ವಾಣಿಜ್ಯ, ಕೈಗಾರಿಕಾ ಸಂಘದ ನಿಯೋಗದಿಂದ ನಗರಸಭೆಗೆ ಮನವಿ
ಪುತ್ತೂರು: ಪ್ಲಾಸ್ಟಿಕ್ ನಿಷೇಧ ಜಾರಿಯ ಸಂದರ್ಭ ಅಧಿಕಾರಿಗಳು ವ್ಯಾಪಾರ ಸಂಸ್ಥೆಯ ತಪಾಸಣೆ ಸಂದರ್ಭ ತಾತ್ಕಾಲಿಕ ರಶೀದಿ ನೀಡಿ ಸ್ಥಳದಲ್ಲೇ ಅಧಿಕ ದಂಡ ಪಾವತಿಸಲು ಒತ್ತಾಯಿಸುವುದನ್ನು ಕೈ ಬಿಡಬೇಕು. ದಂಡದ ರಶೀದಿ ನೀಡಿ ದಂಡ ಪಾವತಿಸಲು ಸಮಯವಾಕಾಶ ನೀಡಬೇಕೆಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಗ ಅ.20ರಂದು ನಗರಸಭೆ ಅಧ್ಯಕ್ಷರಿಗೆ ಮತ್ತು ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.
ಈಗಾಗಲೇ ಸ್ಥಳದಲ್ಲೇ ದಂಡ ಪಾವತಿಸಲು ಒತ್ತಡ ತರುವ ವಿಚಾರ ನಮ್ಮ ಅನುಭವಕ್ಕೆ ಬಂದಿದೆ. ಆದರೆ ಇಂತಹ ದಂಡ ಪಾವತಿಸಲು ಕಾಲಾವಕಾಶ ನೀಡಬೇಕು. ಇದರ ಜೊತೆಗೆ ಅಧಿಕ ದಂಡ ವಿಧಿಸದೆ ರೂ. 100 ದಂಡ ವಿಧಿಸಿ ಎಚ್ಚರಿಕೆ ನೀಡುವಂತೆ ಅವರು ಮನವಿಯಲ್ಲಿ ತಿಳಿಸಿದರು. ಈ ಕುರಿತು ವರ್ತಕ ಪದಾಧಿಕಾರಿಗಳು ನಗರಸಭೆ ಪೌರಾಯುಕ್ತರೊಂದಿಗೆ ಚರ್ಚಿಸಿದರು. ಪೌರಾಯುಕ್ತರು ದಂಡ ಕಡಿಮೆ ಮಾಡಲು ಅವಕಾಶವಿಲ್ಲ. ಆದರೆ ದಂಡ ಪಾವತಿಸಲು ಕಾಲಾವಕಾಶ ನೀಡುವ ಕುರಿತು ಒಪ್ಪಿಗೆ ನೀಡಿದ್ದಾರೆ ಎಂದು ವರ್ತಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಹೊಂಡ ದುರಸ್ಥಿ ಮಾಡುವಂತೆ ಮನವಿ:
ಪುತ್ತೂರು ಪರಿಸರದಲ್ಲಿ ಬಸ್ ನಿಲ್ದಾಣದ ಎದುರು ಭಾಗದಲ್ಲಿ ಎಪಿಎಂಸಿ ರಸ್ತೆ, ದರ್ಬೆ, ಧನ್ವಂತರಿ ಆಸ್ಪತ್ರೆಯ ಬಳಿ, ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಸೇರಿದಂತೆ ಹಲವು ಕಡೆ ರಸ್ತೆಹೊಂಡಗಳಿವೆ. ಇದರಿಂದ ವಾಹನ ಸವಾರರಿಗೆ ಪಾದಾಚಾರಿಗಳಿಗೆ ಅಪಾಯವಿರುವುದರಿಂದ ಇದನ್ನು ದುರಸ್ಥಿ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿತ್ತು. ನಗರಸಭೆ ಅಧ್ಯಕ್ಷರು ಮಾತನಾಡಿ ಗುಂಡಿ ಮುಚ್ಚುವ ಕೆಲಸ ಶೀಘ್ರ ಆಗಲಿದೆ. ಮಳೆ ಕಡಿಮೆ ಆದ ಬಳಿಕ ಟೆಂಡರ್ ಕರೆದು ಡಾಮರೀಕರಣ ಮಾಡಲಾಗುವುದು ಎಂದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟಿನ್ಹ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಕೋಶಾಧಿಕಾರಿ ಎಂ.ರಾಜೇಶ್ ಕಾಮತ್, ಉಪಾಧ್ಯಕ್ಷ ವಾಮನ್ ಪೈ, ಎಂ.ಸೂರ್ಯನಾಥ ಆಳ್ವ, ನಿರ್ದೇಶಕರಾದ ಶ್ರೀಕಾಂತ್ ಕೊಳತ್ತಾಯ, ಸತೀಶ್ ರೈ ಕಟ್ಟಾವು, ರಮೇಶ್ ಪ್ರಭು, ರವಿಚಂದ್ರ, ಉದ್ಯಮಿ ಮಜೀದ್, ದಾಮೋದರ್ ಹೆಗ್ಡೆ ನಿಯೋಗದಲ್ಲಿ ಉಪಸ್ಥಿತರಿದ್ದರು.