ಎನ್ಎಸ್ಎಸ್ ಎಂಬುವುದು ಸ್ವಂತಕ್ಕಲ್ಲ ಸಮಾಜಕ್ಕಾಗಿ – ದಿನಕರ್ ಅಂಚನ್
ಬೆಟ್ಟಂಪಾಡಿ: ಎನ್ ಎಸ್ ಎಸ್ ಎಂಬುದು ಸ್ವಂತಕ್ಕಲ್ಲ ಸಮಾಜಕ್ಕಾಗಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ಶಿಸ್ತು, ಪ್ರಾಮಾಣಿಕತೆ, ಸಂಸ್ಕಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಉತ್ತಮ ಜೀವನವನ್ನು ನಡೆಸಬಹುದು ಎಂದು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ದಿನಕರ್ ಅಂಚನ್ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇವುಗಳ ಆಶ್ರಯದಲ್ಲಿ ನಡೆದ ಎನ್ಎಸ್ಎಸ್ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಇವರು ಸಮುದಾಯ ಒಂದು ಸಂಪನ್ಮೂಲ ಅದನ್ನು ಸರಿಯಾಗಿ ಉಪಯೋಗಿಸಬೇಕಾದರೆ ದೇಶದ ಮೇಲೆ ಅಭಿಮಾನ ಇರಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಹರಿಪ್ರಸಾದ್ ಎಸ್, ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ದಾರಿ ತೋರಿಸಲು, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮವೇ ರಾಷ್ಟ್ರೀಯ ಸೇವಾ ಯೋಜನೆ. ಮೊದಲು ಎನ್ಎಸ್ಎಸ್ ಎಂಬುದು ಕೇವಲ ಶ್ರಮದಾನಕ್ಕೆ ಸೀಮಿತವಾಗಿತ್ತು, ಆದರೆ ಪ್ರಸ್ತುತ ವ್ಯಕ್ತಿತ್ವ ವಿಕಸನಕ್ಕೂ ಮಹತ್ವ ನೀಡಲಾಗಿದೆ ಎಂದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಕಾಂತೇಶ್ ಎಸ್ ಇವರು ಪ್ರತಿಯೊಬ್ಬ ವ್ಯಕ್ತಿಯು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಸದಾ ಸ್ಮರಿಸಲಾಗುತ್ತದೆ. ಇಂತಹ ಕೆಲಸಗಳಿಂದ ವ್ಯಕ್ತಿತ್ವ ವಿಕಸನವನ್ನು ಸ್ವಯಂಸೇವಕರಲ್ಲಿ ಕಾಣಬಹುದು ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಪೊಡಿಯ ಇವರು ತನ್ನಲ್ಲಿ ಇರುವ ಪ್ರತಿಭೆಗಳನ್ನು ಪ್ರದರ್ಶಿಸಲು ಎನ್ಎಸ್ಎಸ್ ಸೂಕ್ತ ವೇದಿಕೆಯಾಗಿದೆ. ರಾಷ್ಟ್ರೀಯ ಸೇವಾ ಯೋಜನೆಗಳ ಆಶಯಗೀತೆ ಸಾರುವಂತೆ ಗ್ರಾಮಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯತ್ತ ಸಾಗಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಘಟಕ ನಾಯಕರಾಗಿ ಜವಾಬ್ದಾರಿ ನಿರ್ವಹಿಸಲಿರುವ ಸ್ವಯಂಸೇವಕರುಗಳಿಗೆ ಸಸಿಯನ್ನು ಹಸ್ತಾಂತರಿಸುವ ಮೂಲಕ ಈ ವರ್ಷದ ಎನ್ಎಸ್ಎಸ್ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಹಾಗೂ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲಿರುವ ನಾಯಕರುಗಳಿಗೆ ನಿಕಟಪೂರ್ವ ನಾಯಕರುಗಳು ಜವಾಬ್ದಾರಿ ಹಸ್ತಾಂತರಿಸಿದರು.
ಗ್ರಂಥಪಾಲಕ ರಾಮ ಕೆ, ಯೋಜನಾಧಿಕಾರಿ ಶಶಿಕುಮಾರ ಹಾಗೂ ಎನ್. ಎಸ್. ಎಸ್. ಸ್ವಯಂಸೇವಕರುಗಳು ಉಪಸ್ಥಿತರಿದ್ದರು. ಸ್ವಯಂಸೇವಕ ಆದರ್ಶ ಬಿ ಸ್ವಾಗತಿಸಿದರು, ಚಿತ್ರಾ ಎಸ್. ವಂದಿಸಿದರು. ನಯನ ಬಿ. ಕಾರ್ಯಕ್ರಮ ನಿರೂಪಿಸಿದರು.