ಗ್ರಾಮೀಣ ಮಹಿಳೆಯರ ಜೀವನೋಪಾಯಕ್ಕೆ ನೆರವಿನೊಂದಿಗೆ ಬಡತನ ನಿವಾರಣೆ

0

ಸಂಜೀವಿನಿ ಒಕ್ಕೂಟದ ಮಹಿಳೆಯರಿಂದಲೇ ನರ್ಸರಿ ನಿರ್ವಹಣೆ

ಪುತ್ತೂರು:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ಅಕುಶಲ ಕೂಲಿ ನೀಡುವುದು, ಸಮುದಾಯ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು, ಅರ್ಹ ವೈಯಕ್ತಿಕ ಫಲಾನುಭವಿಗಳಿಗೆ ಆಸ್ತಿ ಸೃಜನೆಗೆ ಅವಕಾಶ ಒದಗಿಸುವುದರ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಲೇ ಇವೆ. ಸರಕಾರ ಒಂದು ಹೆಜ್ಜೆ ಮುಂದುವರಿದು ನರೇಗಾ ಯೋಜನೆಗೆ ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವನ್ನು ಒಗ್ಗೂಡಿಸಿಕೊಂಡು ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟಗಳ ಮೂಲಕ ಮಹಿಳೆಯರಿಗೆ ಉದ್ಯೋಗ ಹಾಗೂ ಜೀವನೋಪಾಯಕ್ಕೆ ಸಹಾಯವಾಗುವಂತೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಒತ್ತನ್ನು ನೀಡುತ್ತಿದೆ.ಗ್ರಾಮೀಣ ಬಡತನ ನಿವಾರಣೆಗಾಗಿ ವಿವಿಧ ರೀತಿಯ ಕಾರ್ಯಕ್ರಮದ ಅನುಷ್ಠಾನದ ಅಂಗವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರ ಮೂಲಕ ನರೇಗಾ ಯೋಜನೆಯ ಫಲಾನುಭವಿಗಳಿಗೆ ಅವಶ್ಯಕವಿರುವ ತೋಟಗಾರಿಕೆ, ಅರಣ್ಯ ಹೀಗೆ ವಿವಿಧ ಜಾತಿ/ಪ್ರಭೇದದ ಗಿಡಗಳನ್ನು ನರ್ಸರಿ ಮೂಲಕ ಬೆಳೆಸುವ ಕೆಲಸವನ್ನು ಮಾಡುತ್ತಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋರಿಗದ್ದೆ ಎಂಬಲ್ಲಿ ಸ್ವಚ್ಛ ಸಂಕೀರ್ಣದ ಬಳಿ ಸುಮಾರು 0.07 ಎಕ್ರೆ ಜಾಗದಲ್ಲಿ ಪಂಚಮಿ ಸಂಜೀವಿನಿ ಸ್ವ-ಸಹಾಯ ಒಕ್ಕೂಟದ ಮಹಿಳೆಯರು ಈಗಾಗಲೇ ನರ್ಸರಿ ಆರಂಭಿಸಿದ್ದಾರೆ.

ನರ್ಸರಿ ಯೋಜನೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶೆಡ್ ನಿರ್ಮಾಣ ಮತ್ತು ನರ್ಸರಿ ಅಭಿವೃದ್ಧಿಗೆ 2 ಲಕ್ಷ ರೂ. ಅಂದಾಜು ಮೊತ್ತ ಹಾಗೂ ಸಂಜೀವಿನಿ ಒಕ್ಕೂಟವೂ 50 ಸಾವಿರ ರೂ.ಬಂಡವಾಳ ಹೂಡುವುದರ ಮೂಲಕ ಒಟ್ಟು 2.5 ಲಕ್ಷ ರೂ.ನಲ್ಲಿ ನರ್ಸರಿ ಅಭಿವೃದ್ಧಿಗೊಳಿಸಲಾಗುತ್ತಿದೆ. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಸ್ವಚ್ಛ ಸಂಕೀರ್ಣ ಘಟಕಕ್ಕೆ ಕೋರಿಗದ್ದೆ ಎಂಬಲ್ಲಿ ಮೀಸಲಿರಿಸಿದ ಜಮೀನಿನಲ್ಲಿ ಅಂದರೆ ಘಟಕದ ಪಕ್ಕದಲ್ಲೇ ಸುಮಾರು 300 ಚ.ಮೀ. ಜಾಗದಲ್ಲಿ ವ್ಯವಸ್ಥಿತವಾಗಿ ನರ್ಸರಿ ಶೆಡ್ ಅನ್ನು ನಿರ್ಮಿಸಲಾಗಿದೆ.

ನುಗ್ಗೆ, ಹಲಸು, ನಿಂಬೆ, ಕರಿಬೇವು, ಸೀತಾಫಲ, ಪಪ್ಪಾಯ, ನೆಲ್ಲಿಕಾಯಿ, ನೇರಳೆ, ಕಾಳುಮೆಣಸು/ಹಿಪ್ಪಲಿ ಹೀಗೆ ಹಲವು ಜಾತಿಯ ಸುಮಾರು 4000 ಗಿಡಗಳನ್ನು ಈಗಾಗಲೇ ಬೆಳೆಸಲಾಗಿದೆ. ಪ್ರಸ್ತುತ 3 ಮಂದಿ ಸ್ವ-ಸಹಾಯ ಸಂಘದ ಸದಸ್ಯರು ಇದರ ಪೋಷಣೆಯನ್ನು ಮಾಡುತ್ತಿದ್ದು ಒಟ್ಟು 10 ಸಾವಿರ ಗಿಡ ನಾಟಿ ಮಾಡುವ ಗುರಿ ಹೊಂದಲಾಗಿದೆ.6 ಸಾವಿರ ಅಡಿಕೆ ಗಿಡಗಳನ್ನು ನಾಟಿ ಮಾಡಲಿದ್ದು ಅಡಿಕೆ ಬೀಜ ದೊರೆತ ತಕ್ಷಣ ಆ ಕಾರ್ಯವೂ ಆರಂಭವಾಗಲಿದೆ.

ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಉದ್ಯೋಗ ಸೃಷ್ಟಿ: ಡೇ-ಎನ್‌ಆರ್‌ಎಲ್‌ಎಂ ಯೋಜನೆಯಡಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸ್ವ-ಸಹಾಯ ಸಂಘದ 3 ಸದಸ್ಯರಿಗೆ ಉದ್ಯೋಗ ಸೃಷ್ಟಿಯಾಗಿದೆ.ಬೀಡಿಕಟ್ಟುವ ಕಸುಬನ್ನು ಮಾಡುತ್ತಿದ್ದ ನೆಟ್ಟಣಿಗೆ ಮುಡ್ನೂರು ಗ್ರಾಮದ ಸ್ಥಳೀಯ ಮಹಿಳೆಯರಾದ ರಮ್ಯಾ, ಸಾವಿತ್ರಿ ಹಾಗೂ ರಾಜೇಶ್ವರಿ ಅವರು ಈಗ ನರ್ಸರಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಇದು ಸಹಕಾರಿಯಾಗಲಿದೆ.

ಬೀಜಗಳ ಬಿತ್ತನೆಗೆ ಬೇಕಾದ ಮಿಶ್ರಣ (ಮರಳು, ಮಣ್ಣು ಮತ್ತು ಗೊಬ್ಬರ)ವನ್ನು ತಯಾರಿಸುವುದು, ಬೀಜಗಳನ್ನು ಪಾಲಿಥಿನ್ ಚೀಲಗಳಿಗೆ ತುಂಬುವುದು, ಕಳೆ ಕೀಳುವುದು, ನೀರು ಹಾಕುವುದು, ಗೊಬ್ಬರ ಹಾಕುವುದು ಹೀಗೆ ಗಿಡಗಳ ಪೋಷಣೆಯ ಕೆಲಸಗಳನ್ನು ಮಾಡುತ್ತಾರೆ. 10 ಸಾವಿರ ಗಿಡಗಳನ್ನು ಬೆಳೆಸಿದರೆ ಸುಮಾರು 84 ಸಾವಿರ ರೂ.ನಷ್ಟು ಕೂಲಿ ಹಣವನ್ನು ಈ ನರ್ಸರಿಯ ನಿರ್ವಹಣೆಯಿಂದ ಪಡೆಯಲಿದ್ದಾರೆ.

ವ್ಯವಸ್ಥಿತ ಶೆಡ್ ರಚನೆ: ಗ್ರೀನ್ ಶೇಡ್ ನೆಟ್ ಆವೃತ್ತ ನರ್ಸರಿ ಶೆಡ್ ನಿರ್ಮಿಸಿದ್ದು ಇದರಲ್ಲಿ ಸರಿಸುಮಾರು 50 ಸಾವಿರದಷ್ಟು ನರ್ಸರಿ ಗಿಡಗಳನ್ನು ಬೆಳೆಸಬಹುದಾಗಿದೆ. ನರೇಗಾ ಯೋಜನೆಯಡಿ ಸಿಎಲ್‌ಎಫ್ ನರ್ಸರಿ ಅಭಿವೃದ್ಧಿಪಡಿಸುವ ಮೂಲಕ ಸಂಜೀವಿನಿ ಒಕ್ಕೂಟಕ್ಕೆ ಸ್ವ-ಉದ್ಯೋಗದ ಮೂಲಕ ಜೀವನೋಪಾಯ ನಿರ್ವಹಣೆಗೆ ಅನುಕೂಲವಾಗುವಂತೆ ನರ್ಸರಿ ಘಟಕವನ್ನು ರಚಿಸಿಕೊಡಲಾಗುತ್ತದೆ. ಮುಂದುವರಿದು ಇದರ ಸದ್ಬಳಕೆಯನ್ನು ಮಾಡಿಕೊಂಡು ಪ್ರತಿ ವರ್ಷ ಕನಿಷ್ಟ 10 ಸಾವಿರ ಗಿಡಗಳನ್ನು ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ. ಇದರ ಹೊರತಾಗಿ ಪ್ರತ್ಯೇಕವಾಗಿ ಸಂಜೀವಿನಿ ಒಕ್ಕೂಟದ ಸದಸ್ಯರು ವಿವಿಧ ತಳಿಯ ಮತ್ತಷ್ಟು ಗಿಡಗಳನ್ನು ಬೆಳೆಸಿ ಮಾರಾಟ ಮಾಡಬಹುದಾಗಿದೆ.‌

ನರ್ಸರಿ ಅಭಿವೃದ್ಧಿ ಕುರಿತು ತೋಟಗಾರಿಕೆ ಇಲಾಖೆ ಹಾಗೂ ನರೇಗಾ ತೋಟಗಾರಿಕಾ ತಾಂತ್ರಿಕ ಸಹಾಯಕರು ಗಿಡಗಳ ಲಾಲನೆ ಪಾಲನೆ ಕುರಿತು ಸಲಹೆ, ಸೂಚನೆಗಳನ್ನು ನೀಡಿ ಮಹಿಳೆಯರನ್ನು ನರ್ಸರಿಯಲ್ಲಿ ಪರಿಣಿತರನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ವಿಶೇಷವೇನೆಂದರೆ, ಈ ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ತೋಟಗಾರಿಕೆ ಇಲಾಖೆಯಿಂದ ಗಿಡಗಳ ಗುಣಮಟ್ಟವನ್ನು ಪರಿಶೀಲಿಸಿ ಮಾರಾಟ ಮಾಡಬಹುದೆಂಬ ದೃಢೀಕರಣ ಪಡೆದ ಬಳಿಕ ತೋಟಗಾರಿಕಾ ಇಲಾಖೆಯ ದರಪಟ್ಟಿಯಂತೆ ಮಾರಾಟ ಮಾಡುವುದರಿಂದ ಸ್ಥಳೀಯರಿಗೆ ಇಲ್ಲಿಂದಲೇ ಗಿಡಗಳನ್ನು ಖರೀದಿಸಿ ಬೆಳೆಗಳ ವಿಸ್ತರಣೆಯನ್ನು ಮಾಡಿಕೊಳ್ಳಬಹುದಾಗಿದೆ.

ತೋಟಗಾರಿಕಾ ಇಲಾಖೆ ದರ ಪಟ್ಟಿಯಡಿ ಮಾರಾಟ: ಈ ನರ್ಸರಿಯಲ್ಲಿ ಬೆಳೆದ ಗಿಡಗಳನ್ನು ತೋಟಗಾರಿಕೆ ಇಲಾಖೆಯ ಮಾರಾಟ ದರದಂತೆ ತೆಂಗು 70 ರೂ., ನುಗ್ಗೆ 10 ರೂ., ಕರಿಬೇವು 12 ರೂ., ನಿಂಬೆ 15 ರೂ., ಪಪ್ಪಾಯ 10 ರೂ., ನೆಲ್ಲಿ 40 ರೂ., ಸೀಬೆ 85 ರೂ., ಅಡಿಕೆ 20 ರೂ., ಹಲಸು 65 ರೂ., ಕಾಳುಮೆಣಸು 32 ರೂ., ನೇರಳೆ 50 ರೂ., ಸೀತಾಫಲ 40 ರೂ. ಮಾವು/ಸಪೋಟ 85 ರೂ. ದರದಲ್ಲಿ ಮಾರಾಟ ಮಾಡಲಾಗುತ್ತದೆ. ನರ್ಸರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದರೆ ಸ್ವ-ಉದ್ಯಮ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ದೊರೆಯಲಿದೆ.ಇದರಿಂದ ಸ್ಥಳೀಯ ಕೃಷಿಕರಿಗೆ ಗಿಡಗಳೂ, ಮಹಿಳೆಯರಿಗೆ ಉದ್ಯೋಗದ ಜೊತೆಗೆ ಆರ್ಥಿಕ ಸಹಾಯವೂ ದೊರೆಯಲಿದೆ.

ನರೇಗಾ ಯೋಜನೆಯ ಸದ್ಬಳಕೆಯೊಂದಿಗೆ ಬಂಡವಾಳವಿಲ್ಲದೆ ಉದ್ಯಮ ಮಾಡಲಿಚ್ಛಿಸುವ ಸಂಜೀವಿನಿ ಒಕ್ಕೂಟದ ಮಹಿಳೆಯರು ಸೇರಿ ನರ್ಸರಿ ನಿರ್ಮಾಣ ಮಾಡಿರುವ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನ ಪಂಚಮಿ ಸ್ವ-ಸಹಾಯ ಸಂಘದ ಕಾರ್ಯ ಮಾದರಿಯಾಗಿದೆ. ನರೇಗಾ ಯೋಜನೆಯಡಿ ಸಮುದಾಯಿಕ, ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಉದ್ಯೋಗವನ್ನು ನೀಡುವ ಮೂಲಕ ಮಹಿಳೆಯರ ಭಾಗವಹಿಸುವಿಕೆಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತಿದೆ.

-ನವೀನ್ ಕುಮಾರ್ ಭಂಡಾರಿ,
ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ.ಪುತ್ತೂರು

ನರೇಗಾ ಯೋಜನೆ ಮತ್ತು ಸಂಜೀವಿನಿ ಒಕ್ಕೂಟವು ನೀಡುವ ಬಂಡವಾಳದೊಂದಿಗೆ, ನರ್ಸರಿ ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು, ಅದರಲ್ಲಿ ಗಿಡ ಬೆಳೆಸಿ ನರೇಗಾ ಯೋಜನೆಯ ಫಲಾನುಭವಿಗಳಿಗೆ ಮಾರಾಟ ಮಾಡಿ ಒಕ್ಕೂಟಗಳು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಬಹುದು.ನರ್ಸರಿಯಲ್ಲಿ ಉತ್ತಮ ಗುಣಮಟ್ಟದ ಗಿಡಗಳನ್ನು ಹೆಚ್ಚುವರಿಯಾಗಿ ಬೆಳೆಸಿದಲ್ಲಿ, ಹೆಚ್ಚಿನ ಲಾಭಗಳಿಸುವುದರೊಂದಿಗೆ ವರ್ಷಪೂರ್ತಿ ಉದ್ಯೋಗವನ್ನು ಕೂಡಾ ಪಡೆಯಬಹುದಾಗಿದೆ.ಸಿಎಲ್‌ಎಫ್ ನರ್ಸರಿಯು ನರೇಗಾ ಯೋಜನೆ ಮತ್ತು ಎನ್‌ಆರ್‌ಎಲ್‌ಎಂ ಯೋಜನೆಗಳ ಒಗ್ಗೂಡಿಸುವಿಕೆಯೊಂದಿಗೆ ಉತ್ತಮವಾದ ಪರಿಕಲ್ಪನೆಯಾಗಿದೆ.

ಶೈಲಜಾ ಭಟ್, ಸಹಾಯಕ ನಿರ್ದೇಶಕರು (ಗ್ರಾ.ಉ.),
ತಾಲೂಕು ಪಂಚಾಯತ್ ಪುತ್ತೂರು

LEAVE A REPLY

Please enter your comment!
Please enter your name here