ಡಾ.ಎ.ಪಿ ಭಟ್‌ರವರ 2ನೇ ಕೃತಿ ವೈದ್ಯರ ಚೌ ಚೌ ಬಾತ್ ಬಿಡುಗಡೆ

0

  • ದೂರದೃಷ್ಟಿತ್ವದ, ತೆರೆದ ಮನಸ್ಸಿನಂತೆ ಕೃತಿ ಮೂಡಿ ಬಂದಿದೆ-ಭಾಸ್ಕರ ಕೋಡಿಂಬಾಳ

ಪುತ್ತೂರು: ಡಾ.ಎ.ಪಿ ಭಟ್‌ರವರ ಸಾಹಿತ್ಯ ಭಾಷೆಯು ನಮ್ಮಲ್ಲಿ ಸಾಮೀಪ್ಯ ಹಾಗೂ ಸಾಂಗತ್ಯವನ್ನು ಉಂಟು ಮಾಡುತ್ತದೆ ಮಾತ್ರವಲ್ಲದೆ ಅವರು ಗೆಳೆತನಕ್ಕೆ, ಮಾನವೀಯ ಸಂಬಂಧಗಳಿಗೆ ಬಹಳ ಪ್ರಾಮುಖ್ಯತೆ ನೀಡುವವರಾಗಿದ್ದಾರೆ. ಡಾ.ಎ.ಪಿ ಭಟ್‌ರವರು ಬರೆದ ಎರಡೂ ಕೃತಿಗಳು ದೂರದೃಷ್ಟಿತ್ವದಿಂದ ಕೂಡಿದ್ದು, ತೆರೆದ ಮನಸ್ಸಿನಂತೆ ಹೊಂದಿಕೊಳ್ಳುವಂತೆ ಇವೆ ಎಂದು ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರು ಹೇಳಿದರು.

ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಎ.ಪಿ ಭಟ್‌ರವರ ಮೊದಲ ಕೃತಿ `ವೈದ್ಯರ ವಗೈರೆಗಳು’ ಇದೀಗ ಎರಡನೇ ಕೃತಿಯಾಗಿರುವ `ವೈದ್ಯರ ಚೌ ಚೌ ಬಾತ್’ ಇದರ ಬಿಡುಗಡೆ ಮತ್ತು ಉಪನ್ಯಾಸ ಕಾರ್ಯಕ್ರಮವು ಸೆ.೨೫ ರಂದು ಸಂಜೆ ದರ್ಬೆ ವಿದ್ಯಾನಗರ ಬಹುವಚನಂ ಪದ್ಮಿನೀ ಸಭಾಭವನದಲ್ಲಿ ಜರಗಿದ್ದು, ಈ ಸಮಾರಂಭದಲ್ಲಿ ಅವರು ನೂತನ ಕೃತಿಯ ಪರಿಚಯವನ್ನು ನೆರವೇರಿಸುವ ಮೂಲಕ ಮಾತನಾಡಿದರು. ಡಾ.ಎ.ಪಿ ಭಟ್‌ರವರೋರ್ವ ಕಲೆಗಾರ, ಸಾಹಿತಿಗಾರ ಮತ್ತು ಸಂಗೀತ ಪ್ರೇಮಿಯಾಗಿದ್ದಾರೆ. ಅವರಲ್ಲಿ ಅಧ್ಯಯನಶೀಲತೆ, ಕಾರ್ಯತತ್ಪರತೆ ಹಾಗೂ ಭಾವ ಪ್ರಬುದ್ಧತೆ ಮೇಳೈಸಿದೆ. ಅವರು ಕೃತಿಯನ್ನು ಸರಳ ಭಾಷೆಯಲ್ಲಿ ಹಾಸ್ಯದ ಧಾಟಿಯಲ್ಲಿ ಬಹಳ ವಿದ್ವತ್ ಆಗಿ ಬರೆದಿದ್ದಾರೆ. ಮನುಷ್ಯನ ಅಂತರಂಗದಿಂದ ಬರುವ ವಿಚಾರಗಳೇ ಮನುಷ್ಯನ ನಿಜವಾದ ಬಯೋಡಾಟ ಎಂದು ಡಾ.ಎ.ಪಿ ಭಟ್‌ರವರ ವಿಚಾರಧಾರೆಯಾಗಿದೆ. ಬಡತನದಲ್ಲಿ ಹುಟ್ಟಿರುವ ಡಾ.ಎ.ಪಿ ಭಟ್‌ರವರಲ್ಲಿ ಜೀವನ ಮೌಲ್ಯ ರೂಪಿಸಿದೆ ಎಂದ ಅವರು ಉದ್ಯೋಗ, ಅಂತಸ್ತು ಯಾವುದೂ ಮುಖ್ಯವಲ್ಲ, ಬದಲಾಗಿ ಸಮಾಜದಲ್ಲಿ ನಾವು ಹೇಗೆ ಬದುಕನ್ನು ಕಂಡುಕೊಂಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಮನುಷ್ಯ ಎಷ್ಟೇ ದೊಡ್ಡವನಾಗಿರಲಿ ಅವನಲ್ಲಿ ಒಳ್ಳೆಯ ಗುಣವಿರಬೇಕು. ಡಾ.ಎ.ಪಿ ಭಟ್‌ರವರು ಮೌನ ಸಾಧಕರನ್ನು, ವಿದ್ವತ್ ಸಾಧಕರನ್ನು, ಸರಳ ಸಾಧಕರನ್ನು ಗೌರವಿಸುವ ಮನೋಭಾವವುಳ್ಳವವರಾಗಿದ್ದಾರೆ. ವೈದ್ಯ ವೃತ್ತಿಯೊಂದಿಗೆ ಕೃತಿಗಳನ್ನು ರಚಿಸುವ ಅವರ ಪ್ರವೃತ್ತಿ ಮುಂದುವರೆಯಲಿ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಡಾ.ಸುಲೇಖಾ ವರದರಾಜ್‌ರವರು ನೂತನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಎ.ಪಿ ಭಟ್‌ರವರು ವೈದ್ಯರಾಗಿದ್ದು, ಲೇಖನ ಬರೆಯುವ ಮೂಲಕ ಅವರೊಳಗೆ ಕವಿ ಮನಸ್ಸು ಕೂಡ ಇದೆ. ಅವರೋರ್ವ ಕಲಿಕಾ ಆಸಕ್ತಿಯಿರುವ ವೈದ್ಯ ವಿಜ್ಞಾನಿಯಾಗಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಕ್ತಿತ್ವ ನಿರ್ಮಾಣದ ಕಾಯಕವನ್ನು ಮಾಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯಕೀಯ ವಿಜ್ಞಾನಿಗಳ ಅಗತ್ಯ ಬಹಳಷ್ಟಿದೆ. ಡಾ.ಎ.ಪಿ ಭಟ್‌ರವರಲ್ಲಿ ಬರುವ ರೋಗಿಗಳು ಅವರ ಹಾಸ್ಯದ ಧಾಟಿಯ ಮಾತುಗಳಿಂದಲೇ ರೋಗಿಯ ಅರ್ಧ ರೋಗವನ್ನು ಅವರು ಗುಣಪಡಿಸಲು ಶಕ್ತರು. ಜೊತೆಗೆ ರೋಗಿಗಳಿಗೆ ಕೌನ್ಸಿಲಿಂಗ್ ಮಾಡುವ ಸಹನೆ ಕೂಡ ಅವರಲ್ಲಿದೆ ಎಂದರು.

ನೂತನ ಕೃತಿ ಬರೆಯುವ ಸಂದರ್ಭದಲ್ಲಿ ಅಕ್ಷರ ವಿನ್ಯಾಸದಲ್ಲಿ ತನ್ನೊಂದಿಗೆ ಸಹಕರಿಸಿದ ಶ್ರೀಮತಿ ಜಯಲಕ್ಷ್ಮಿ ಜೋಯಿನ್ ಹಾಗೂ ಮುದ್ರಕ ಕಲ್ಲೂರು ನಾಗೇಶ್‌ರವರಿಗೆ ಗೌರವ ಪ್ರತಿಯನ್ನು ಸ್ಮರಣಿಕೆಯನ್ನಾಗಿ ಡಾ.ಎ.ಪಿ ಭಟ್‌ರವರು ನೀಡಿದರು. ಕು|ಪ್ರಿಯಂವಧ ಶ್ರೀಶಕುಮಾರ್ ಪ್ರಾರ್ಥಿಸಿದರು. ಬಹುವಚನಂ ಇದರ ಸಂಸ್ಥಾಪಕ ಡಾ|ಶ್ರೀಶಕುಮಾರ್‌ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಕರ್ಮಿ ಕಲಾವಿದ, ನಾಟಕಕಾರ ಐ.ಕೆ ಬೊಳುವಾರುರವರು ಕಾರ್ಯಕ್ರಮ ನಿರೂಪಿಸಿದರು.

ಹಿರಿಯರನ್ನು ಗೌರವಿಸುವ ಗುಣವಿರಲಿ..
ಸಮಾಜದಲ್ಲಿನ ಹಿರಿಯರು, ಜ್ಞಾನಿಗಳನ್ನು ನಾವು ಗುರುತಿಸುವವರಾಗಬೇಕು. ಪುಸ್ತಕದಲ್ಲಿ ಅನೇಕ ಸಾಧಕರ ಬಗ್ಗೆ ತನ್ನದೇ ಶೈಲಿಯಲ್ಲಿ ಬರೆದಿದ್ದೇನೆ. ಊರಿನ ಹಿರಿಮೆ ಹೆಚ್ಚಿಸಿದವರನ್ನು ನಾವು ಎಂದಿಗೂ ಮರೆಯಕೂಡದು. ಯಾಕೆಂದರೆ ಅವರುಗಳು ಎಂದಿಗೂ ಫ್ಲೆಕ್ಸ್‌ಗಳನ್ನು ಹಾಕಿಕೊಳ್ಳುವುದಿಲ್ಲ. ತಲೆನೋವಿಗೆ ಮುಖ್ಯ ಕಾರಣ ಮಾನಸಿಕ ಉದ್ವೇಗವಾಗಿದೆ. ವೈದ್ಯಕೀಯ ತಂತ್ರಜ್ಞಾನವು ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ನಿರ್ದಿಷ್ಟ ವಿಷಯಗಳ ಬಗ್ಗೆ ಅರಿವಿರೋದಿಲ್ಲ. ನಮ್ಮ ಆಸ್ಪತ್ರೆಯ ಸಿಬ್ಬಂದಿಗಳಿಗೆ ನನ್ನಲ್ಲಿ ಚಿಕಿತ್ಸೆಗೆಂದು ಬರುವ ಹಿರಿಯ ಸಾಧಕರನ್ನು ಪರಿಚಯಿಸಿ, ಅವರ ಸಾಧನೆಗಳನ್ನು ಹೇಳಿ, ಅವರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಿರುತ್ತೇನೆ. ನಾವು ಎಂದಿಗೂ ನಮ್ಮ ಹಿರಿಯರನ್ನು ಗೌರವಿಸುವ ಮನೋಭಾವನೆಯುಳ್ಳ ಗುಣವನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಡಾ.ಎ.ಪಿ ಭಟ್, ವೈದ್ಯರ ಚೌ ಚೌ ಬಾತ್ ಕೃತಿಯ ಲೇಖಕರು

ಗುರುಗಳಿಗೆ ಸನ್ಮಾನ..
ಡಾ.ಎ.ಪಿ ಭಟ್‌ರವರ ಪ್ರಾಥಮಿಕ ವಿದ್ಯಾಭ್ಯಾಸದ ಸಂದರ್ಭ ಕ್ರೀಡೆಯನ್ನು ಶಾಸ್ತ್ರೀಯವಾಗಿ ಹೇಗೆ ಆಡುವುದು ಮತ್ತು ಶಾಲೆಯಲ್ಲಿ ಭಾರತ ಸೇವಾದಳ ಘಟಕವನ್ನು ಹುಟ್ಟು ಹಾಕಿಸಿದ ರಾಮರಾವ್ ಮೇಸ್ಟ್ರು, ಓದುವ ಹವ್ಯಾಸವನ್ನು ಬೆಳೆಸಿದ್ದು ಹಾಗೂ ವಿಜ್ಞಾನ ಸಂಘವನ್ನು ಆರಂಭಿಸಿದ ವಿಜ್ಞಾನ ಮೇಸ್ಟ್ರು ಶ್ರೀಪತಿ ರಾವ್, ಜ್ಯೂನಿಯರ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರೂ, ಪ್ರೌಢಶಾಲೆಯಲ್ಲಿ ಶಿಕ್ಷಣ ನೀಡುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದ ಸುಬ್ಬಣ್ಣ ಭಟ್ ಮೇಸ್ಟ್ರುರವರುಗಳನ್ನು ಗುರುತಿಸಿ ಡಾ.ಎ.ಪಿ ಭಟ್‌ರವರು ಶಾಲು ಹೊದಿಸಿ ಸನ್ಮಾನಿಸಿ, ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದರು.

ಪ್ರತಿಗಳಿಗೆ ಸಂಪರ್ಕಿಸಿ..
ಡಾ.ಎ.ಪಿ ಭಟ್‌ರವರ ಮೊದಲ ಕೃತಿ `ವೈದ್ಯನ ವಗೈರೆಗಳು’, ಎರಡನೇ ಕೃತಿ `ವೈದ್ಯನ ಚೌ ಚೌ ಬಾತ್’ ಪ್ರತಿಗಳು ಬೇಕಿದ್ದಲ್ಲಿ ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡೆಂಕೇರಿ(ಮೊ:8296352905) ನಂಬರಿಗೆ ಸಂಪರ್ಕಿಸಿ ಪ್ರತಿಯನ್ನು ಪಡೆದುಕೊಳ್ಳಬಹುದು.

 

 

 

LEAVE A REPLY

Please enter your comment!
Please enter your name here