ಗ್ರಾ.ಪಂ.ನೌಕರರ ಶ್ರೇಯೋಭಿವೃದ್ದಿ ಸಂಘದ ಸಮಾಲೋಚನಾ ಸಭೆ

0

ಸೇವೆ ಖಾಯಂಗೆ ರಾಜ್ಯಮಟ್ಟದಲ್ಲಿ ಹೋರಾಟಕ್ಕೆ ನಿರ್ಧಾರ

ನೆಲ್ಯಾಡಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್. ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ಬಿ.ಸಿ.ರೋಡ್‌ನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಸೆ.೨೪ರಂದು ನಡೆಯಿತು.

ಪಂಚಾಯತ್ ನೌಕರರು ಕಳೆದ ಮೂರು ದಶಕಗಳಿಂದ ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆಯನ್ನು ಗ್ರಾಮ ಪಂಚಾಯತ್‌ನಲ್ಲಿ ನೀಡುತ್ತಾ ಬಂದಿದ್ದೇವೆ. ಗ್ರಾಮ ಪಂಚಾಯತ್‌ನಲ್ಲಿ ಸೇವೆ ಮಾಡುವ ನೌಕರರನ್ನು ಖಾಯಂಗೊಳಿಸಿ ಸಿ. ಮತ್ತು ಡಿ.ಗ್ರೂಪ್ ನೌಕರರನ್ನಾಗಿ ನೇಮಕ ಮಾಡಬೇಕು. ಮುಂದಿನ ದಿನಗಳಲ್ಲಿ ನೌಕರರ ಶ್ರೇಯಕ್ಕೆ ಹಾಗೂ ಅಭಿವೃದ್ಧಿಗಾಗಿ ಮತ್ತು ಅಗತ್ಯ ಮೂಲ ಸೌಕರ್ಯಗಳ ಪಡೆಯಲು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುವ ಬಗ್ಗೆ ಯೋಜನೆ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮರವರು ಮಾತನಾಡಿ, ಗ್ರಾಮ ಪಂಚಾಯತ್ ನೌಕರರ ಹೋರಾಟಕ್ಕೆ ಇತರ ಎಲ್ಲಾ ಸರಕಾರಿ ಸಂಘಟನೆಗಳ ಬೆಂಬಲವನ್ನು ಪಡೆಯಲಾಗುವುದು. ೨೦೧೪ರಿಂದ ಪಂಚಾಯತ್ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಹಾಗೂ ಮಾತುಕತೆಯ ಮೂಲಕ ಸಾಧ್ಯವಾದಷ್ಟು ಹೋರಾಟ ಮಾಡುತ್ತಾ ಬರಲಾಗಿದೆ. ನೌಕರರ ವಿಷಯದಲ್ಲಿ ಇಲಾಖೆಯಲ್ಲಿ ಇದ್ದ ಹಲವಾರು ನ್ಯೂನ್ಯತೆ ಹಾಗೂ ಸಮಸ್ಯೆಗಳಿಗೆ ಇಲಾಖೆಗೆ ಒತ್ತಡ ತರುವ ಮೂಲಕ ಬದಲಾವಣೆ ತರಲಾಗಿದೆ. ಗ್ರಾಮ ಪಂಚಾಯತ್ ನೌಕರರ ಪ್ರತಿ ಸಮಸ್ಯೆಗಳ ಬಗ್ಗೆ ಸಂಘಟನೆಗೆ ಅರಿವಿದ್ದು, ರಾಜ್ಯ ಮಟ್ಟದ ಹೋರಾಟದ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದೇವೆ. ಇದಕ್ಕೆ ಆರ್ಥಿಕ ಹಾಗೂ ಜನ ಬೆಂಬಲವಿದ್ದು ಮುಂದಿನ ಪ್ರತಿಯೊಂದು ಹೋರಾಟಗಳಿಗೆ ನಮಗೆ ಖಂಡಿತ ಜಯ ಸಿಗಲಿದೆ. ಸಂಘದ ಎಲ್ಲಾ ಸದಸ್ಯರು ಒಗ್ಗಟ್ಟಿನ ಬಲಪ್ರದರ್ಶನ ಮಾಡಿದಾಗ ಸರಕಾರ ಎಚ್ಚೆತ್ತುಕೊಂಡು ನಮ್ಮ ಕೂಗಿಗೆ ಬೆಲೆ ನೀಡಬಹುದು ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ಪದ್ಮನಾಭ ಆರ್.ಕುಲಾಲ್ ಮುದ್ರಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಶೋಧರ ಶಿರ್ತಾಡಿ, ಉಡುಪಿ ಜಿಲ್ಲಾ ಉಪಾಧ್ಯಕ್ಷ ಹೇಮಚಂದ್ರ ನಂದಳಿಕೆ, ಕೋಶಾಧಿಕಾರಿ ಸಚಿನ್ ಮಣಿಪುರ, ಸದಸ್ಯ ನಿತೇಶ್ ಕುಮಾರ್, ಮೂಡಬಿದರೆ ತಾಲೂಕು ಸಮಿತಿ ಅಧ್ಯಕ್ಷ ರಾಕೇಶ್ ಕುಮಾರ್, ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಮೋಹನ್, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಹೊನ್ನಪ್ಪ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ನೇತ್ರಾವತಿ, ಕಡಬ ತಾಲೂಕು ಸಮಿತಿ ಅಧ್ಯಕ್ಷೆ ಪುಷ್ಪಾ ಜಯಂತ್, ಜಿಲ್ಲಾ ಸಂಘದ ಸದಸ್ಯ ಲಕ್ಷಣ್, ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ರುಕೇಶ್, ಕಾರ್ಕಳ ತಾಲೂಕು ಸಂಘದ ನಿಕಟಪೂರ್ವ ಅಧ್ಯಕ್ಷ ಸೈಪುಲ್ಲಾ, ಸುಳ್ಯ ತಾಲೂಕು ಸಮಿತಿ ಕಾರ್ಯದರ್ಶಿ ಯಶವಂತ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯನ್ನು ಹಾಗೂ ಮಹಿಳಾ ಘಟಕ ಮತ್ತು ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು.

LEAVE A REPLY

Please enter your comment!
Please enter your name here