ಹಾರಾಡಿ ರೈಲ್ವೇ ರಸ್ತೆ ಕಾಮಗಾರಿ ಪೂರ್ಣಕ್ಕೆ 15ನೇ ಹಣಕಾಸಿನ ಉಳಿಕೆ ಹಣ ಬಳಕೆ

0

ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕೆ.ಜೀವಂಧರ್ ಜೈನ್

ಪುತ್ತೂರು: ಹಾರಾಡಿ ರೈಲ್ವೇ ರಸ್ತೆ ಅಭಿವೃದ್ಧಿಗೆ ರೂ.88 ಲಕ್ಷದ ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡಲಾಗಿದೆ. ಆದರೆ ಇನ್ನೂ ಸ್ವಲ್ಪ ಕಾಮಗಾರಿ ಉಳಿಕೆ ಆಗುವ ಹಿನ್ನೆಲೆಯಲ್ಲಿ ಅಲ್ಲಿಗೆ 15ನೇ ಮುಕ್ತ ಹಣಕಾಸು ಮೂಲ ಅನುದಾನದಿಂದ ಪೂರ್ಣಗೊಂಡ ಕಾಮಗಾರಿಗಳಿಂದ ಉಳಿಕೆ ರೂ. 17.32ಲಕ್ಷವನ್ನು ಬಳಸಿಕೊಳ್ಳುವ ಕುರಿತು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಹೇಳಿದರು.
ನಗರಸಭೆ ಸಾಮಾನ್ಯ ಸಭೆ ಅ.11ರಂದು ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಾರಾಡಿಯಿಂದ ರೈಲ್ವೇ ನಿಲ್ದಾಣದ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಲು ೧೫ನೇ ಹಣಕಾಸಿನಲ್ಲಿ ಅನುಮೋದನೆಗೊಂಡು ರೂ. 90.28 ಲಕ್ಷದಲ್ಲಿ ಪೂರ್ಣಗೊಂಡ 10 ಕಾಮಗಾರಿಗಳಲ್ಲಿ ರೂ.17.32ಲಕ್ಷ ಉಳಿಕೆಯಾಗಿದ್ದು, ಆ ಉಳಿಕೆ ಹಣವನ್ನು ಹಾರಾಡಿ ರೈಲ್ವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಬಳಸುವಂತೆ ತಿಳಿಸಿದರು. ನಗರಸಭೆ ಸದಸ್ಯ ಶಕ್ತಿ ಸಿನ್ಹ ಅವರು ಮಾತನಾಡಿ ಉಳಿಕ ಹಣವನ್ನು ದೇವಿ ಬೆಟ್ಟ ರಸ್ತೆಗೆ ಬಳಸುವಂತೆ ತಿಳಿಸಿದರು. ಉತ್ತರಿಸಿದ ಅಧ್ಯಕ್ಷರು ಈ ಕುರಿತು ಕೂಡಾ ಎನ್‌ಒಸಿಗಾಗಿ ರೈಲ್ವೇ ಇಲಾಖೆಗೆ ಬರೆಯಲಾಗಿದೆ. ಅಲ್ಲಿಂದ ಎನ್‌ಒಸಿ ಬಂದ ಬಳಿಕ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು.
ಬಡವಾಣೆ ಅಭಿವೃದ್ಧಿ ಶುಲ್ಕ ನಗರಸಭೆಗೆ ಪಾವತಿಸುವಂತಾಗಬೇಕು:
ಬಡವಾಣೆಯಲ್ಲಿ ಅಭಿವೃದ್ಧಿ ಶುಲ್ಕ ಪುಡಾಕ್ಕೆ ಪಾವತಿಸಿ, ನಿರ್ವಹಣೆ ಮಾತ್ರ ನಗರಸಭೆ ಮಾಡುತ್ತಿದೆ. ಇದರಿಂದಾಗಿ ನಗರಸಭೆ ನಷ್ಟ ಅನುಭವಿಸುತ್ತದೆ. ಕಾಮಗಾರಿ ನಡೆಸುವಾಗ ಗುಣಮಟ್ಟದ ಕಾಮಗಾರಿ ನಡೆಸದೆ ಮತ್ತೆ ನಿರ್ವಹಣೆ ಹೊರೆ ನಗರಸಭೆಗೆ ಬರುತ್ತದೆ. ಹಾಗಾಗಿ ಅಭಿವೃದ್ಧಿ ಶುಲ್ಕವನ್ನು ನಗರಸಭೆಗೆ ವರ್ಗಾಯಿಸಬೇಕೆಂದು ಸರಕಾರಕ್ಕೆ ಬರೆಯುವುದು ಉತ್ತಮ ಎಂದು ಶಕ್ತಿಸಿನ್ಹ ಪ್ರಸ್ತಾಪಿಸಿದರು. ಉತ್ತರಿಸಿದ ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ನಾವು ನಗರಯೋಜನಾ ಪ್ರಾಧಿಕಾರದಲ್ಲಿ ಅಭಿವೃದ್ಧಿ ಶುಲ್ಕ ಎಂದು ಯಾವುದು ತೆಗೆದು ಕೊಳ್ಳುತ್ತಿಲ್ಲ. ಯಾಕೆಂದರೆ ನಾನು ಮತ್ತು ರಾಜೇಶ್ ಬನ್ನೂರು ಕೂತು ಅಭಿವೃದ್ಧಿ ಶುಲ್ಕದ ಕುರಿತು ಯೋಜನಾ ಪ್ರಾಧಿಕಾರದಲ್ಲಿ ಚರ್ಚಿಸಿ ಅಲ್ಲಿ ಕೇವಲ ತಾಂತ್ರಿಕ ಮತ್ತು ಸಂಬಂಧಿತ ಶುಲ್ಕ ಮಾತ್ರ ಅಲ್ಲಿ ಪಡೆದುಕೊಳ್ಳುವ ಕೆಲಸ ಮಾಡಿಸಿದ್ದೇವೆ. ಇದೀಗ ಮತ್ತೆ ಯಾವುದಾದರು ಶುಲ್ಕ ತೆಗೆದು ಕೊಂಡದಿದ್ದರೆ ತಿಳಿಸಿ ನಗರಸಭೆಗೆ ರಿಫಂಡ್ ಮಾಡುವ ಜವಾಬ್ದಾರಿ ನನ್ನದು ಎಂದರು.
ಬಿಎಸ್‌ಎನ್‌ಎಲ್ ಸರ್ವರ್ ಸಮಸ್ಯೆಗೆ ಬದಲಿ ವ್ಯವಸ್ಥೆ
ನಗರಸಭೆಯಲ್ಲಿ ಆನ್‌ಲೈನ್ ವ್ಯವಸ್ಥೆಗಳಿಗೆ ಸಂಬಂಧಿಸಿ ಬಿಎಸ್‌ಎನ್‌ಎಲ್ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಿ ವ್ಯವಸ್ಥೆಯಾಗಿ ಏರ್‌ಟೇಲ್ ಅಥವಾ ರೈಲ್ವೇ ಅವರ ಸಂಪರ್ಕ ಪಡೆಯುವ ಕುರಿತು ಸಭೆಯಲ್ಲಿ ಅಧ್ಯಕ್ಷರು ಮಾಹಿತಿ ನೀಡಿದಂತೆ ನಿರ್ಣಯ ಮಾಡಲಾಯಿತು.
ನಗರಸಭೆ ನೂತನ ಕಚೇರಿಕಟ್ಟಡಕ್ಕೆ ಹೊಸ ಡಿಸೈನ್:
ನಗರಸಭೆ ನೂತನ ಕಚೇರಿ ಕಟ್ಟಡಕ್ಕೆ ಹೊಸ ನಕಾಶೆ, ಮಣ್ಣಿನ ಪರೀಕ್ಷೆ, ಡಾಟ ಕಲೆಕ್ಷನ್ ಒಳಗೊಂಡಂತೆ ಪಿಎಂಸಿ ಮುಖಾಂತರ ವಿಸ್ತೃತ ಯೋಜನಾ ವರದಿ ತಯಾರಿಸಲು ಕನ್ಸಲ್ಟೆನ್ಸಿ ನೇಮಕ ಮಾಡುವ ಬಗ್ಗೆ ಅನುಮೋದನೆ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಹೊಸದಾಗಿ ಎಸ್‌ಆರ್ ರೇಟ್ ಹೆಚ್ಚಿಗೆ ಆದ್ದರಿಂದ ರಿವೈಸ್ ಮಾಡಬೇಕಾಗಿದೆ ಎಂದರು. ಈ ಕುರಿತು ಸದಸ್ಯ ಶಕ್ತಿಸಿನ್ಹ ಅವರು ಮಾತನಾಡಿ ಹಿಂದೊಮ್ಮೆ ಮಾಡಿದ ನಕ್ಷೆ ಏನಾಗಿದೆ. ಇದು ಮತ್ತೊಮ್ಮೆ ಮಾಡುವುದು ಯಾಕೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಪೌರಾಯುಕ್ತರು ಈ ಹಿಂದೆ ನಗರಸಭೆಗೆ ಬೇಕಾದ ಅಧಿಕಾರಿಗಳ ಪ್ರಕಾರ ನಕ್ಷೆ ಮಾಡಬೇಕಾಗಿತ್ತು. ಆದರೆ ನಕ್ಷೆ ಅದರ ಪ್ರಕಾರ ಆಗಿಲ್ಲ. ಮಣ್ಣು ಪರೀಕ್ಷೆ ಮಾಡುವುದು ಸೇರಿ ಲೋಕೋಪಯೋಗಿ ಇಲಾಖೆಗೆ ನಾವು ಹಣ ಪಾವತಿ ಮಾಡಬೇಕಾಗುತ್ತದೆ ಎಂದರು. ಅಧ್ಯಕ್ಷರು ಮಾತನಾಡಿ ಈ ಹಿಂದೆ ನಾವು ಸುಮಾರು ರೂ. 14 ಕೋಟಿಗೆ ಎಸ್ಟಿಮೇಟ್ ಮಾಡಿದ್ದೆವು. ಆಗ ಲೋಕೋಪಯೋಗಿ ಇಲಾಖೆಗೆ ಹಣ ಪಾವತಿ ಮಾಡಬೇಕಾಗಿತ್ತು. ಈಗ ನಮ್ಮಲ್ಲೇ ಕಾರ್ಯನಿರ್ವಾಹಕ ಇಂಜಿನಿಯರ್, ಇಂಜಿನಿಯರ್‌ಗಳಿದ್ದಾರೆ. ಹಾಗಾಗಿ ರೂ. 30ಲಕ್ಷ ಕಟ್ಟುವ ಅವಕಾಶವಿಲ್ಲ ಎಂದರು.
ನಗರಸಭೆ ಬಹಳಷ್ಟು ಆಸ್ತಿಗಳನ್ನು ನಗರಸಭೆಗೆ ವರ್ಗಾಯಿಸಿ:
ನಗರಭೆಯಿಂದ ಬಹಳಷ್ಟು ಜಾಗ ಒತ್ತುವರಿ ಮಾಡಿದ್ದೇವೆ. ಆದರೆ ಅದರ ಉತ್ತರಧಿಕಾರಿ ಯಾರೆಂದು ಗೊತ್ತೇ ಇಲ್ಲ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಮಾಡಿದಾಗ ಅದು ಯಾರ ಹೆಸರಿನಲ್ಲಿ ಇದೆ ಎಂದು ತಿಳಿದು ಅದನ್ನು ನಗರಸಭೆಗೆ ವರ್ಗಾಯಿಸುವುದು ಒಳ್ಳೆಯದು. ಇಲ್ಲಾಂದರೆ ಮುಂದೆ ಬಹಳಷ್ಟು ಕಠಿಣ ದಿನಗಳು ಬರಬಹುದು ಎಂದರು. ಉತ್ತರಿಸಿದ ಪೌರಾಯುಕ್ತರು ನಗರಸಭೆ ಆಸ್ತಿಗಳ ಪಟ್ಟಿಯಲ್ಲಿ ಅಲ್ಲಿ ಮಾಡಿರುವ ಕೆಲಸಗಳನ್ನು ಪಟ್ಟಿ ಮಾಡಿ ಜಿಪಿಎಸ್ ಲೊಕೇಷನ್ ಮಾಡಿಸಿ ಅದು ನಗರಸಭೆ ಆಸ್ತಿ ಎಂದು ದಾಖಲೆ ಮಾಡುತ್ತಿದ್ದೇವೆ. ಈಗಾಗಲೇ ಅಕೌಂಟ್ ಸೆಕ್ಷನ್‌ನಿಂದ ಪೂರ್ಣಗೊಂಡಿದೆ. ಇನ್ನು ಇಂಜಿನಿಯರ್ ವಿಭಾಗದಿಂದ ಜಿಎಪಿಎಸ್ ಲೊಕೇಷನ್ ಪಿಕ್ಸ್ ಮಾಡಲಾಗುತ್ತದೆ ಎಂದರು.
ಬದಲಿ ಕಾಮಗಾರಿಗೆ ಇಡಲಾದ ರೂ. 50ಲಕ್ಷ ನೀರು ಸರಬರಾಜಿಗೆ ಬಳಕೆ:
2022-23ನೇ ಸಾಲಿನ 15ನೇ ಹಣಕಾಸು ಅನುದಾನ ಮೊತ್ತಕ್ಕೆ ಸಂಬಂಧಿಸಿದ ಕ್ರೀಯಾಯೋಜನೆಯಲ್ಲಿ ನೀರುಸರಬರಾಜಿನಲ್ಲಿ ರೂ.79.20 ಲಕ್ಷ ಮೊತ್ತದಲ್ಲಿ ಜಲಸಿರಿ ಯೋಜನೆ ಕಾರ್ಯಗಳು ಪ್ರಗತಿಯಲ್ಲಿದ್ದು, ರೂ. 29.20 ಲಕ್ಷ ಮಾತ್ರ ನೀರು ಸರಬರಾಜು ನಿರ್ವಹಣೆಗೆ ಕಾದಿರಿಸಿ ಉಳಿದ ರೂ. 50ಲಕ್ಷ ದಲ್ಲಿ ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಸರಕಾರದ ಸುತ್ತೋಲೆಯಲ್ಲಿ ನೀಡಿರುವ ಅವಕಾಶದಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆಯಲು ನಿರ್ಣಯಿಸಲಾಗಿತ್ತು. ಆದರೆ ಪುತ್ತೂರು ಉಪ್ಪಿನಂಗಡಿ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ನೆಕ್ಕಿಲಾಡಿಯಿಂದ ಪುತ್ತೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಹಾಲಿ ಮುಖ್ಯ ಕೊಳವೆಯನು ಕೆಲವು ಕಡೆಗಳಲ್ಲಿ ರಸ್ತೆ ಅಂಚಿಗೆ ಸ್ಥಳಾಂತರಿಸಬೇಕಾಗಿರುತ್ತದೆ. ಆದರೆ ಮುಖ್ಯ ಕೊಳವೆಯನ್ನು ಸ್ಥಳಾಂತರಿಸುವ ಬದಲಾಗಿ ಹೊಸದಾಗಿ ಕೊಳವೆಯನ್ನು ಅಳವಡಿಸುವುದು ಸೂಕ್ತ ಮತ್ತು ನೆಕ್ಕಿಲಾಡಿ ವೆಂಟೆಡ್ ಡ್ಯಾಮ್ ನಿರ್ವಹಣೆಗೆ ಅನುದಾನದ ಅವಶ್ಯಕತೆ ಇರುವುದರಿಂದ ಬದಲಿ ಕಾಮಗಾರಿಗಳಿಗೆ ಇಡಲಾದ ರೂ. 50 ಲಕ್ಷವನ್ನು ನೀರು ಸರಬರಾಜು ವ್ಯವಸ್ಥೆಗೆ ಬಳಸಲು ಹೊಸದಾಗಿ ಕ್ರೀಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ಮಂಜೂರಾತಿಗೆ ಸಲ್ಲಿಸಲು ಸಭೆಯ ಮುಂದಿಡಲಾಯಿತು. ಸಭೆಯಿಂದ ಸಹಮತ ವ್ಯಕ್ತಪಡಿಸಲಾಯಿತು.
ಅಮೃತ ನಗರತ್ಥೋನದ ಉಳಿಕೆ ಹಣಕ್ಕೆ ಅಂದಾಜ ಪಟ್ಟಿ:
ಅಮೃತ ನಗರತ್ಥೋನದಲ್ಲಿ ರೂ. 15 ಕೋಟಿಗೆ ಅಂದಾಜು ಪಟ್ಟಿ ತಯಾರಿಸಿದ್ದು, ಉಳಿಕೆ ಮೊತ್ತಕ್ಕೆ ಅಂದಾಜು ಪಟ್ಟಿ ತಯಾರಿಸಲು ಏಜೆನ್ಸಿ ಪಿಕ್ಸ್ ಮಾಡಬೇಕು. ಎಲ್ಲಾ ಕಾಮಗಾರಿಗಳನ್ನು ಟೆಂಡರ್ ಕರೆದು ಕೊಡುವಂತಹದ್ದು, ಉಳಿಕ ಮೊತ್ತದಲ್ಲಿ ಪೌರ ಕಾರ್ಮಿಕರ ವಸತಿಯೋಜನೆ, ಪಾರ್ಕ್, ಬೇರೆ ಬೇರೆ ಬ್ರಿಡ್ಜ್‌ಗಳ ಅಂದಾಜು ಪಟ್ಟಿ ತಯಾರಿಸಲು ಅನುಮೋದನೆಗೆ ಇಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ರೂ. 2.50ಲಕ್ಷ ನಗರಸಭೆ ಅನುದಾನಕ್ಕೆ ಸಂಬಂಧಿಸಿ ಸದಸ್ಯರು ನೀಡಿದ ಪಟ್ಟಿಯಂತೆ ಕ್ರೀಯಾಯೋಜನೆ ತಯಾರಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿಣ್ಣರ ಪಾರ್ಕ್ ನಿರ್ವಹಣೆ ಕುರಿತು ಸ್ಮಿತಾ ಪ್ರಭು ಎಂಬವರು ಬಂದಿದ್ದು, ಅವರಿಗೆ ಷರತ್ತು ನೀಡಿ ನಿರ್ವಹಣೆಗೆ ಹಸ್ತಾಂತರ ಮಾಡುವ ಕುರಿತು ನಿರ್ಣಯ ಮಾಡಲಾಯಿತು.
ಆನ್‌ಲೈನ್ ಪೇ ಮೆಂಟ್ ಮಾಹಿತಿ:
ನಗರಸಭೆಯ ವ್ಯಾಪ್ತಿಯ ಸಾರ್ವಜನಿಕರು ಆನ್‌ಲೈನ್ ಮೂಲಕ ತೆರಿಗೆ, ನೀರಿನ ಶುಲ್ಕ, ಜಾಹಿರಾತು ಶುಲ್ಕ ಸೇರಿದಂತೆ ಹಲವು ವಿಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರತ್ ಬಿಲ್ ಪೇ ಮೆಂಟ್ ಮೂಲಕ ಈ ವ್ಯವಸ್ಥೆ ನಡೆಯುತ್ತಿದೆ. ಇಲ್ಲಿನ ತನಕ ಇ ಸ್ವೀಕೃತಿಯಲ್ಲಿ ಚೆನೆಲ್ ಪಡೆದು ಬ್ಯಾಂಕ್‌ಗೆ ಪಾವತಿಸುವ ವ್ಯವಸ್ಥೆ ಇತ್ತು. ಈಗ ಆನ್‌ಲೈನ್ ಮೂಲಕ ಪೇ ಮೆಂಟ್ ಮಾಡಲು ಅವಕಾಶವಿದೆ. ಮೊಬೈಲ್ ಅಪ್ಲಿಕೇಶನ್, ಆಪ್‌ಗಳ ಮೂಲಕ ಪೋನ್ ಪೇ, ಗೂಗಲ್ ಪೇ, ಭೀಮ್ ಆಪ್ ಮೂಲಕ ಇದನ್ನು ಮಾಡಬಹುದು. ಇ ಸ್ವೀಕೃತಿ ಬಂದ ನಂಬರ್ ಅನ್ನು ಬಾರತ್ ಬಿಲ್ ಪೇ ಅಥವಾ ಇತರ ಆನ್ ಲೈ ಪೇ ಮಾಡಬಹುದು ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸದಸ್ಯರಿಗೆ ಮಾಹಿತಿ ನೀಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಸದಸ್ಯರಾದ ಶಿವರಾಮ ಎಸ್, ವಸಂತ ಕಾರಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮತ್ ಝೋರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ, ಬಾಳಪ್ಪ ಯಾನೆ ಸುಂದರ ಪೂಜಾರಿ, ರೋಬಿನ್ ತಾವ್ರೋ, ಪ್ರೇಂ ಕುಮಾರ್, ಪದ್ಮನಾಭ ನಾಯ್ಕ ಪಡೀಲ್, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಬಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್ ಎಂ, ಯಶೋಧಹರೀಶ್ ಪೂಜಾರಿ, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ ಕೇಶವ ಪೂಜಾರಿ, ಮಮತ ರಂಜನ್, ಬಿ.ಶೈಲಾ ಪೈ, ಇಸುಬು, ಮಹಮ್ಮದ್ ರಿಯಾಝ್, ಬಿ.ಶೀನಪ್ಪ ನಾಯ್ಕ, ಪೂರ್ಣಿಮ ಕೋಡಿಯಡ್ಕ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಲೆಕ್ಕಾಧಿಕಾರಿ ಸಿ.ಎಸ್ ದೇವಾಡಿಗ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here