ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಇದರ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಗೊಂಡಿರುವ ಎಸ್‌ಸಿಡಿಸಿ ಬ್ಯಾಂಕಿನ ಅಧ್ಯಕ್ಷ ಡಾ|| ಎಂ.ಎನ್ ರಾಜೇಂದ್ರ ಕುಮಾರ್‌ರವರಿಗೆ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ಡಾ|| ಎಂ.ಎನ್.ಆರ್ ಅಭಿನಂದನಾ ಸಮಿತಿ ಪುತ್ತೂರು ಇದರ ವತಿಯಿಂದ ಪುತ್ತೂರು ಉಪವಿಭಾಗದ ಸಮಸ್ತ ಸಹಕಾರಿ ಬಂಧುಗಳಿಂದ ಗೌರವಾರ್ಪಣೆ, ಸನ್ಮಾನ ಕಾರ್ಯಕ್ರಮ ಅ.24 ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಅ.10 ರಂದು ಪುತ್ತೂರು ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪುತ್ತೂರು ಉಪವಿಭಾಗದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಡಿಸಿಸಿ ಬ್ಯಾಂಕ್‌ನ ಮೆನೇಜರ್‌ಗಳು, ಸೂಪರ್‌ವೈಸರ್‌ಗಳು ಭಾಗವಹಿಸಿದ್ದರು. ಸಭಾಧ್ಯಕ್ಷತೆ ವಹಿಸಿದ್ದ ಡಾ|| ಎಂ.ಎನ್.ಆರ್.ಅಭಿನಂದನಾ ಸಮಿತಿ ಪುತ್ತೂರು ಇದರ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಸಭೆಯಿಂದ ಸಲಹೆಗಳನ್ನು ಪಡೆದುಕೊಂಡರು.
ವೇದಿಕೆಯಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಹಿರಿಯ ಸಹಕಾರಿ ನಿರಂಜನ್ ಉಪಸ್ಥಿತರಿದ್ದರು. ಸವಣೂರು ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಽಕಾರಿ, ಡಾ|| ಎಂ.ಎನ್.ಆರ್ ಅಭಿನಂದನಾ ಸಮಿತಿ ಪುತ್ತೂರು ಇದರ ಕಾರ್ಯದರ್ಶಿ ಚಂದ್ರಶೇಖರ್‌ರವರು ಸ್ವಾಗತಿಸಿ, ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿ ಎಲ್ಲರ ಸಹಕಾರ ಕೋರಿದರು. ಎಸ್‌ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಸಹಕರಿಸಿದರು.
ಅದ್ಧೂರಿ ಕಾರ್ಯಕ್ರಮ: ಸನ್ಮಾನ, ಗೌರವಾರ್ಪಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಸಲುವಾಗಿ ಸಭೆಯಿಂದ ಸಲಹೆಗಳನ್ನು ಪಡೆದುಕೊಳ್ಳಲಾಯಿತು. ಸುಮಾರು 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡು ಕಾರ್ಯಕ್ರಮ ನಡೆಸುವುದು, ಕಾರ್ಯಕ್ರಮವನ್ನು ಪುತ್ತೂರು ಬಂಟರ ಭವನದಲ್ಲಿ ನಡೆಸುವುದು ಎಂದು ನಿರ್ಣಯಿಸಲಾಯಿತು.
ಬೃಹತ್ ವಾಹನ ಜಾಥಾ: ಪುತ್ತೂರು ದರ್ಬೆಯಿಂದ ವಾಹನ ಜಾಥಾದ ಮೂಲಕ ಡಾ|| ಎಂ.ಎನ್ ರಾಜೇಂದ್ರ ಕುಮಾರ್‌ರವರನ್ನು ಬಂಟರ ಭವನಕ್ಕೆ ಕರೆ ತರುವುದು, ಸಹಕಾರಿ ಧ್ವಜಗಳನ್ನು ಹಾಕಿ, ಹೂವುಗಳಿಂದ ಶೃಂಗಾರ ಮಾಡಿದ ತೆರೆದ ಜೀಪಿನಲ್ಲಿ ಅವರನ್ನು ಕುಳ್ಳಿರಿಸಿ ಮುಂದೆ ದ್ವಿಚಕ್ರ ವಾಹನಗಳು ಮತ್ತು ಹಿಂದೆ ಇತರ ವಾಹನಗಳನ್ನು ಜಾಥಾದಲ್ಲಿ ಬಳಸಿಕೊಳ್ಳುವುದು, ಪ್ರತಿ ಗ್ರಾಮದ ಕೃಷಿಪತ್ತಿನ ಸಹಕಾರಿ ಸಂಘದಿಂದ ಪಾಲ್ಗೊಳ್ಳುವ ವಾಹನಗಳ ಬಗ್ಗೆ ಪಟ್ಟಿ ತಯಾರಿಸುವುದು ಈ ಬಗ್ಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದವರು ಮಾಹಿತಿ ಕೊಡಬೇಕು ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಕೇಳಿಕೊಂಡರು.
ಬೆಳ್ಳಿ ಕಿರೀಟದೊಂದಿಗೆ ಗೌರವಾರ್ಪಣೆ: ಸಹಕಾರ ರತ್ನ ಡಾ|| ಎಂ.ಎನ್ ರಾಜೇಂದ್ರ ಕುಮಾರ್‌ರವರ ಸನ್ಮಾನ, ಗೌರವಾರ್ಪಣೆ ಕಾರ್ಯಕ್ರಮವನ್ನು ಮತ್ತಷ್ಟು ವಿಶೇಷವಾಗಿ ಮಾಡುವ ಬಗ್ಗೆ ಸಭೆಯಿಂದ ಸಲಹೆಗಳನ್ನು ನೀಡಲಾಯಿತು. ಅದರಂತೆ ಬೆಳ್ಳಿಯ ಕಿರೀಟ ಮತ್ತು ಬೆಳ್ಳಿಯ ದೇವರ ಮೂರ್ತಿಯನ್ನು ನೀಡುವುದು ಮತ್ತು ಅವರಷ್ಟೇ ಎತ್ತರವಿರುವ ಸನ್ಮಾನ ಪತ್ರ ಮತ್ತು ಶೃಂಗರಿಸಿದ ಬುಟ್ಟಿಯಲ್ಲಿ ಫಲಪುಷ್ಪಗಳನ್ನು ನೀಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
3 ತಾಲೂಕಿನ ಶಾಸಕರು, ಸಚಿವರು, ಸ್ವಾಮೀಜಿಗಳು ಭಾಗಿ: ಕಾರ್ಯಕ್ರಮಕ್ಕೆ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನ ಶಾಸಕರನ್ನು ಆಹ್ವಾನಿಸುವುದು ಅದರಲ್ಲಿ ಪುತ್ತೂರು ಶಾಸಕರಿಗೆ ಸಭಾಧ್ಯಕ್ಷತೆ ನೀಡುವುದು, ಸುಳ್ಯದ ಶಾಸಕರಾಗಿರುವ ಸಚಿವ ಅಂಗಾರವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿಸುವುದು, ಹಿರಿಯ ಸಹಕಾರಿ ಸವಣೂರು ಸೀತಾರಾಮ ರೈಯವರಿಂದ ಅಭಿನಂದನಾ ಭಾಷಣ ಎಂದು ನಿರ್ಣಯಿಸಲಾಯಿತು. ಡಾ|| ಎಂ.ಎನ್.ಆರ್‌ರವರನ್ನು ಹಿರಿಯ ಸಹಕಾರಿಯೋರ್ವರ ಮೂಲಕ ಸನ್ಮಾನಿಸಿ ಗೌರವಿಸುವುದು ಹಾಗೂ ಕಾರ್ಯಕ್ರಮಕ್ಕೆ ಸ್ವಾಮೀಜಿಯವರನ್ನು ಕರೆಸುವ ಬಗ್ಗೆ ಮುಂದೆ ನಿರ್ಣಯಿಸಲಾಗುವುದು ಎಂದು ಬಾಲ್ಯೊಟ್ಟುರವರು ತಿಳಿಸಿದರು.
ಸಹಕಾರ ರತ್ನ ಡಾ|| ಎಂ.ಎನ್ ರಾಜೇಂದ್ರ ಕುಮಾರ್‌ರವರಿಗೆ ಪುತ್ತೂರಿನಲ್ಲಿ ಸನ್ಮಾನ, ಗೌರವಾರ್ಪಣೆ ಮಾಡಬೇಕೆಂಬುದು ಈ ಭಾಗದ ಸಹಕಾರಿಗಳ ಬೇಡಿಕೆಯಾಗಿದ್ದು ಅದರಂತೆ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಸಹಕಾರಿ ಬಂಧುಗಳ ಸಹಕಾರದೊಂದಿಗೆ ಅ.೨೪ ರಂದು ಪುತ್ತೂರು ಬಂಟರ ಭವನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸುವುದು ಎಂದು ನಿರ್ಣಯಿಸಲಾಯಿತು. ೨ ಸಾವಿರ ಮಂದಿ ಭಾಗವಹಿಸುವಿಕೆಯೊಂದಿಗೆ ಅದ್ಧೂರಿ ವಾಹನ ಜಾಥಾದ ಮೂಲಕ ರಾಜೇಂದ್ರ ಕುಮಾರ್‌ರವರನ್ನು ಸ್ವಾಗತಿಸುವುದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಸಹಕಾರಿ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಬೇಕಾಗಿ ವಿನಂತಿ.”
– ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರು
ಡಾ|| ಎಂ.ಎನ್.ಆರ್.ಅಭಿನಂದನಾ ಸಮಿತಿ ಪುತ್ತೂರು,
ನಿರ್ದೇಶಕರು, ಎಸ್‌ಸಿಡಿಸಿಸಿ ಬ್ಯಾಂಕ್ ಮಂಗಳೂರು