- ಹಿಂದು ರಾಷ್ಟ್ರ ಬಿಡಿ, ಮುಸ್ಲಿಂ ರಾಷ್ಟ್ರವನ್ನಾಗಿಯೂ ಮಾಡಲು ಬಿಡುವುದಿಲ್ಲ – ನವಾಜ್ ಕಟ್ಟೆ
- ಅಕ್ರಮವಾಗಿ ಬಂಧಿಸಿದ ನಾಯಕರನ್ನು ಬಿಡುಗಡೆಗೊಳಿಸಿ- ಎಂ.ಎ ರಫೀಕ್
ಪುತ್ತೂರು: ಎನ್‌ಐಎಯಿಂದ ಎಸ್‌ಡಿಪಿಐ ಜಿಲ್ಲಾ ಕಚೇರಿಗೆ ನಡೆಸಿದ ದಾಳಿ ಮತ್ತು ಪಿಎಫ್‌ಐ ನಾಯಕರ ಬಂಧನ ವಿರೋಧಿಸಿ ಎಸ್‌ಡಿಪಿಐ ಪಕ್ಷದಿಂದ ಪುತ್ತೂರು ದರ್ಬೆಯಲ್ಲಿ ಸೆ.24ರಂದು ಸಂಜೆ ಪ್ರತಿಭಟನೆ ನಡೆಯಿತು.
ಹಿಂದು ರಾಷ್ಟ್ರ ಬಿಡಿ, ಮುಸ್ಲಿಂ ರಾಷ್ಡ್ರವನ್ನಾಗಿ ಮಾಡಲು ಬಿಡುವುದಿಲ್ಲ:
ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ನವಾಜ್ ಕಟ್ಟೆ ಅವರು ಮಾತನಾಡಿ ಎನ್‌ಐಎ ಗೃಹ ಮಂತ್ರಿಯ ಟೂಲ್ ಕಿಟ್ ಆಗಿದೆ. ಬಾಂಬ್ ದಾಳಿ ತರಬೇತಿ ನೀಡುವ ಚಕ್ರವರ್ತಿ ಸೂಲಿಬೆಲೆ, ಬಂದೂಕು ತರಬೇತಿ ನೀಡುವ ಆರ್‌ಎಸ್‌ಎಸ್ ಕಚೇರಿಗೆ ದಾಳಿ ನಡೆಸದೆ ನಮ್ಮ ಸಮುದಾಯದ ಅಮಾಯಕ ನಾಯಕರನ್ನು ಬಂಧಿಸಿದ್ದಾರೆ. ಬಿಜೆಪಿಯ ಫ್ಯಾಸಿಸ್ಟ್‌ಗೆ ಅಡ್ಡಗಾಲಾಗಿ ನಿಂತಿರುವುದು ಎಸ್‌ಡಿಪಿಐ ಮತ್ತು ಪಿಎಫ್‌ಐ ಮಾತ್ರ. ಹಾಗಾಗಿ ಬಿಜೆಪಿಯವರು ನಮ್ಮನ್ನು ಧಮನಿಸಲು ಹೂಡಿರುವ ಅನೇಕ ತಂತ್ರಗಳು ಹಗಲು ಕನಸಾದಿತು. ನಮ್ಮ ಕಟ್ಟಕಡೆಯ ಕಾರ್ಯಕರ್ತನಿರುವ ತನಕ ಈ ದೇಶವನ್ನು ಹಿಂದು ರಾಷ್ಟ್ರ ಬಿಡಿ ಮುಸ್ಲಿಂ ರಾಷ್ಟ್ರವನ್ನಾಗಿಯೂ ಮಾಡಲು ನಾವು ಬಿಡುವುದಿಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಇರಬೇಕೆಂದರು.
ಸುಳ್ಯ ವಿಧಾನ ಕರ್ಯದರ್ಶಿ ಎಮ್.ಎ ರಫೀಕ್ ಅವರು ಮಾತನಾಡಿ ಎನ್‌ಐಎ ಎಂಬ ಗೂಬೆಗಳಿಗೆ ಪ್ರಜಾಪ್ರಭುತ್ವದ ನೈಜತೆ ಮತ್ತು ಕಾನೂನು ರಕ್ಷಣೆ ಬಗ್ಗೆ ಅರಿವಿಲ್ಲ. ಅವರು ನಮ್ಮ ನಾಯಕರನ್ನು ರಾತ್ರೋರಾತ್ರಿ ಬಂಧಿಸಿದ್ದಾರೆ. ಅಕ್ರಮವಾಗಿ ಹೇಡಿತನದಿಂದ ನಮ್ಮ ನಾಯಕರನ್ನು ಬಂಧಿಸಿದ ಎನ್‌ಐಎ ತಕ್ಷಣ ಅಮಾಯಕರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಕಚೇರಿಯನ್ನು ಹುಡಿ ಮಾಡಿ ದಾಳಿ ಮಾಡಿದ್ದು ಮಾತ್ರವಲ್ಲದೆ ಪಿಎಫ್ಐ ನಾಯಕರುಗಳನ್ನು ರಾತ್ರೋರಾತ್ರಿ ಬಂಧಿಸಿದ ಎನ್‌ಐಎ ಮತ್ತು ಬಿಜೆಪಿ ಸರಕಾರದ ದೂರಾಲೋಚನೆಯಾಗಿದೆ. ಇದರ ವಿರುದ್ಧ ಘೋಷಣೆ ಕೂಗಲಾಯಿತು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಹಮೀದ್ ಸಾಲ್ಮರ, ಕಾರ್ಯದರ್ಶಿ ಯಯ್ಯ ಕೂರ್ನಡ್ಕ, ಜಿಲ್ಲಾ ಉಪಾಧದ್ಯಕ್ಷ ವಿಕ್ಟರ್ ಮಾರ್ಟಿಸ್, ಸಂಘಟನ ಕಾರ್ಯದರ್ಶಿ ಅಶ್ರಫ್‌ಬಾವು, ನಗರ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಪುತ್ತೂರು ಉಸ್ತುವಾರಿ ಅಕ್ಬರ್ ಬೆಳ್ತಂಗಡಿ, ಎಸ್‌ಡಿಟಿಯು ತಾಲೂಕು ಸಮಿತಿಯ ಜುನೈದ್ ಸಾಲ್ಮರ, ಹಾಜಿ ಅಬ್ದುಲ್ ಹಮೀದ್ ಮೆಜಿಸ್ಟಿಕ್, ಬದ್ರುದ್ದೀನ್, ಮುನೀರ್ ಪುಣಚ, ಮುಸ್ತಾಫ ಮುಸ್ಲಿಯಾರ್ ಉಪ್ಪಿನಂಗಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪ್ರತಿಭಟನಾ ಬ್ಯಾನರ್‌ನಲ್ಲಿ ದರ್ಬೆಯಿಂದ ತಾಲೂಕು ಆಡಳಿತದ ತನಕ ಕಾಲ್ನಡಿಗೆ ಜಾಥಾ ಎಂದು ಉಲ್ಲೇಖಿಸಲಾಗಿತ್ತು. ಆದರೆ ಪೊಲೀಸರ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಜಾಥಾವನ್ನು ರದ್ದುಪಡಿಸಿ, ದರ್ಬೆಯಲ್ಲೇ ಸಾಂಕೇತಿಕ ಪ್ರತಿಭಟನೆ ನಡೆಯಿತು.