ಪುತ್ತೂರು ಸಿದ್ಯಾಳದಲ್ಲಿ ಮನುಷ್ಯನ ತಲೆಬುರುಡೆ ಪತ್ತೆ ಹಿನ್ನಲೆ – ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಆಗಮನ

0

ಪುತ್ತೂರು:ಗುಡ್ಡದಲ್ಲಿ ಹುಲ್ಲು ಕಟಾವು ಮಾಡುತ್ತಿದ್ದ ವೇಳೆ ಪಾಳು ಬಿದ್ದ ತೆಂಗಿನ ಮರದ ಬುಡದಲ್ಲಿ ಮಾನವ ತಲೆಬುರುಡೆ, ಅಸ್ಥಿಪಂಜರ ಪತ್ತೆಯಾದ ಘಟನೆ ಅ.21ರಂದು ಚಿಕ್ಕಮುಡ್ನೂರು ಗ್ರಾಮದ ಸಿದ್ಯಾಲದಿಂದ ವರದಿಯಾಗಿದೆ.

ಸಿದ್ಯಾಳ ದಿ.ಜೀವನ್ ಭಂಡಾರಿಯವರ ಮನೆಯಿಂದ ನೂರು ಮೀಟರ್ ದೂರದಲ್ಲಿ ಇಳಿಜಾರು ಭೂಮಿಯಲ್ಲಿರುವ ಪಾಳು ಬಿದ್ದ ತೆಂಗಿನ ಬುಡದಲ್ಲಿ ಮಾನವನ ತಲೆಬುರುಡೆ, ಅಸ್ಥಿಪಂಜರ ಪತ್ತೆಯಾಗಿದೆ.ದಿ.ಜೀವನ್ ಭಂಡಾರಿಯವರ ಪತ್ನಿ ಸ್ಮಿತಾ ಜೆ.ಭಂಡಾರಿ, ಪುತ್ರ ಸಮರ್ಥ್ ಭಂಡಾರಿ, ಸೊಸೆ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ್ದು, ಸಿದ್ಯಾಳದಲ್ಲಿರುವ ಅವರ ಮನೆ ಜಮೀನನ್ನು ಕೆಮ್ಮಾಯಿ ನಿವಾಸಿ ಶಿವಾನಂದ ನಾಯಕ್ ಅವರು ನೋಡಿಕೊಳ್ಳುತ್ತಿದ್ದರು.ತೋಟದ ಮತ್ತು ಗುಡ್ಡೆಯಲ್ಲಿ ಬೆಳೆದಿರುವ ಹುಲ್ಲನ್ನು ಕೂಲಿ ಆಳುಗಳ ಮೂಲಕ ಕಟಾವು ಮಾಡಿಸುತ್ತಿದ್ದು, ಅ.21ರಂದು ಮನೆಯ ಸಮೀಪ ಇಳಿಜಾರು ಜಮೀನಿನಲ್ಲಿ ಹುಲ್ಲು ಕಟಾವು ಮಾಡಿಸುತ್ತಿದ್ದ ವೇಳೆ ಪಾಳು ಬಿದ್ದ ತೆಂಗಿನ ಬುಡದಲ್ಲಿ ಮಾನವನ ತಲೆ ಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿತ್ತು.ಇದನ್ನು ನೋಡಿದ ಕೆಲಸದಾಳುಗಳು ಶಿವಾನಂದ ನಾಯಕ್ ಅವರಿಗೆ ಮಾಹಿತಿ ನೀಡಿದರು.ಅವರು ಜಮೀನಿನ ಮಾಲಕ ಸಮರ್ಥ್ ಭಂಡಾರಿಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೇಲ್ನೋಟಕ್ಕೆ ಪರಿಶೀಲಿಸಿ ಬಳಿಕ ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾಹಿತಿ ನೀಡಿದರು.

ಎಫ್‌ಎಸ್‌ಎಲ್ ತಜ್ಞರ ಆಗಮನ:

ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಡಾ.ಗಿರೀಶ್ ಮತ್ತು ಲ್ಯಾಬ್ ಅಸಿಸ್ಟೆಂಟ್ ಸುಶಾಂತ್ ಅವರು ಆಗಮಿಸಿ ತೆಂಗಿನ ಬುಡದಲ್ಲಿ ಮಣ್ಣಿನಲ್ಲಿ ಹೂತುಹೋಗಿದ್ದ ತಲೆಬುರುಡೆ ಮತ್ತು ಅಸ್ಥಿಪಂಜರವನ್ನು ಒಂದೊಂದಾಗಿ ಪರಿಶೀಲಿಸಿ ಮೇಲಕ್ಕೆ ತೆಗೆದರು.ಮೃತ ವ್ಯಕ್ತಿಯ ಎದೆಗೂಡು ಮಣ್ಣಿನಡಿಯಲ್ಲಿ ಹೂತು ಹೋಗಿತ್ತು.ವ್ಯಕ್ತಿ ಧರಿಸಿದ್ದ ಬಟ್ಟೆ ಅದನ್ನು ಸುತ್ತುವರಿದಿತ್ತು.ಶರ್ಟ್ ಕಿಸೆಯಲ್ಲಿ ಪ್ಲಾಸ್ಟಿಕ್ ಕವರ್ ಇದ್ದು, ಆ ಪ್ಲಾಸ್ಟಿಕ್ ಕವರ್‌ನ ಒಳಗೆ ಬಿಡಿಸಲಾಗದಂತಿರುವ ರೂ.100 ಮತ್ತು 50ರ ನೋಟು ಮತ್ತು ಚಿಲ್ಲರೆ ಕಾಯಿನ್‌ಗಳು ಹಾಗೂ ಸಣ್ಣ ಕೀ ಪತ್ತೆಯಾಗಿತ್ತಲ್ಲದೆ ಒಂದು ಜೊತೆ ಚಪ್ಪಲು ಕೂಡಾ ಪತ್ತೆಯಾಗಿತ್ತು.ವಿಧಿ ವಿಜ್ಞಾನ ತಂಡ ಅಸ್ಥಿ ಪಂಜರ ಮತ್ತು ಪತ್ತೆಯಾದ ಸೊತ್ತುಗಳನ್ನು ಪ್ರತ್ಯೇಕಗೊಳಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಡಿಎನ್‌ಎ ಪರೀಕ್ಷೆಗೆ ಬೆಂಗಳೂರಿಗೆ:
ಪತ್ತೆಯಾದ ಅಸ್ಥಿಪಂಜರದಿಂದ ದವಡೆ, ತೊಡೆ ಮತ್ತು ಕೆಲ ಭಾಗವನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕಾಗಿದ್ದು, ಉಳಿದ ಅಸ್ಥಿಪಂಜರಗಳನ್ನು ಪೊಲೀಸ್ ಭದ್ರತೆಯಲ್ಲಿ ಇರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್, ಎಸ್.ಐ.ಶ್ರೀಕಾಂತ್ ರಾಥೋಡ್, ಎ.ಎಸ್.ಐ ಲೋಕನಾಥ್ ಸಹಿತ ಪೊಲೀಸ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

7 ತಿಂಗಳ ಹಿಂದೆ ನಾಪತ್ತೆಯಾದ ವೃದ್ಧರೊಬ್ಬರ ಅಸ್ಥಿಪಂಜರ ಶಂಕೆ !:
7 ತಿಂಗಳ ಹಿಂದೆ ಕೇಪುಳು ತಾರಿಗುಡ್ಡೆ ನಿವಾಸಿ ವೃದ್ಧರೊಬ್ಬರು ನಾಪತ್ತೆಯಾದ ಬಗ್ಗೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅವರು ಈ ತನಕ ಪತ್ತೆಯಾಗಿಲ್ಲ. ಈ ನಡುವೆ ಇದೀಗ ಸಿದ್ಯಾಲದಲ್ಲಿ ಮನುಷ್ಯನ ತಲೆಬುರಡೆ, ಅಸ್ಥಿಪಂಜರ ದೊರೆತಿರುವುದು ಅವರು ಆಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.ಸುಮಾರು 72 ವರ್ಷ ಪ್ರಾಯದ ಅವಿವಾಹಿತ ಬಿ.ಯೂಸುಫ್ ಎಂಬವರು ನಾಪತ್ತೆಯಾದವರು.ಯೂಸುಫ್ ಅವರು ಆಗಾಗ ಮನೆಯಿಂದ ಪೇಟೆಗೆ ಹೋಗುವುದಾಗಿ ಹೇಳಿ ಹೋಗಿ ಸಂಜೆ ವೇಳೆ ಅಥವಾ ಮರುದಿನ ಬರುತ್ತಿದ್ದರು. ಮಾ.31ರಂದು ಅವರು ಮನೆಯಿಂದ ಪೇಟೆಗೆ ಹೋದವರು ಮತ್ತೆ ಮನೆಗೆ ಹಿಂದಿರುಗಿಲ್ಲ.ಈ ಕುರಿತು ಅವರ ಸಹೋದರ ಇಸ್ಮಾಯಿಲ್ ಅವರು ಎ.7ರಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅಸ್ಥಿಪಂಜರವನ್ನು ಪರಿಶೀಲಿಸುತ್ತಿರುವ ಸಂದರ್ಭ ನಾಪತ್ತೆಯಾದ ಯೂಸುಫ್ ಅವರ ಸಹೋದರ ಇಸ್ಮಾಯಿಲ್ ಮತ್ತು ಇನ್ನೋರ್ವ ಸಹೋದರ ಸ್ಥಳದಲ್ಲಿ ಉಪಸ್ಥಿತರಿದ್ದರು. ಅವರ ಸಹೋದರನ ಅಸ್ಥಿಪಂಜರ ಆಗಿದ್ದಲ್ಲಿ ಅವರನ್ನು ಡಿಎನ್‌ಎ ಪರೀಕ್ಷೆ ಒಳಪಡಿಸಬೇಕಾಗಿತ್ತು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ತಿಳಿಸಿದ್ದರು.ಎಸ್‌ಡಿಪಿಐಯ ಹಮೀದ್ ಸಾಲ್ಮರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here