ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವರ್ಷಂಪ್ರತಿ ನಡೆಯುವ ಧಾನ್ಯ ಲಕ್ಷ್ಮೀಪೂಜೆ, ಭತ್ತದ ತೆನೆ ವಿತರಣೆ ಮತ್ತು ನವಾನ್ನ ಪ್ರಸಾದ ಭೋಜನವು ಅ.20ರಂದು ನಡೆಯಿತು.
ಈ ವರ್ಷ ಪ್ರಪ್ರಥಮವಾಗಿ ಶ್ರೀ ದೇವರ ಪುಣ್ಯಭೂಮಿಯಲ್ಲಿ ಮಾಡಲಾಗಿದ್ದ ಭತ್ತದ ಬೇಸಾಯದಿಂದ ಭತ್ತದ ತೆನೆಯನ್ನು ದೇವಸ್ಥಾನಕ್ಕೆ ಶಾಸ್ತ್ರೋಕ್ತವಾಗಿ ತಂದು ಧಾನ್ಯಲಕ್ಷ್ಮೀ ಪೂಜೆ ಮಾಡಿ ಭಕ್ತಾದಿಗಳಿಗೆ ಶ್ರೀದೇವರ ಸನ್ನಿಧಿಯಿಂದ ಭತ್ತದ ತೆನೆ ವಿತರಣೆ ಮಾಡಲಾಯಿತು. ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ನವಾನ್ನ ಪ್ರಸಾದ ಭೋಜನ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯ, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಸದಸ್ಯೆ ನಿರ್ಮಲಾ ರೈ, ವರುಣ್ ಮೂಡೆತ್ತಾಯ ನನ್ಯ, ಬಾಲಕೃಷ್ಣ ಕೆದಿಲಾಯ ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.