ಜಯಪ್ರಕಾಶ್ ಬದಿನಾರು ನೇತೃತ್ವದಲ್ಲಿ ಫಲಾನುಭವಿಗೆ ಮನೆ ಹಸ್ತಾಂತರ
* ಹೆಸರು ಬಹಿರಂಗ ಪಡಿಸದಂತೆ ಷರತ್ತು ವಿಧಿಸಿ ಮನೆ ನಿರ್ಮಿಸಿಕೊಟ್ಟ ದಾನಿ
* ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಂದ ಗೃಹಪ್ರವೇಶ ಕಾರ್ಯಕ್ರಮ
* ವಿಜಯದಶಮಿಯ ಮೊದಲು ಮನೆ ನಿರ್ಮಾಣವಾಗಿದೆ-ಜಯಪ್ರಕಾಶ್ ಬದಿನಾರು
ಪುತ್ತೂರು: ಹೆಸರು ಹೇಳಲು ಇಚ್ಛಿಸದ ದಾನಿಯೋರ್ವರ ಸಹಕಾರದೊಂದಿಗೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರು ಅವರ ನೇತೃತ್ವದಲ್ಲಿ ನಿರ್ಮಾಣವಾದ ‘ಬೆಳಕು’ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸುವ ಮತ್ತು ಗೃಹಪ್ರವೇಶ ಮಾಡುವ ಕಾರ್ಯಕ್ರಮ ಸೆ.೨೯ರಂದು ನಡೆಯಿತು. ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಗ್ರಾಮದ ವಾರ್ಡ್ ೨ರ ಅರ್ಬಿ ಎಂಬಲ್ಲಿ ಬಡ ಕುಟುಂಬವೊಂದು ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಕುರಿತು ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಬದಿನಾರುರವರು ತನ್ನ ಆಪ್ತರಾಗಿರುವ ಪಿಡಬ್ಲ್ಯೂಡಿ ಗುತ್ತಿಗೆದಾರರೋರ್ವರಿಗೆ ತಿಳಿಸಿದ್ದರು. ತಕ್ಷಣವೇ ಸ್ಪಂದಿಸಿದ್ದ ಗುತ್ತಿಗೆದಾರರು ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ಸಂಪೂರ್ಣ ಸಹಕಾರ ನೀಡಿದ್ದರಲ್ಲದೆ ಮೂರು ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಸಿದ್ದರು. ಆದರೆ, ತಾನು ಮನೆ ನಿರ್ಮಿಸಿಕೊಡುವುದನ್ನಾಗಲೀ, ನನ್ನ ಹೆಸರನ್ನು ಬಹಿರಂಗ ಪಡಿಸುವುದಾಗಲೀ ಮಾಡಬಾರದು ಎಂದು ದಾನಿ ಷರತ್ತು ವಿಧಿಸಿದ್ದರು. ಅದರಂತೆ ಬಡಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಟ್ಟ ದಾನಿಯ ಹೆಸರನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಅಲ್ಲದೆ, ಮನೆ ಹಸ್ತಾಂತರ ಮಾಡುವ ಕಾರ್ಯಕ್ರಮಕ್ಕೂ ಮನೆಯ ದಾನಿ ಬಂದಿರಲಿಲ್ಲ. ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಜಯಪ್ರಕಾಶ್ ಬದಿನಾರು ಅವರ ನೇತೃತ್ವದಲ್ಲಿಯೇ ಮನೆ ಹಸ್ತಾಂತರ ಮತ್ತು ಗೃಹ ಪ್ರವೇಶ ಸರಳವಾಗಿ ನಡೆಯಿತು. ಗೃಹಪ್ರವೇಶ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮಾತನಾಡಿ, ಇದು ಅತ್ಯಂತ ಅವಿಸ್ಮರಣೀಯ ಕ್ಷಣವಾಗಿದೆ. ಹೊಳೆಯ ಬದಿಯಲ್ಲಿ ಮನೆಯಿಲ್ಲದೆ ಬದುಕು ಸಾಗಿಸುತ್ತಿದ್ದವರಿಗೆ ಈ ರೀತಿಯ ವ್ಯವಸ್ಥೆ ಆಗಿದ್ದು ಹಾಗೂ ಅದನ್ನು ಹಸ್ತಾಂತರ ಮಾಡಲು ನಮಗೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದರು. ಮನೆಕಟ್ಟಿಸಿದ ದಾನಿ ತಮ್ಮ ಹೆಸರನ್ನೂ ಹೇಳಲು ಇಚ್ಛಿಸದೆ ಸಹಾಯ ಮಾಡಿರುವುದು ಮಾದರಿ ಕಾರ್ಯವಾಗಿದೆ ಎಂದ ಶಕುಂತಳಾ ಶೆಟ್ಟಿಯವರು, ‘ಬೆಳಕು’ ಹೆಸರಿನ ಈ ಮನೆ ಫಲಾನುಭಗಳ ಪಾಲಿಗೆ ಬೆಳಕಾಗಲಿ. ಮನೆ ನಿರ್ಮಾಣದ ಹಿಂದೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದ ಜಯಪ್ರಕಾಶ್ ಬದಿನಾರು ಅವರಿಂದ ಇನ್ನಷ್ಟು ಸಮಾಜಮುಖಿ ಕೆಲಸ ನಡೆಯುವಂತಾಗಲಿ ಎಂದು ಹಾರೈಸಿದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ಮಾತನಾಡಿ, ಅರ್ಹರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಪಾದನೆ ಸಾಧ್ಯವಾಗುತ್ತದೆ. ಅನೇಕ ಅಡೆತಡೆಗಳ ಬಳಿಕ ಈ ಮನೆ ನಿರ್ಮಾಣವಾಗಿ ಅವರಿಗೆ ಸೂರಿನ ವ್ಯವಸ್ಥೆಯಾಗಿರುವುದು ದೈವೇಚ್ಚೆಯಾಗಿದೆ ಎಂದರು. ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ಮಾತನಾಡಿ, ಬಡ ಕುಟುಂಬದ ಪರಿಸ್ಥಿತಿ ಬಿಲ್ಲವ ಸಂಘದ ಗಮನಕ್ಕೆ ಬಾರದೆ ಬಾಕಿಯಾಗಿತ್ತು. ಆದರೂ ಸಂಘದ ಪ್ರಮುಖರ ಮೂಲಕ ಸಹಾಯ ಮಾಡುವ ಕೆಲಸಗಳೂ ಆಗಿವೆ. ಮುಂದಕ್ಕೆ ಈ ರೀತಿಯ ಪರಿಸ್ಥಿತಿಯಿರುವ ಮನೆಗಳಿಗೆ ಬಿಲ್ಲವ ಸಂಘ ಸಹಕಾರ ನೀಡುತ್ತದೆ ಎಂದರು. ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಸಾಮಾಜಿಕ ಮುಂದಾಳುಗಳಾದ ಎ. ಜತೀಂದ್ರ ಶೆಟ್ಟಿ ಅಲಿಮಾರ, ಯೋಗೀಶ್ ಸಾಮಾನಿ ಸಂಪಿಗೆದಡಿ, ಪ್ರಭಾಕರ ಸಾಲ್ಯಾನ್, ಪಿಡಿಓ ರೋಹಿತಾಶ್ವ ಮತ್ತಿತರರು ಉಪಸ್ಥಿತರಿದ್ದರು. ಫಲಾನುಭವಿ ಬೇಬಿ ಗೋಪಾಲಕೃಷ್ಣರವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ವಿಜಯದಶಮಿಯ ಮೊದಲು ಮನೆ ನಿರ್ಮಾಣವಾಗಿದೆ-ಜಯಪ್ರಕಾಶ್ ಬದಿನಾರು
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಬಿ ಎಂಬಲ್ಲಿ ನಾವು 2015ರಲ್ಲಿ 29 ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವ ಕಾರ್ಯಕ್ರಮ ಪಂಚಾಯತ್ ವತಿಯಿಂದ ಮಾಡಿದ್ದೆವು. ಆ ಫಲಾನುಭವಿಗಳಲ್ಲಿ ಬೇಬಿ ಗೋಪಾಲಕೃಷ್ಣ ಕೂಡ ಒಬ್ಬರಾಗಿದ್ದರು. ಆ ಸಂದರ್ಭದಲ್ಲಿ ಗ್ರಾಮಕರಣಿಕರಾಗಿದ್ದ ಚಂದ್ರ ನಾಯ್ಕರವರು ಈ ಸೈಟ್ ಮಾಡಲು ಪ್ರಯತ್ನ ಪಟ್ಟಿದ್ದರು. ಪಿಡಿಓ ಆಗಿದ್ದ ದಾಮೋದರ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಮುರಳೀಧರ ರೈ ಮಠಂತಬೆಟ್ಟು ಮತ್ತು ಪುಷ್ಪಲತಾ ಸಿ.ಕೆ.ರವರು ಬಹಳಷ್ಟು ಶ್ರಮ ವಹಿಸಿದ್ದರು. ನಾನು ಕೂಡ ಆ ಸಂದರ್ಭದಲ್ಲಿ ಪಂಚಾಯತ್ ಸದಸ್ಯನಾಗಿದ್ದೆ. ಈ ಪ್ರದೇಶದಲ್ಲಿ ಫಾರೆಸ್ಟ್ ಇದೆ ಎಂಬ ಕಾರಣವೊಡ್ಡಿ ಮುಂದೆ ಬಂದ ಪಂಚಾಯತ್ ಆಡಳಿತ ಮಂಡಳಿಯವರು ಈ ಕುರಿತು ಯಾವುದೇ ಕೆಲಸ ಮಾಡಲಿಲ್ಲ. ಆದ್ದರಿಂದ ಮನೆ ಕಟ್ಟಲು ಸಾಧ್ಯವಾಗಲಿಲ್ಲ. ಬೇಬಿಯವರ ಇದ್ದ ಮನೆ ಕೆಟ್ಟು ಹೋಗಿದ್ದು ಅವರ ತಾಯಿಯೂ ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಅವರು ಮನೆಯನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಅವರು ಉಪ್ಪಿನಂಗಡಿ ನದಿಯ ತಟದಲ್ಲಿ ವಾಸವಾದ ದಿನಗಳೂ ಇತ್ತು. ಉಪ್ಪಿನಂಗಡಿಯಲ್ಲಿ ನೆರೆ ಬರುವಾಗ ಹಕ್ಕಿಪಿಕ್ಕಿ ಜನಾಂಗದವರನ್ನು ಎಬ್ಬಿಸುವ ವೇಳೆ ಅಲ್ಲಿ ಬೇಬಿಯವರು ಅಧಿಕಾರಿಗಳಿಗೆ ಸಿಕ್ಕಿ ಅಲ್ಲಿಂದ ಅವರನ್ನು ಚಂದ್ರನಾಯ್ಕರವರು ಬೇಬಿಯವರನ್ನು ಅವರು ಮೊದಲಿದ್ದ ಮನೆಗೆ ಮುಟ್ಟಿಸಿದ್ದರು. ಆದರೆ ದುರದೃಷ್ಟವಶಾತ್ ಆ ಮನೆ ಬಿದ್ದು ಇವರ ಕಾಲಿಗೆ ಗಾಯವಾಗಿತ್ತು. ಬಳಿಕ ಅವರನ್ನು ಸರಕಾರಿ ಅಧಿಕಾರಿಗಳು ಸೇರಿ ಸಮಾಜ ಮಂದಿರದಲ್ಲಿ ಕೂರಿಸಿದ್ದರು. ಅಲ್ಲಿಯೂ ಅವರಿಗೆ ಸರಿಯಾದ ವ್ಯವಸ್ಥೆ ಇರದ ಕಾರಣ ಮುಂದಿನ ದಿನಗಳಲ್ಲಿ ನಾವು ಯುವಕರ ತಂಡ ಮಾಡಿಕೊಂಡು ಅವರಿಗೆ ನಿವೇಶನ ನೀಡಿದ ಜಾಗದಲ್ಲೇ ಅವರಿಗೆ ವಾಸಿಸುವ ವ್ಯವಸ್ಥೆ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಹಾಗೂ ಸೀಟ್‌ನ ಡೇರೆ ಹಾಕಿ ಅವರನ್ನು ಇಲ್ಲಿ ಕೂರಿಸುವ ವ್ಯವಸ್ಥೆಯನ್ನು ೨೦೧೭ರಲ್ಲಿ ಮಾಡಿದ್ದೆವು. ಬಳಿಕ ಪಂಚಾಯತ್‌ನಿಂದ ನಿವೇಶನ ಸಂಬಂಧಿ ಯಾವುದೇ ಯೋಜನೆಗಳು ಬರಲಿಲಲ್ಲ. ಪುತ್ತೂರು ಯುವವಾಹಿನಿ ಅಧ್ಯಕ್ಷರಾಗಿದ್ದ ಹರೀಶ್ ಶಾಂತಿಯವರ ಸಹಕಾರದ ಮೂಲಕ ಶೌಚಾಲಯದ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ನಂತರದ ದಿನದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಬಂದಿದ್ದ ಚಿತ್ರಾವತಿಯವರಲ್ಲಿ ಸಮಸ್ಯೆಯ ಬಗ್ಗೆ ತಿಳಿಸಿದಾಗ ಮನೆ ಕಟ್ಟಿಸುವುದಕ್ಕೆ ನಮ್ಮಿಂದ ಯಾವುದೇ ತಕಾರಾರು ಇಲ್ಲ ಎಂದು ತಿಳಿಸಿದ್ದರು. ಬಳಿಕ ಪುತ್ತೂರಿನ ವಾಸ್ತುತಜ್ಞರಾದ ಶ್ರೀನಾಥ್ ಅವರ ಶಿಷ್ಯನಾಗಿರುವ, ಹೆಸರು ಹೇಳಲು ಇಚ್ಛಿಸದ ನನ್ನ ಸ್ನೇಹಿತರೊಬ್ಬರಲ್ಲಿ ಬೇಬಿಯವರ ಬಗ್ಗೆ ನಾನು ತಿಳಿಸಿದಾಗ ಕೇವಲ 15 ದಿನಗಳಲ್ಲಿ ಬಂದು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ ವಿಜಯದಶಮಿಯಂದು ಪ್ರಾರಂಭಿಸಿದ ಮನೆಯ ಕೆಲಸ ಈ ವಿಜಯ ದಶಮಿಯ ಮೊದಲು ಸಂಪೂರ್ಣ ಆಗಿದೆ ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮನೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಯಪ್ರಕಾಶ್ ಬದಿನಾರು ತಿಳಿಸಿದ್ದಾರೆ.