ಕೂಡುರಸ್ತೆ ಪರಿಸರದಲ್ಲಿ ತೀವ್ರ ನೆಟ್‌ವರ್ಕ್ ಸಮಸ್ಯೆ

0

ನೊಂದ ಮೊಬೈಲ್ ಬಳಕೆದಾರರಿಂದ ಸಾಂಕೇತಿಕ ಪ್ರತಿಭಟನೆ-ಸಿಮ್ ಪೋರ್ಟ್ ಅಭಿಯಾನಕ್ಕೆ ನಿರ್ಧಾರ

ಪುತ್ತೂರು: ನೆಟ್‌ವರ್ಕ್ ಸಮಸ್ಯೆಯಿಂದ ರೋಸಿ ಹೋಗಿರುವ ಸರ್ವೆ ಗ್ರಾಮದ ಕೂಡುರಸ್ತೆ ಪರಿಸರದ ಜನತೆ ಸಾಮೂಹಿಕ ಸಿಮ್ ಪೋರ್ಟ್‌ಗೆ ನಿರ್ಧರಿಸಿದ್ದು ಆ ಪ್ರಯುಕ್ತ ಸೆ.25ರಂದು ಕೂಡುರಸ್ತೆ ಜಂಕ್ಷನ್‌ನಲ್ಲಿ ಭಿತ್ತಿ ಪತ್ರ ಹಿಡಿದು ಸಾಂಕೇತಿಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಕೂಡುರಸ್ತೆ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವ ಬಗ್ಗೆ ಅನೇಕ ಸಮಯಗಳಿಂದ ಅಳಲು ತೋಡಿಕೊಳ್ಳುತ್ತಿರುವ ಪರಿಸರದ ಮೊಬೈಲ್ ಬಳಕೆದಾರರು ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿ ಟವರ್ ನಿರ್ಮಿಸಲು ಕೇಳಿಕೊಂಡಿದ್ದರು. ಆದರೆ ಇವರ ಬೇಡಿಕೆ ಮಾತ್ರ ಈಡೇರಲೇ ಇಲ್ಲ. ಈ ಭಾಗದಲ್ಲಿ ನೂರಾರು ಮಂದಿ ಮೊಬೈಲ್ ಬಳಕೆದಾರರಿದ್ದು ಬಹುತೇಕರು ಏರ್‌ಟೆಲ್ ಸಿಮ್ ಬಳಕೆದಾರರಾಗಿದ್ದಾರೆ. ಇದೀಗ ಇಲ್ಲಿನ ಬಳಕೆದಾರರು ಸಿಮ್ ಪೋರ್ಟ್‌ಗೆ ಮುಂದಾಗಿದ್ದರೂ ಇಲ್ಲಿಗೆ ಹೊಸ ಟವರ್ ಅಳವಡಿಕೆಯಿಂದ ಮಾತ್ರ ಇಲ್ಲಿನ ಸಮಸ್ಯೆ ಬಗೆಹರಿಸಬಹುದಾಗಿದೆ ಎನ್ನಲಾಗುತ್ತಿದೆ.

ಮೊಬೈಲ್ ಎನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಎಂಬಂತಹ ಪ್ರಸಕ್ತ ಸನ್ನಿವೇಶದಲ್ಲಿ ನೆಟ್‌ವರ್ಕ್ ಇಲ್ಲದೇ ಪರದಾಡುತ್ತಿರುವ ನಮ್ಮ ಸಮಸ್ಯೆಯನ್ನು ಸಂಬಂಧಪಟ್ಟವರು ಯಾರು ಕೂಡಾ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಆರೋಪ ಈ ಭಾಗದ ಮೊಬೈಲ್ ಬಳಕೆದಾರರದ್ದಾಗಿದ್ದು ಮುಂದಿನ ಕೆಲವೇ ದಿನಗಳಲ್ಲಿ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಸಿಗದೇ ಇದ್ದಲ್ಲಿ ಸಿಮ್ ಪೋರ್ಟ್ ಅಭಿಯಾನ ಮಾಡುವುದರ ಜೊತೆಗೆ ಪ್ರತಿಭಟನೆಯನ್ನು ಕೂಡಾ ಹಮ್ಮಿಕೊಳ್ಳುವುದಾಗಿ ಆ ಭಾಗದ ಮೊಬೈಲ್ ಬಳಕೆದಾರರು ಹೇಳಿಕೊಂಡಿದ್ದಾರೆ.

ಮನೆಯ ಒಳಗೂ, ಹೊರಗೂ ಒಂದೇ ರೀತಿಯ ನೆಟ್‌ವರ್ಕ್ ಸಮಸ್ಯೆ ಈ ಭಾಗದಲ್ಲಿದ್ದು ಮೊಬೈಲನ್ನೇ ಮಾರಿ ಬಿಡೋಣ ಎಂದೆನಿಸುತ್ತದೆ ಎಂದು ಕೂಡುರಸ್ತೆಯ ಹಿರಿಯ ವ್ಯಕ್ತಿಯೊಬ್ಬರು ಪತ್ರಿಕೆ ಜೊತೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾಂಕೇತಿಕ ಪ್ರತಿಭಟನೆಯಲ್ಲಿ ಅಬ್ದುಲ್ ಮಜೀದ್ ಬಾಳಾಯ, ಹನೀಫ್ ಕೂಡುರಸ್ತೆ, ಇಸ್ಮಾಯಿಲ್ ಕ್ಯಾಪ್ಟನ್, ಹಂಝ ಕೂಡುರಸ್ತೆ, ಶರೀಫ್ ಎಲಿಯ, ಹಾರಿಸ್ ಕೂಡುರಸ್ತೆ, ಜಗದೀಶ ಬಾಳಾಯ, ರಝಾಕ್ ಕೂಡುರಸ್ತೆ, ಹಮೀದ್ ಕೂಡುರಸ್ತೆ, ರಮೇಶ್ ಕೂಡುರಸ್ತೆ, ಶರೀಫ್ ಅಜ್ಜಿಕಲ್ಲು, ಬಶೀರ್ ಕೂಡುರಸ್ತೆ, ಸಿದ್ದೀಕ್ ಅಜ್ಜಿಕಲ್ಲು, ನಾಸಿರ್ ಅಜ್ಜಿಕಲ್ಲು, ಸಾದಿಕ್ ಬಾಳಾಯ, ನೌಫಲ್ ಎ.ಆರ್, ನೌಶಾದ್ ಕುಡುರಸ್ತೆ, ರಫೀಕ್ ಅಜ್ಜಿಕಲ್ಲು ಉಪಸ್ಥಿತರಿದ್ದರು.

ಸಿಮ್ ಪೋರ್ಟ್ ಅಭಿಯಾನಕ್ಕೆ ನಿರ್ಧಾರ:

ಕೂಡುರಸ್ತೆ ಆಸುಪಾಸಿನಲ್ಲಿ ನೂರಾರು ಮನೆಗಳಿದ್ದು ಸುಮಾರು 600ಕ್ಕಿಂತಲೂ ಮಿಕ್ಕಿದ ಮೊಬೈಲ್ ಬಳಕೆದಾರರಿದ್ದಾರೆ. ಬಹುತೇಕರು ಹಲವಾರು ವರ್ಷಗಳಿಂದ ಏರ್‌ಟೆಲ್ ಸಿಮ್ ಬಳಕೆದಾರರಾಗಿದ್ದಾರೆ. ನೆಟ್‌ವರ್ಕ್ ಸಮಸ್ಯೆ ಬಗ್ಗೆ ನಾವು ಸಂಬಂಧಪಟ್ಟವರಲ್ಲಿ ಹಲವು ಬಾರಿ ತಿಳಿಸಿದ್ದರೂ ಅದಕ್ಕೆ ಸ್ಪಂದನೆ ಸಿಗದ ಪರಿಣಾಮ ನಮ್ಮ ಸಮಸ್ಯೆ ಹಾಗೆಯೇ ಮುಂದುವರಿದಿದೆ. 4ಜಿ, 5ಜಿ ಕಾಲಘಟ್ಟದಲ್ಲೂ ಈ ಸ್ಥಿತಿ ನಮ್ಮ ಪಾಲಿಗೆ ಬಂದಿರುವುದು ಖೇದಕರ. ನಮ್ಮ ಸಮಸ್ಯೆಗೆ ಸಂಬಂಧಪಟ್ಟವರು ತಕ್ಷಣ ಸ್ಪಂಧಿಸದೇ ಇದ್ದಲ್ಲಿ ಸಿಮ್ ಪೋರ್ಟ್ ಅಭಿಯಾನ ಶೀಘ್ರದಲ್ಲೇ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಮಜೀದ್ ಬಾಳಾಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here