ಬೆಟ್ಟಂಪಾಡಿ  ಗ್ರಾ.ಪಂ. ವಿಶೇಷ ಸಾಮಾನ್ಯ ಸಭೆ

0

ಮರಳು ತೆಗೆಯಲು ಷರತ್ತುಬದ್ಧ ಅನುಮತಿ ನೀಡಲು ನಿರ್ಣಯ
ರಸ್ತೆ ಬದಿ ಅನಧಿಕೃತ ಕಟ್ಟಡ: ಪಿಡಬ್ಲ್ಯುಡಿ ಇಲಾಖೆಯವರೇ ತೆರವುಗೊಳಿಸಬೇಕು 
ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸೀರೆಹೊಳೆಯಿಂದ ಮರಳು ತೆಗೆಯಲು ಸಾರ್ವಜನಿಕರಿಗೆ ಷರತ್ತುಬದ್ದವಾಗಿ ಅನುಮತಿ ನೀಡುವ ಬಗ್ಗೆ ಬೆಟ್ಟಂಪಾಡಿ ಗ್ರಾ.ಪಂ.ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಅ. 7 ರಂದು ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ. ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆರಂಭದಲ್ಲಿ ಮರಳು ತೆಗೆಯುವ ವ್ಯಾಪ್ತಿ, ಟೆಂಡರ್ ಕರೆಯುವ ಬಗ್ಗೆ ಹಾಗೂ ಇತರೇ ಸಾಧಕ ಬಾಧಕಗಳ ಕುರಿತಾಗಿ ಸದಸ್ಯರೊಳಗೆ ಚರ್ಚೆ ನಡೆಯಿತು. ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರಿಗೆ ಪ್ರಥಮ ಆದ್ಯತೆ ನೀಡಿ ಸಂಬಂಧಿಸಿದ ಕಟ್ಟಡ ಕಟ್ಟುವ ಬಗ್ಗೆ ದಾಖಲೆಗಳನ್ನು ಪಡೆದುಕೊಂಡು ಅನುಮತಿ ಕೊಡುವುದು. ಪಟ್ಟಣ ಮತ್ತು ನಗರ ಪ್ರದೇಶಗಳ ಹೊರತಾಗಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೂ ಮರಳು ತೆಗೆದುಕೊಂಡು ಹೋಗಲು ಅನುಮತಿ‌ ಕಲ್ಪಿಸಬಹುದಾಗಿದೆ ಎಂದು ಪಿಡಿಒ ಸೌಮ್ಯ ಹೇಳಿದರು. ಟೆಂಡರ್ ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆದು ಹೊರಗಿನವರಿಗೆ ಟೆಂಡರ್ ಕೊಟ್ಟಲ್ಲಿ ವಾಣಿಜ್ಯವಾಗಿ ಪರಿವರ್ತನೆಗೊಂಡಾಗ ನಮ್ಮ ಗ್ರಾಮದವರೂ ಹೆಚ್ಚಿನ ಬೆಲೆ ತೆತ್ತು ಮರಳು ಖರೀದಿಸಬೇಕಾಗಬಹುದು ಎಂದು ಸದಸ್ಯ ಪ್ರಕಾಶ್ ರೈ ಹೇಳಿದರು. ಆದ್ದರಿಂದ ಪಂಚಾಯತ್ ಗುತ್ತಿಗೆದಾರ ನವೀನ್ ರವರಿಗೆ ಪರವಾನಿಗೆ ಕೊಟ್ಟು ಪಂಚಾಯತ್ ಗೆ ಸಲ್ಲತಕ್ಕ ಶುಲ್ಕ, ದಾಖಲೆಗಳನ್ನು ಸಲ್ಲಿಸಿ ಮರಳು ತೆಗೆಯಲು ಅನುಮತಿ ನೀಡುವ ಕುರಿತಾಗಿ ಅಂತಿಮವಾಗಿ ನಿರ್ಣಯ ಮಾಡಲಾಯಿತು. ಷರತ್ತು ಉಲ್ಲಂಘಿಸಿ ಮರಳು ತೆಗೆದಲ್ಲಿ ಅಥವಾ ಮಾರಾಟ ಮಾಡಿದಲ್ಲಿ ಉಂಟಾಗುವ ತೊಂದರೆಗಳನ್ನೂ ನಾವು ನೋಡಬೇಕಾಗಿದೆ ಎಂದು ಸದಸ್ಯ ಚಂದ್ರಶೇಖರ ರೈ ಹೇಳಿದರು. ಬಡವರಿಗೆ ರಿಯಾಯಿತಿ ದರದಲ್ಲಿ‌ ಮರಳು ಸಿಗುವಂತಾಗಬೇಕು. ಒಂದು ವರ್ಷದ ಅವಧಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ವ್ಯಕ್ತಿಗೆ ಪರವಾನಿಗೆ ಕೊಟ್ಟು ನೋಡುವ’ ಎಂದು ಸದಸ್ಯ ಮೊಯಿದು ಕುಂಞಿ ಹೇಳಿದರು.
 
ರಸ್ತೆ ಬದಿ ಅನಧಿಕೃತ ಕಟ್ಟಡ – ಪಂಚಾಯತ್ ಮೇಲೆ‌ ಹೊಣೆ ಯಾವ ನ್ಯಾಯ ?
ಲೋಕೋಪಯೋಗಿ ರಸ್ತೆ ಬದಿ ಅನಧಿಕೃತವಾಗಿ ಕಟ್ಟಡ, ಅಂಗಡಿ ನಿರ್ಮಿಸಿದರೆ ಅದನ್ನು ತೆರವುಗೊಳಿಸುವ ಹೊಣೆ ಪಿಡಬ್ಲ್ಯುಡಿ ಇಲಾಖೆಯೇ ವಹಿಸಿಕೊಳ್ಳಬೇಕು. ಪಂಚಾಯತ್‌ ಮೇಲೆ‌ ಇದರ ಹೊಣೆ ವಹಿಸುವುದು ಸರಿಯಲ್ಲ ಎಂದು ಸದಸ್ಯರಿಂದ ಅಭಿಪ್ರಾಯ ವ್ಯಕ್ತವಾಯಿತು. ಕೊರಿಂಗಿಲ ಎಂಬಲ್ಲಿ ಅಬೂಬಕ್ಕರ್ ಎಂಬವರು ಅಕ್ರಮವಾಗಿ ಗೂಡಂಗಡಿ ನಿರ್ಮಿಸಿದ್ದು ಅದನ್ನು ತೆರವುಗೊಳಿಸಲು ಪಂಚಾಯತ್ ಗೆ ಅಧಿಕಾರವಿದೆ ಎಂದು ತಿಳಿಯಪಡಿಸಿ ಪಿಡಬ್ಲ್ಯುಡಿ ಯಿಂದ‌ ಬಂದ‌ ಪತ್ರವನ್ನು ಪಿಡಿಒ ಪ್ರಸ್ತಾಪಿಸಿದರು. ಆಗ ಪ್ರತಿಕ್ರಿಯಿಸಿದ ಸದಸ್ಯ ಗಂಗಾಧರ ರವರು ‘ಗೂಡಂಗಡಿಗೆ ಪಂಚಾಯತ್ ಲೈಸೆನ್ಸ್ ನೀಡಿಲ್ಲ. ಮತ್ತೆ ನಾವು ಹೇಗೆ ತೆರವುಗೊಳಿಸುವುದು ? ಎಂದರು. ಅಕ್ರಮ ಗೂಡಂಗಡಿ ನಿರ್ಮಾಣದ ಜಾಗ ಪಂಚಾಯತ್ ಸುಪರ್ದಿಯಲ್ಲಿಲ್ಲ. ಆ ಜಾಗ ನಮಗೆ ಮಾಡಿಕೊಟ್ಟರೆ ತೆರವುಗೊಳಿಸಬಹುದು ಎಂದು ಪ್ರಕಾಶ್ ರೈ ಹೇಳಿದರು. ಈ ಬಗ್ಗೆ ನಾವು ನಿರ್ಣಯ ಕೈಗೊಂಡು ಇಲಾಖೆಗೆ, ಲೋಕಾಯುಕ್ತರಿಗೆ ಪತ್ರ ಬರೆದರೆ ಅವರಿಂದ ನಮಗೆ ಉತ್ತರ ಬರುತ್ತದೆಯೇ ? ಬರದಿದ್ದರೆ ನಾವು ಲೆಟರ್ ಮಾಡಿ ಏನು ಪ್ರಯೋಜನ ? ಎಂದು ಸದಸ್ಯ ಮಹೇಶ್ ಕೆ.‌ ಹೇಳಿದರು.
ಪಿಡಬ್ಲ್ಯುಡಿ ರಸ್ತೆ ಬದಿ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್ ಲೈಸೆನ್ಸ್ ಕೊಟ್ಟರೆ ‘ಅದು ನಮ್ಮ ಜಾಗ ನೀವು ಹೇಗೆ ಲೈಸೆನ್ಸ್ ಕೊಟ್ಟಿದ್ದೀರಿ ? ಎಂದು ಕೇಳುತ್ತಾರೆ.  ವಿವಾದಾತ್ಮಕ‌ ಜಾಗದಲ್ಲಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಪಂಚಾಯತ್ ನವರಿಗೆ ಅಧಿಕಾರವಿದೆ’ ಎಂದು ಹೇಳಿ ಇಲಾಖೆ‌ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಪಿಡಿಒ ಹೇಳಿದರು. ‘ಲೈಸೆನ್ಸ್ ಕೊಡಲು ಅವರು ತೆರವುಗೊಳಿಸಲು ನಾವು’ ಎಂಬಂತಾಗಿರುವುದು ಸರಿಯಲ್ಲ ಎಂದು ಎಲ್ಲಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಅಂತಿಮವಾಗಿ ‘ಇದಕ್ಕೆ ಪಿಡಬ್ಲ್ಯುಡಿಯೇ ಹೊರತು ಪಂಚಾಯತ್ ಜವಾಬ್ದಾರಿಯಲ್ಲ. ಮುಂದಕ್ಕೆ ಒತ್ತುವರಿಯಾಗದಂತೆ ಆ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಪಂಚಾಯತ್ ಗೆ ಮಂಜೂರಾತಿಗೊಳಿಸಲು ತಹಶೀಲ್ದಾರ್, ಪಿಡಬ್ಲ್ಯುಡಿ ಮತ್ತು ಲೋಕಾಯುಕ್ತರಿಗೆ ಬರೆಯುವಂತೆ ನಿರ್ಣಯ ಮಾಡಲಾಯಿತು.
ಅಧ್ಯಕ್ಷರ ಅಧಿಕಾರ ಮೊಟಕು – ಚರ್ಚೆ
ಪಂಚಾಯತ್ ಅಧ್ಯಕ್ಷರ ಅಧಿಕಾರ ಮೊಟಕು ಕುರಿತಾದ ಸರ್ಕಾರದ ಆದೇಶದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅದರ ಬಗ್ಗೆ ಅಧಿಕೃತ ಆದೇಶ ಇನ್ನೂ ಬಂದಿಲ್ಲವಾದ್ದರಿಂದ ಚರ್ಚೆಯನ್ನು ಮುಂದೂಡಲಾಯಿತು.
ಸದಸ್ಯರಾದ ಉಮಾವತಿ, ಲಲಿತಾ ಚಿದಾನಂದ, ಗೋಪಾಲ, ಸುಮಲತಾ ವಿವಿಧ ವಿಷಯಗಳಲ್ಲಿ ಚರ್ಚಿಸಿದರು. ಕಾರ್ಯದರ್ಶಿ ಬಾಬು ನಾಯ್ಕ್ ಸ್ವಾಗತಿಸಿ ವಂದಿಸಿದರು. ಸಿಬಂದಿಗಳಾದ‌ ಸಂದೀಪ್ ತಲೆಪ್ಪಾಡಿ, ಸವಿತಾ ಮತ್ತು ಕವಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here