ಆರ್ಲಪದವಿನಲ್ಲಿ 33 ನೇ ವರ್ಷದ ಸಾರ್ವಜನಿಕ ಶಾರದೋತ್ಸವ

0

 ಭಗವಂತನ ಒಲಿಸಲು ಭಕ್ತಿ,ಶ್ರದ್ದೆ,ನಂಬಿಕೆ,ಪ್ರೀತಿ ಮುಖ್ಯ- ಡಾ.ಶೋಭಿತಾ ಸತೀಶ್.
 ನಿಡ್ಪಳ್ಳಿ; ದೇವಿಯ ಒಂಬತ್ತು ಶಕ್ತಿ ಸ್ವರೂಪವನ್ನು ನಾಡಿನೆಲ್ಲೆಡೆ ಬಹಳ ವಿಶಿಷ್ಟವಾಗಿ ಆಚರಿಸುವ ಕಾಲ ದಸರಾ.ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಆಚರಣೆ ಮತ್ತು ಅಧ್ಯಾತ್ಮಿಕ ಆಚರಣೆ ಎಂದು ಮೂರು ಆಯಾಮಗಳಲ್ಲಿ ದಸರಾವನ್ನು ನಾವು ವಿಶಿಷ್ಠವಾಗಿ ಆಚರಿಸಿ ಕೊಂಡು ಬರುತ್ತೇವೆ.ಇಂತಹ ಆಚರಣೆಯಲ್ಲಿ ಭಗವಂತನ ಒಲಿಸಲು ನಮ್ಮಲ್ಲಿ ಭಕ್ತಿ, ಶ್ರದ್ದೆ,ನಂಬಿಕೆ ಮತ್ತು ಪ್ರೀತಿ ಬಹಳ ಮುಖ್ಯ ಎಂದು ಪುತ್ತೂರು ತೆಂಕಿಲ ವಿವೇಕಾನಂದ ಬಿ.ಎಡ್ ಕಾಲೇಜು ಪ್ರಾಂಶುಪಾಲರಾದ ಡಾ.ಶೋಭಿತಾ ಸತೀಶ್ ನುಡಿದರು.
  ಅವರು ಅ.5 ರಂದು ಆರ್ಲಪದವಿನಲ್ಲಿ  ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ಪಾಣಾಜೆ ಇದರ 33 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.ಹಿರಿಯರು ಹಿಂದಿನಿಂದ ಆಚರಿಸಿ ಕೊಂಡು ಬಂದ ಆಚಾರ, ವಿಚಾರ ಮತ್ತು ಸಂಸ್ಕ್ರತಿಯ ಬಗ್ಗೆ ತಿಳಿಸಿದ ಅವರು ಇಲ್ಲಿ ಭಕ್ತರ ಸಂಭ್ರಮಕ್ಕೆ ಕಳೆದ 33 ವರ್ಷದಿಂದ ಸಾರ್ವಜನಿಕ ಶಾರದೋತ್ಸವ ಸಮಿತಿ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದ ಅವರು ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮ ನಡೆಯಲಿ ಎಂದು ಹೇಳಿದರು.
  ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆದಾಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಬಿ.ರಾಮ್ ಕುಮಾರ್ ಮಾತನಾಡಿ ಕೋವಿಡ್ ನಿಂದ ನಿಂತು ಹೋಗಿದ್ದ ಸಾರ್ವಜನಿಕ ಕಾರ್ಯಕ್ರಮಗಳು ಈಗ ಮತ್ತೆ ಆರಂಭವಾಗಿದೆ.ಕೋವಿಡನ್ನು ಸಮರ್ಥವಾಗಿ ನಿಭಾಯಿಸಿದ ದೇಶ ನಮ್ಮದು. ಆದುದರಿಂದ ಇಡೀ ಜಗತ್ತಿನಲ್ಲಿ ಮರಣ ಸಂಖ್ಯೆ ಕಡಿಮೆಯಾಗಿದ್ದು ಇದು ನಮ್ಮ ಉತ್ತಮ ಪ್ರಧಾನ ಮಂತ್ರಿ ಇರುವುದರಿಂದ ಸಾಧ್ಯವಾಗಿದೆ.ಇಂತಹ ಕಾರ್ಯಕ್ರಮ ಉತ್ತಮವಾಗಿ ನಡೆಯಲಿ ಎಂದು ಹೇಳಿದರು.
 ಮುಖ್ಯ ಅತಿಥಿಗಳಾದ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್, ಇಂಡಿಯನ್ ಮೆಡಟ್ರೋನಿಕ್ ಬೆಂಗಳೂರು ಇದರ ರಾಷ್ಟ್ರೀಯ ಮುಖ್ಯಸ್ಥ ಅಮೃತ್ ನಾರಾಯಣ ಕೊಂದಲಕಾನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
    ಬಹುಮಾನ ವಿತರಣೆ:
ಬೊಳ್ಳಿಂಬಳ ನಾರ್ಣಪ್ಪಯ್ಯ ಮತ್ತು ದೇವಸ್ಯ ಚುಬ್ಬಜ್ಜರವರ ಸವಿನೆನಪಿಗಾಗಿ ಪಾಣಾಜೆ, ಒಡ್ಯ, ಸೂರಂಬೈಲು ಪ್ರಾಥಮಿಕ ಶಾಲೆ ಮತ್ತು ಸುಬೋಧ ಪ್ರೌಡ ಶಾಲೆಯ ಆಯ್ದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.  ರಾಮ್ ಕುಮಾರ್ ಇವರ ಧರ್ಮಪತ್ನಿ ದಿ.ಸುಮಿತ್ರರವರ ಸ್ಮರಣಾರ್ಥ ನೀಡುವ ವಿಶಿಷ್ಟ ಶ್ರೇಣಿ ವಿದ್ಯಾರ್ಥಿ ವೇತನವನ್ನು ಸುಬೋಧ ಪ್ರೌಢಶಾಲಾ ವಿಧ್ಯಾರ್ಥಿ ಯಕ್ಷಿತಾ ರಾವ್ ಇವರಿಗೆ ನೀಡಲಾಯಿತು. ಆದಾಯ ತೆರಿಗೆ ಇಲಾಖೆಯ ನಿವೃತ್ತ  ಮುಖ್ಯ ಆಯುಕ್ತ ರಾಮ್ ಕುಮಾರ್, ಮಹೇಶ್ ಕುಮಾರ್, ಗಿರೀಶ್ ಕುಮಾರ್,  ಮಯೂರ ಶರ್ಮ ಹಾಗೂ ಬಂಧುಮಿತ್ರರು ಪ್ರೋತ್ಸಾಹಕ ಬಹುಮಾನವನ್ನು ನೀಡಿದ್ದರು. 
 ಸನ್ಮಾನ ಕಾರ್ಯಕ್ರಮ; ಕೇಂದ್ರ ಸಾಹಿತ್ಯ ಆಕಾಡಮಿ ಬೆಂಗಳೂರು ಇದರ ನಿವೃತ್ತ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ ಸೂರ್ಯಂಬೈಲು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕಾರಿ ಸಮಿತಿಯ ಸದಸ್ಯ ಸದಾಶಿವ ರೈ ಸೂರಂಬೈಲು ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
   ದತ್ತಿನಿಧಿ ಹಸ್ತಾಂತರ; ಅಕಾಲಿಕವಾಗಿ ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ, ಭಜನಾಕಾರ ಪದ್ಮನಾಭ ಭರಣ್ಯ ಇವರ ಹೆಸರಿನಲ್ಲಿ ಊರವರಿಂದ ಸ್ಥಾಪಿತವಾದ ದತ್ತಿನಿಧಿಯಿಂದ ತಾನು ಸ್ಥಾಪಿಸಿದ ಶ್ರೀ ಭ್ರಮರಾಂಬಿಕೆ ಭಜನಾ ಸಂಘ ಬೆಟ್ಟಂಪಾಡಿ ಇವರಿಗೆ ಮೊತ್ತವನ್ನು  ಹಸ್ತಾಂತರಿಸಲಾಯಿತು.ಸಂಘದ ಸದಸ್ಯ ಧನಂಜಯ ಚೂರಿಪದವು ಅನಿಸಿಕೆ ವ್ಯಕ್ತ ಪಡಿಸಿದರು.
   ಚಿಕ್ಕಮಗಳೂರು ಮೆ.ಶಂಕರ ನಾರಾಯಣ ಪ್ಲಾಂಟೇಷನ್ ನಿವೃತ್ತ ಮೆನೇಜರ್ ಡಿ.ಯತಿರಾಜ್ ಶೆಟ್ಟಿ ಸೂರಂಬೈಲು ಬಾಯಾರು ಕಂಬಳಗದ್ದೆಗುತ್ತು ಅಧ್ಯಕ್ಷತೆ ವಹಿಸಿದ್ದರು.  ಶಾರದೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪಾಟಾಳಿ ಅಪಿನಿಮೂಲೆ, ಕಾರ್ಯದರ್ಶಿ ಸುಭಾಸ್ ರೈ ಚಂಬರಕಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
     ಆಧೀರಾ ಪ್ರಾರ್ಥಿಸಿ ಶಾರದೋತ್ಸವ ಸಮಿತಿಯ ಕೋಶಾಧಿಕಾರಿ ಉಪೇಂದ್ರ ಬಲ್ಯಾಯ ದೇವಸ್ಯ ಸ್ವಾಗತಿಸಿದರು. ದತ್ತಿನಿಧಿ ಮತ್ತು ಸನ್ಮಾನಿತರ ಕಿರು ಪರಿಚಯವನ್ನು ಮನೋಜ್ ರೈ ಸೂರಂಬೈಲು ವಾಚಿಸಿದರು.ಬಾಲಕೃಷ್ಣ ಪೂಜಾರಿ ಉಡ್ಡಂಗಲ ವಂದಿಸಿ, ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.ಸಮಿತಿಯ ಉಪಾಧ್ಯಕ್ಷ ಪದ್ಮನಾಭ ರೈ ಸೂರಂಬೈಲು, ಜತೆ ಕಾರ್ಯದರ್ಶಿ ಹರೀಶ್ ಪೂಜಾರಿ ಗುವೆಲ್ ಗದ್ದೆ ಹಾಗೂ  ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸದಸ್ಯರು ಸಹಕರಿಸಿದರು.
        ಧಾರ್ಮಿಕ ಕಾರ್ಯಕ್ರಮಗಳು;
ವೇದಮೂರ್ತಿ ಶ್ರೀಕೃಷ್ಣ ಭಟ್ ಪೌರೋಹಿತ್ಯದಲ್ಲಿ  ಪೂಜಾ ವಿದಿ ವಿಧಾನಗಳು ನಡೆಯಿತು.
ಬೆಳಿಗ್ಗೆ  ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲಾಯಿತು.
ನಂತರ ಗಣಪತಿ ಹವನ,ಕಾರ್ತಿಕೇಯ ಭಜನಾ ಸಂಘ ಆರ್ಲಪದವು ಇವರಿಂದ ಭಜನಾ ಕಾರ್ಯಕ್ರಮ, ಅಕ್ಷರಾರಂಭ ನಂತರ ಆಯುಧ ಪೂಜೆ ನಡೆಯಿತು. ಮಧ್ಯಾಹ್ನ  ಮಹಾಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
 ಸಾಂಸ್ಕೃತಿಕ ಕಾರ್ಯಕ್ರಮಗಳು; ಮಧ್ಯಾಹ್ನ  ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ) ಪುತ್ತೂರು ಇದರ ಕಲಾವಿದರಿಂದ ಭರತನಾಟ್ಯ ಮತ್ತು ನೃತ್ಯ ವೈವಿಧ್ಯ ನಡೆಯಿತು.
  ನಂತರ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘ ಆರ್ಲಪದವು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಬಾಲಕೃಷ್ಣ ಪೂಜಾರಿ ಉಡ್ಡಂಗಲ ಇವರ ನಿರ್ದೇಶನದಲ್ಲಿ   ಯಕ್ಷಗಾನ ‘ ಜಾಂಬವತಿ ಕಲ್ಯಾಣ- ವೃಷಕೇತು ವಿಜಯ’ ನಡೆಯಿತು.
  ಸಂಜೆ ಮಹಾಪೂಜೆ ನಡೆದು  ವೈಭವದ ಶೋಭಾಯಾತ್ರೆ ನಡೆದು ಕೊಂದಲ್ಕಾನ ಶಾರದಾ ನದಿಯಲ್ಲಿ ಜಲಸ್ಥಂಭನ ಮಾಡಲಾಯಿತು.
   ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಶ್ರೀ ಮಣಿಕಂಠ ಚೆಂಡೆ ಮೇಳ ಶ್ರೀ ರಾಮ ನಗರ ರೆಂಜ ಬೆಟ್ಟಂಪಾಡಿ ಇವರಿಂದ ಸಿಂಗಾರಿ ಮೇಳ ಮತ್ತು ಸುಡುಮದ್ದು ಪ್ರದರ್ಶನ ನಡೆಯಿತು.
     ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ತಾ. ಪಂ. ನಿಕಟ ಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್,ತಾ.ಪಂ ಮಾಜಿ ಅಧ್ಯಕ್ಷ ಶಂಭು ಭಟ್, ಬಿ.ಜೆ.ಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಅರ್.ಸಿ.ನಾರಾಯಣ ಸೇರಿದಂತೆ ಹಲವಾರು ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರುಗಳು, ಅಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.
   
         ಸಂಜೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ  ಸಂಜೀವ ಮಠಂದೂರುರವರನ್ನು ಶಾರದೋತ್ಸವ ಸಮಿತಿಯ ಕಾರ್ಯಕಾರಿ ಸದಸ್ಯ ರವೀಂದ್ರ ಭಂಡಾರಿ ವೇದಿಕೆಗೆ ಸ್ವಾಗತಿಸಿದರು.ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಶಾಸಕರು ದೈವಗಳ ಭಂಡಿ ಎಳೆಯುವ ರಸ್ತೆಗೆ ಇಂಟರ್ ಲಾಕ್ ಅಳವಡಿಕೆಗೆ ರೂ.15 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿ, ಮುಂಬರುವ ವರ್ಷದಲ್ಲಿಯೂ ಈ ಕ್ಷೇತ್ರದ ಅಭಿವೃದ್ಧಿಗೆ ತಾನು ಶಾಸಕನ ನೆಲೆಯಲ್ಲಿ ಸಹಕಾರ ನೀಡುವುದಾಗಿ ಹೇಳಿದರು.
  
   

LEAVE A REPLY

Please enter your comment!
Please enter your name here