ಶಾಸಕರು ಕಾರ‍್ಯಕ್ರಮಕ್ಕೆ ದಿನಾಂಕ ಸೂಚಿಸಿದ್ದು, ಹೀಗಾಗಿ ಎಲ್ಲರಿಗೂ ಕರೆ ಮಾಡಿ ಹೇಳುವುದಕ್ಕೆ ಸಮಯದ ಅಭಾವ ಇತ್ತು. ಎಂದರು.
ಆಗ ಸದಸ್ಯ ಅಬ್ದುಲ್ ರಹಿಮಾನ್ ಪ್ರತಿಕ್ರಿಯಿಸಿ, ಅಧ್ಯಕ್ಷರ ಈ ರೀತಿಯ ಸಮಾಜಾಯಿಸಿ ಒಪ್ಪಿಕೊಳ್ಳುವಂತದಲ್ಲ. ಇದು ಪಂಚಾಯಿತಿ ಕಾರ‍್ಯಕ್ರಮವಾಗಿದ್ದು, ಶಾಸಕರು ದಿನಾಂಕ ಸೂಚಿಸಿದ ತಕ್ಷಣ ಸದಸ್ಯರನ್ನು ಕರೆದು ಪೂರ್ವಭಾವಿ ಸಭೆ ನಡೆಸಬಹುದಿತ್ತು. ಎಲ್ಲಾ ಸದಸ್ಯರುಗಳಿಗೂ ಜವಾಬ್ದಾರಿ ನೀಡಬಹುದಿತ್ತು. ಅದನ್ನು ಯಾವುದನ್ನೂ ಮಾಡದೇ ನೀವು ನಿಮ್ಮ ಇಚ್ಚಾನುಸಾರ ಕಾರ‍್ಯಕ್ರಮ ಮಾಡಿದ್ದೀರಿ. ಮತ್ತೆ ಇದೀಗ ಎಲ್ಲವೂ ಸರಿಯಾಗಿದೆ ಎನ್ನುವಂತೆ ಹೇಳುತ್ತಿದ್ದೀರಿ. ನಿಮ್ಮ ಈ ನಿಲುವು ಒಪ್ಪುವಂತದ್ದು ಅಲ್ಲ ಎಂದರು.
ಆಗ ಸದಸ್ಯ ಸುರೇಶ್ ಅತ್ರಮಜಲು ಮಾತನಾಡಿ ಶಾಸಕರು ದಿನ ಸೂಚಿಸಿದ ಬಳಿಕ ಸಮಯ ಇರಲಿಲ್ಲ, ಹೀಗಾಗಿ ಕಾರ‍್ಯಕ್ರಮ ಆಯೋಜನೆಯಲ್ಲಿ ವ್ಯತ್ಯಾಸ ಉಂಟಾಗಿದೆ, ಶಿಷ್ಠಾಚಾರ ತಪ್ಪಿದೆ, ಇದನ್ನು ಒಪ್ಪಿಕೊಳ್ಳುತ್ತೇವೆ, ಮುಂದೆ ಉದ್ಘಾಟನಾ ಕಾರ‍್ಯಕ್ರಮ ಇದೆ, ಆ ಸಂದರ್ಭದಲ್ಲಿ ಎಲ್ಲರನ್ನೂ ಕರೆದು ಸಭೆ ನಡೆಸಿ ಕಾರ‍್ಯಕ್ರಮ ಆಯೋಜಿಸಿ ಎಂದು ಅಧ್ಯಕ್ಷರಿಗೆ ತಿಳಿಸಿದರು.
ಆಗ ಅಬ್ದುಲ್ ರಹಿಮಾನ್ ಮತ್ತೆ ಪ್ರತಿಕ್ರಿಯಿಸಿ ಸುರೇಶ್ ಅವರು ಹೇಳಿದ ಮಾತು ಸರಿ ಇದೆ, ಇದನ್ನು ಅಧ್ಯಕ್ಷರು ಹೇಳಬೇಕು, ತನ್ನಿಂದ ತಪ್ಪು ಆಗಿರುವುದನ್ನು ಒಪ್ಪಿಕೊಳ್ಳುವ ಬದಲು ಬರೇ ವಾದ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ, ಅಧ್ಯಕ್ಷರು ತಪ್ಪಾಗಿದೆ, ಮುಂದೆ ಸರಿಪಡಿಸುತ್ತೇವೆ ಎಂದು ಹೇಳಿ, ಸಭೆ ಮುಂದಕ್ಕೆ ಹೋಗಲು ಅನುವು ಮಾಡಿಕೊಡುತ್ತೇವೆ ಎಂದರು.
ಆಗ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮತ್ತೆ ಪ್ರತಿಕ್ರಿಯಿಸಿ, ನಾನು ತಪ್ಪು ಮಾಡಿಯೇ ಇಲ್ಲ, ಯಾಕೆ ತಪ್ಪು ಒಪ್ಪಿಕೊಳ್ಳಬೇಕು ಎಂದರು. ಇದರಿಂದ ಅಸಮಾಧಾನಗೊಂಡ ಸದಸ್ಯರುಗಳು ಎಲ್ಲವನ್ನೂ ನಿಮ್ಮಷ್ಟಕ್ಕೆ ನೀವು ಮಾಡುವುದಾದರೆ ನೀವೇ ಮಾಡಿಕೊಳ್ಳಿ ಎಂದು ಸಭೆಯಿಂದ ಹೊರ ನಡೆಯಲು ಎದ್ದು ನಿಂತರು. ಆಗ ಸುರೇಶ್ ಅತ್ರಮಜಲು ಅಧ್ಯಕ್ಷರನ್ನು ಉದ್ದೇಶಿಸಿ, ಕಾರ‍್ಯಕ್ರಮದಲ್ಲಿ ಎಡವಟ್ಟಾಗಿದೆ, ಅದನ್ನು ಒಪ್ಪಿಕೊಂಡು ಮುಂದೆ ಸರಿಪಡಿಸುವುದಾಗಿ ತಿಳಿಸಿ, ಇದನ್ನು ಇಲ್ಲಿಗೆ ಮುಗಿಸುವ ಎಂದರು. ಆಗ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮಾತನಾಡಿ, ಎಡವಟ್ಟಾಗಿದೆ ಮುಂದೆ ಕಾರ‍್ಯಕ್ರಮ ನಡೆಸುವಾಗ ಹೀಗೆ ಆಗದಂತೆ ನೋಡಿಕೊಳ್ಳಲಾಗುವುದು, ಮತ್ತು ಈ ಬಗ್ಗೆ ಸದಸ್ಯರಿಗೆ ತಿಳಿಸುವುದಕ್ಕಾಗಿ ಸಿಬ್ಬಂದಿ ಓರ್ವರಿಗೆ ಜವಾಬ್ದಾರಿ ನೀಡಲಾಗುವುದು ಎಂದರು. ಈ ಮೂಲಕ ಸುದೀರ್ಘ ಚರ್ಚೆಗೆ ತೆರೆ ಎಳೆಯಲಾಯಿತು.
ಸಿಬ್ಬಂದಿಗಳ ಮೂಲಕ ಕಚೇರಿ ಮಾಹಿತಿ ಸೋರಿಕೆ: ಪಂಚಾಯಿತಿ ಸಭೆಯಲ್ಲಿ ಆಗುವ ಚರ್ಚೆ, ಆಕ್ಷೇಪದ ವಿವರಗಳು ಯಥಾವತ್ತಾಗಿ ಪಂಚಾಯಿತಿ ಸಿಬ್ಬಂದಿಗಳ ಮೂಲಕ ನಿರ್ದಿಷ್ಠ ಪ್ರಕರಣ ಮತ್ತು ಅದಕ್ಕೆ ಸಂಬಂಽಸಿದ ವ್ಯಕ್ತಿಗೆ ತಿಳಿಯುತ್ತದೆ, ಇದು ಸಿಬ್ಬಂದಿಗಳ ಮೂಲಕ ಸೋರಿಕೆ ಆಗುತ್ತಿದ್ದು, ಇದರಿಂದಾಗಿ ಸದಸ್ಯರುಗಳನ್ನು ಮುಜುಗರಕ್ಕೆ ಸಿಲುಕಿಸಲಾಗುತ್ತಿದೆ. ಇದು ಸರಿ ಅಲ್ಲ ಎಂದ ಸದಸ್ಯರುಗಳು ಸಿಬ್ಬಂದಿಗಳು ಯಾವುದೇ ವಿಚಾರವನ್ನು ಯಾರೇ ಕೇಳಿದರೂ ಅದನ್ನು ಪಿಡಿಒ. ಅಥವಾ ಅಧ್ಯಕ್ಷರನ್ನು ಕೇಳುವಂತೆ ತಿಳಿಸಿ, ಅದರ ಹೊರತಾಗಿ, ನಿಮ್ಮ ಲೈಸನ್ಸ್ ಯಾ ಅರ್ಜಿಗೆ ಇಂತಹ ಸದಸ್ಯರ ಆಕ್ಷೇಪ ಇದೆ ಎಂದು ನೀವು ಹೇಳಬಾರದು ಎಂದು ಸಭೆಯಲ್ಲಿ ಸಿಬ್ಬಂದಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ. ತೌಸೀ-, ಲೋಕೇಶ್ ಬೆತ್ತೋಡಿ,
ಧನಂಜಯ ಕುಮಾರ್, ವಿದ್ಯಾಲಕ್ಷ್ಮೀ ಪ್ರಭು, ಯು.ಕೆ. ಇಬ್ರಾಹಿಂ, ಸಣ್ಣಣ್ಣ ಯಾನೆ ಸಂಜೀವ ಮಡಿವಾಳ, ಅಬ್ದುಲ್ ರಶೀದ್, ಮೈಸಿದಿ ಇಬ್ರಾಹಿಂ ಮಾತನಾಡಿದರು. ಉಷಾ ನಾಯ್ಕ್, ರುಕ್ಮಿಣಿ, ಶೋಭಾ, ಜಯಂತಿ, ವನಿತಾ, ನೆಬಿಸ, ಸೌದ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಽಕಾರಿ ವಿಲ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ‍್ಯದರ್ಶಿ ದಿನೇಶ್ ವಂದಿಸಿದರು.