ಕೂರ್ನಡ್ಕದ ಪ್ರಭು ಜನರಲ್ ಸ್ಟೋರ್‌ನ ಮಾಧವ ಪ್ರಭುರವರಿಗೆ ಕಲರ‍್ಸ್ ಕನ್ನಡ ವಾಹಿನಿಯ ‘ಕಲರ‍್ಸ್ ಕನ್ನಡಿಗ’ ಪ್ರಶಸ್ತಿ

0

ಪುತ್ತೂರು: ಕಲರ‍್ಸ್ ಕನ್ನಡ ವಾಹಿನಿ ವತಿಯಿಂದ ದಿ.ಪುನೀತ್‌ರಾಜ್‌ಕುಮಾರ್ ಹೆಸರಿನಲ್ಲಿ ನೀಡುವ ’ಕಲರ‍್ಸ್ ಕನ್ನಡಿಗ’ ಪ್ರಶಸ್ತಿಗೆ ಪುತ್ತೂರಿನ ಕೂರ್ನಡ್ಕದಲ್ಲಿರುವ ಪ್ರಭು ಜನರಲ್ ಸ್ಟೋರ್‌ನ ಮಾಧವ ಪ್ರಭುರವರು ಭಾಜನರಾಗಿದ್ದು, ಕಳೆದ ತಿಂಗಳು ಸೆ.18ರಂದು ಬೆಂಗಳೂರಿನ ನಾಗರಬಾವಿ ಅಕ್ಷಯ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್‌ರವರ ಸಹೋದರ ರಾಘವೇಂದ್ರ ರಾಜ್‌ಕುಮಾರ್‌ರವರು ಪ್ರಶಸ್ತಿ ಪ್ರದಾನ ಮಾಡಿದರು.

ಕಲರ‍್ಸ್ ಕನ್ನಡ ವಾಹಿನಿ ಹಮ್ಮಿಕೊಂಡ ಅನುಬಂಧ ಕಾರ್ಯಕ್ರಮದಲ್ಲಿ ಈ ವರ್ಷದಿಂದ ದಿ.ಪುನೀತ್‌ರಾಜ್‌ಕುಮಾರ್ ಹೆಸರಿನಲ್ಲಿ ’ಕಲರ‍್ಸ್ ಕನ್ನಡಿಗ’ ಪ್ರಶಸ್ತಿ ನೀಡಲು ಆರಂಭಿಸಿದೆ. ಪ್ರಚಾರದ ಹಂಗಿಲ್ಲದೆ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವ ವ್ಯಕ್ತಿಗಳಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ಈ ವರ್ಷದ ಕಲರ‍್ಸ್ ಕನ್ನಡಿಗ ಪ್ರಶಸ್ತಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ನೀಡುವ ಮೂಲಕ ಶಿಕ್ಷಣ ಕ್ರಾಂತಿಗಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ಕೂರ್ನಡ್ಕದಲ್ಲಿ ಪುಸ್ತಕ ಹಾಗೂ ಸ್ಟೇಷನರಿ ಸಾಮಾಗ್ರಿಗಳ ಮಾರಾಟ ಮಳಿಗೆ ಪ್ರಭು ಜನರಲ್ ಸ್ಟೋರ‍್ಸ್‌ನ ಮಾಲಕ ಕಾವೇರಿಕಟ್ಟೆ ನಿವಾಸಿ ಮಾಧವ ಪ್ರಭುರವರನ್ನು ಆಯ್ಕೆ ಮಾಡಲಾಗಿತ್ತು. ಅವರಿಗೆ ಸೆ.೧೮ರಂದು ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯು 1 ಲಕ್ಷ ನಗದು, ಟ್ರೋಪಿ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಮಾಧವ ಪ್ರಭುರವರು ಅವಿವಾಹಿತರಾಗಿದ್ದು, ಇವರ ತಂದೆ ದಿ.ಪಾಂಡುರಂಗ ಪ್ರಭು ಹಾಗೂ ತಾಯಿ ದಿ.ರುಕ್ಮಾ ಬಾಯಿ. ಇವರ ಆರು ಮಂದಿ ಮಕ್ಕಳಲ್ಲಿ ಕೊನೆಯವರು ಮಾಧವ ಪ್ರಭು ಆಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಅ. 9ರಂದು ರಾತ್ರಿ ಕಲರ‍್ಸ್ ಕನ್ನಡದಲ್ಲಿ ಪ್ರಸಾರಗೊಂಡಿದೆ.

15 ವರ್ಷಗಳಿಂದ ಮಕ್ಕಳಿಗೆ ಪುಸ್ತಕ, ಆರ್ಥಿಕ ಸೇವೆ:

ಕಳೆದ 15 ವರ್ಷಗಳಿಂದ ಮಕ್ಕಳಿಗೆ ನನ್ನಿಂದಾಗುವ ಸಹಾಯ ಮಾಡುತ್ತಿದ್ದೇನೆ. ಪಿಯುಸಿ ಆದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಲವಾರು ಪುಸ್ತಕ ಬೇಕಾಗುತ್ತದೆ. ಅಂತಹ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡುವುದು. ಅವರು ಓದಿ ಮತ್ತೆ ವಾಪಾಸು ಮಾಡುವುದು. ಇದರೊಂದಿಗೆ ಆರ್ಥಿಕವಾಗಿ ತೊಂದರೆಯಲ್ಲಿರುವ ಮಕ್ಕಳಿಗೆ ಇತರ ಕೆಲವು ದಾನಿಗಳ ಮೂಲಕ ಸಹಾಯ ಮಾಡುವುದನ್ನು ನಿರಂತರ ಮಾಡುತ್ತಿದ್ದೇನೆ. ಇದನ್ನು ಗುರುತಿಸಿ ಕಲರ‍್ಸ್ ಕನ್ನಡ ವಾಹಿನಿಯವರು ದಿ.ಪುನೀತ್‌ರಾಜ್‌ಕುಮಾರ್ ಹೆಸರಿನಲ್ಲಿ ನೀಡುವ ಕಲರ‍್ಸ್ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಮಾಧವ ಪ್ರಭು,
ಕಲರ‍್ಸ್ ಕನ್ನಡಿಗ ಪ್ರಶಸ್ತಿ ಪುರಸ್ಕೃತರು

LEAVE A REPLY

Please enter your comment!
Please enter your name here