ರಾಜ್ಯದಲ್ಲೇ ಪ್ರಥಮವಾಗಿ ಪುತ್ತೂರಿನಲ್ಲಿ ಜಿಲ್ಲಾ ವ್ಯಾಪ್ತಿಗೊಳಪಟ್ಟ ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ ಉದ್ಘಾಟನೆ

0

ಸಂಘಟನೆಯ ಮೂಲಕ ಮಾಡಿದ ಮನವಿಗೆ ಹೆಚ್ಚಿನ ಶಕ್ತಿಯಿದೆ – ರಾಮಚಂದ್ರ ಎಂ
ಕಂಬದಂತೆ ಸದಸ್ಯರು ನೇರ ನಡೆನುಡಿಯುಳ್ಳವರಾಗಬೇಕು – ಬಿ.ಪುರಂದರ ಭಟ್
ಸರಕಾರದ ಸೌಲಭ್ಯ ಪಡೆಯಲು ಸಂಘಟನೆ ಅಗತ್ಯ -ಹರಿಪ್ರಸಾದ್
ಸಂಘವು ಸಂಘರ್ಷಕ್ಕೆ ಅವಕಾಶ ಮಾಡಿಕೊಡುವುದಿಲ್ಲ – ಜಯರಾಮ ಕುಲಾಲ್

ಪುತ್ತೂರು: ಹಲವು ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿದ್ದರೂ ರಾಜ್ಯದಲ್ಲೇ ಪ್ರಥಮವಾಗಿ ಪುತ್ತೂರಿನಲ್ಲಿ ಜಿಲ್ಲಾ ವ್ಯಾಪ್ತಿಗೊಳಪಟ್ಟ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘವು ಪುತ್ತೂರಿನಲ್ಲಿ ಉದ್ಘಾಟನೆಗೊಂಡಿದೆ. ಅಸಂಘಟಿತ ಕಾರ್ಮಿಕರಲ್ಲಿ ಬರುವ ವರ್ಗಗಳಲ್ಲಿ ಸರಕಾರದ ಸೌಲಭ್ಯ ಸಿಗುತ್ತದೆ. ಆದರೆ ವಿದ್ಯುತ್ ಕಂಬ ಅಳವಡಿಸುವವರನ್ನು ಯಾವ ವಲಯದಲ್ಲೂ ಸೇರಿಸದ ಹಿನ್ನೆಲೆಯಲ್ಲಿ ಅವರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದೀಗ ಪುತ್ತೂರಿನಲ್ಲಿ ವಿದ್ಯುತ್ ಕಂಬ ಅಳವಡಿಸುವವರ ಕಾರ್ಮಿಕರಿಗೂ ಸರಕಾರದಿಂದ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಇದು ರಾಜ್ಯದಲ್ಲೇ ಪ್ರಥಮವಾಗಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಾಗಿ ಉದ್ಘಾಟನೆಗೊಂಡಿದೆ. ಅ.16ರಂದು ಇಲ್ಲಿನ ಅನುಗಾರ ವಠಾರದಲ್ಲಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸಂಘಟನೆಯ ಮೂಲಕ ಮಾಡಿದ ಮನವಿಗೆ ಹೆಚ್ಚಿನ ಶಕ್ತಿಯಿದೆ:
ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘವನ್ನು ಉದ್ಘಾಟಿಸಿದ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ ಅವರು ಮಾತನಾಡಿ ತುಂಬಾ ರಿಸ್ಕ್ ಇರುವ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಜೀವನದಲ್ಲಿ ತುಂಬಾ ಕಷ್ಟವಿದೆ. ಅವರಿಗೆ ಇಲಾಖೆಯಿಂದ ಎಲ್ಲಾ ಸೌಲಭ್ಯ ಸಿಗುವುದಿಲ್ಲ. ಕೆಲವನ್ನು ಸರಕಾರದ ಮಟ್ಟದಲ್ಲಿ ಕೊಡಿಸುವ ಕೆಲಸ ಆಗಬೇಕಾಗಿದೆ. ಅದಕ್ಕೆ ಸಂಘಟನೆ ಬೇಕು. ಸಂಘಟನೆಯ ಮೂಲಕ ತಮ್ಮ ಬೇಡಿಕೆಯ ಮನವಿಗೆ ಹೆಚ್ಚಿನ ಶಕ್ತಿ ಬರುತ್ತದೆ. ಇಂತಹ ಸಂಘಟನೆ ರಾಜ್ಯದಲ್ಲೇ ಪ್ರಥಮ ಆಗಿದೆ. ಇದು ಇತರ ತಾಲೂಕಿನವರಿಗೂ ಸ್ಪೂರ್ತಿಯಾಗಲಿ. ನೇಮಕಾತಿ ವಿಚಾರದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ವಿಚಾರ ಸರಕಾರದ ಹಂತದಲ್ಲಿ ಆಗಬೇಕಾಗಿದೆ ಎಂದರು.

ಕಂಬದಂತೆ ಸದಸ್ಯರು ನೇರ ನಡೆನುಡಿಯುಳ್ಳವರಾಗಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ಬಿ.ಪುರಂದರ ಭಟ್ ಅವರು ಮಾತನಾಡಿ ಸಂಘಟನೆ ಉದ್ಘಾಟನೆಯಾಗಿದೆ. ಆದರೆ ಸಂಘದ ಪ್ರತಿಯೊಬ್ಬ ಸದಸ್ಯನೂ ವಿದ್ಯುತ್ ಕಂಬದಂತೆ ನೇರವಾಗಿ ನಿಲ್ಲಬೇಕು. ಅಂತಹ ನೇರ ನೆಡೆನುಡಿಯಿಂದ ಸಂಘದ ಶಕ್ತಿ ಹೆಚ್ಚುತ್ತದೆ ಮತ್ತು ತಮ್ಮ ಬೇಡಿಕೆಯನ್ನು ನೇರವಾಗಿ ಸಂಬಂಧಿಸಿದವರಿಗೆ ತಿಳಿಸಲು ಸಾಧ್ಯ ಎಂದರು.

ಸರಕಾರದ ಸೌಲಭ್ಯ ಪಡೆಯಲು ಸಂಘಟನೆ ಅಗತ್ಯ:
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹರಿಪ್ರಸಾದ್ ಪಿ.ಕೆ ಅವರು ಮಾತನಾಡಿ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರಿಗೆ ಆಯಾ ಗುತ್ತಿಗೆದಾರರು ಪಿಎಫ್. ಇಎಸ್‌ಐ ಸೌಲಭ್ಯವನ್ನು ಮಾಡಿಸಿರುತ್ತಾರೆ. ಆದರೆ ಕೆಲಸದ ಸಮಯದಲ್ಲಿ ಅವಘಡ ಸಂಭವಿಸಿದರೆ ಯಾವುದೇ ಪರಿಹಾರ ಸಿಗುವುದಿಲ್ಲ. ಆದರಿಂದ ಕಾರ್ಮಿಕ ಸಂಘದ ಮೂಲಕ ಸರಕಾರದ ವತಿಯಿಂದ ಸೌಲಭ್ಯ ಸಿಗುವಂತಾಗಲು ಹೋರಾಟವನ್ನು ಮಾಡಬೇಕಾಗಿದೆ. ಇದಕ್ಕೆ ಸಂಘದಿಂದ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಸಂಘವು ಸಂಘರ್ಷಕ್ಕೆ ಅವಕಾಶ ಮಾಡಿಕೊಡುವುದಿಲ್ಲ:
ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾಲಿಕರು ಮತ್ತು ಸದಸ್ಯರು ಉತ್ತಮ ಬಾಂಧವ್ಯ ಹೊಂದಿರಬೇಕೆಂಬುದು ಸಂಘದ ಆದ್ಯತೆ. ಸಂಘವು ಎಲ್ಲಿಯೂ ಸಂಘರ್ಷಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸಂಘದ ಸದಸ್ಯರಿಗೆ ನಿವೃತ್ತಿ ವೇತನ, ಅಪಘಾತ ಪರಿಹಾರ ಒದಗಿಸುವ ಕುರಿತು ಹೋರಾಟ ಮಾಡಲಿದೆ ಎಂದರು. ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಗೌರವ ಸಲಹೆಗಾರ ಎಂ.ಶೇಷಪ್ಪ ಕುಲಾಲ್ ಅವರು ಮಾತನಾಡಿ ಸಂಘದ ನೂತನ ಪದಾಧಿಕಾರಿಗಳ ಪಟ್ಟಿ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಸೇಡಿಯಾಪು, ಕೋಶಾಧಿಕಾರ ಮೋನಪ್ಪ ಕೆ ಉಪಸ್ಥಿತರಿದ್ದರು. ಲೋಹಿತ್, ಗಣೇಶ್, ತಿಮ್ಮೆ ಗೌಡ, ದಿನೇಶ್ ಕುಂಬ್ರ ಅತಿಥಿಗಳನ್ನು ಗೌರವಿಸಿದರು. ಶೇಷಪ್ಪ ಕುಲಾಲ್ ವಂದಿಸಿದರು.

LEAVE A REPLY

Please enter your comment!
Please enter your name here