ಕುಂಬ್ರ: ಒಣ ಕಸ ನೀಡುವಂತೆ ಗ್ರಾಪಂನಿಂದ ಜಾಗೃತಿ-ಬ್ಯಾಗ್, ಕರಪತ್ರ ವಿತರಣೆ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತಿಯನ್ನು ಸ್ವಚ್ಛ ಸುಂದರ ಹಸಿರು ಗ್ರಾಮ ಪಂಚಾಯತಿಯನ್ನಾಗಿಸಲು ಸ್ವಚ್ಛ ಸಂಕೀರ್ಣ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕವು ಕಾರ್ಯಾರಂಭ ಮಾಡುತ್ತಿದೆ. ಗ್ರಾಪಂ ವ್ಯಾಪ್ತಿಯ ಪ್ರತಿ ಅಂಗಡಿ, ವಾಣಿಜ್ಯ ಕಟ್ಟಡ, ಕೈಗಾರಿಕೆಗಳು ಮತ್ತು ಮನೆಯವರು ಎಲ್ಲಾ ಬಗೆಯ ಘನ ತ್ಯಾಜ್ಯವನ್ನು ತಮ್ಮ ಹಂತದಲ್ಲಿಯೇ ಒಣ ಕಸವನ್ನು ಪ್ರತ್ಯೇಕಿಸಿ ಗ್ರಾಮ ಪಂಚಾಯತಿಯಿಂದ ಬರುವ ತ್ಯಾಜ್ಯ ಸಂಗ್ರಹಣೆಗಾಗಿ ಬರುವ ಸ್ವಚ್ಛ ವಾಹಿನಿಗೆ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆ.12 ರಂದು ನಡೆಯಿತು.

ಗ್ರಾಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯವರ ನೇತೃತ್ವದಲ್ಲಿ ಕುಂಬ್ರ ಪೇಟೆ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಅಂಗಡಿಮುಂಗಟ್ಟುಗಳಿಗೆ, ಮನೆಗಳಿಗೆ ಭೇಟಿ ನೀಡಿ ತಮ್ಮ ವ್ಯಾಪಾರ ಮಳಿಗೆ, ಮನೆಗಳಲ್ಲಿ ಸಂಗ್ರಹವಾಗುವ ಒಣಕಸವನ್ನು ಗ್ರಾಪಂನಿಂದ ಬರುವ ಸ್ವಚ್ಛ ವಾಹಿನಿ ವಾಹನದವರಲ್ಲಿ ನೀಡಿ ಸಹಕರಿಸುವಂತೆ ಕೇಳಿಕೊಳ್ಳಲಾಯಿತು. ಇದೇ ವೇಳೆ ಒಣ ಕಸ ಸಂಗ್ರಹಿಸಲು ಬ್ಯಾಗ್‌ಗಳನ್ನು ಉಚಿತವಾಗಿ ನೀಡಲಾಯಿತು ಅಲ್ಲದೆ ಸ್ವಚ್ಛತೆಯ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್, ಕಾರ್ಯದರ್ಶಿ ಜಯಂತಿ ಹಾಗೂ ಸದಸ್ಯರುಗಳು, ಎನ್‌ಆರ್‌ಎಲ್‌ಎಂ ಸದಸ್ಯರುಗಳು, ಗ್ರಾಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಎರಡು ದಿನಕ್ಕೊಮ್ಮೆ ಬರಲಿದೆ ಸ್ವಚ್ಛ ವಾಹಿನಿ

ಗ್ರಾಮ ವ್ಯಾಪ್ತಿಯಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ಅಂಗಡಿ ಮತ್ತು ಮನೆ ಬಾಗಿಲಿಗೆ ಸ್ವಚ್ಛ ವಾಹಿನಿ ವಾಹನ ಬರಲಿದ್ದು ಈ ವೇಳೆ ಪ್ಲಾಸ್ಟಿಕ್ ಮತ್ತು ಇತರ ಒಣಕಸವನ್ನು ಆದಷ್ಟು ಸ್ವಚ್ಛವಾಗಿಸಿ ವಾಹನಕ್ಕೆ ನೀಡುವುದು ಅದು ಬಿಟ್ಟು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು, ಸುಡುವುದು ಕಂಡುಬಂದಲ್ಲಿ ಅಥವಾ ತ್ಯಾಜ್ಯವನ್ನು ಸಂಗ್ರಹಣಾ ವಾಹನಕ್ಕೆ ನೀಡಲು ನಿರಾಕರಿಸಿದ್ದಲ್ಲಿ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಳಮೊಗ್ರು ಗ್ರಾಮವನ್ನು ತ್ಯಾಜ್ಯ ಮುಕ್ತ ಪರಿಸರ ಸ್ನೇಹಿ ಗ್ರಾಮ ಪಂಚಾಯತಿಯನ್ನಾಗಿಸಲು ಗ್ರಾಮಸ್ಥರು ಕೈಜೋಡಿಸುವಂತೆ ಗ್ರಾಪಂ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here