ಪುತ್ತೂರು: ಅಂದು ಕುಗ್ರಾಮವಾಗಿದ್ದ ಪುತ್ತೂರಿಗೆ ಶಿಕ್ಷಣ ಕ್ರಾಂತಿಯ ಮೂಲಕ ಹೊಸ ಭಾಷ್ಯ ಬರೆದವರು ಮೊ|ಪತ್ರಾವೋರವರು ಎಂಬುದು ಉಲ್ಲೇಖನೀಯ. ಮೊ|ಪತ್ರಾವೋರವರು ಪುತ್ತೂರು ಹಾಗೂ ಪುತ್ತೂರಿನ ಸುತ್ತಮುತ್ತಲಿನ ಹುಡುಗರಿಗೆ ಮಾತ್ರವಲ್ಲದೆ ಹುಡುಗಿಯರಿಗೂ ಶಾಲೆ-ಕಾಲೇಜು ವಿದ್ಯಾಸಂಸ್ಥೆಗಳನ್ನು ಕಟ್ಟಿಸುವ ಮೂಲಕ ಎಲ್ಲಾ ಸಮುದಾಯಕ್ಕೂ ಆದರ್ಶಪ್ರಾಯರೆನಿಸಿದ್ದಾರೆ.
ಮೇಜರ್ ವೆಂಕಟ್ರಾಮಯ್ಯರವರ ಬೆವರಿನ ಫಲವಾಗಿರುವ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಕಳೆದ ಆರು ದಶಕಗಳಿಂದ ಅದೆಷ್ಟೋ ಕ್ರೀಡಾಪಟುಗಳು ತಮ್ಮ ಬೆವರ ಹನಿಯನ್ನು ಸುರಿಸಿ ಉತ್ತಮ ಭವಿಷ್ಯವನ್ನು ಕಂಡುಕೊಂಡಿರುವುದು ನಿಜತಕ್ಕ ವಿಷಯವಾಗಿದೆ. ವೈಟ್‌ಲಿಪ್ಟಿಂಗ್‌ನಲ್ಲಿ ಬ್ಯಾಪ್ಟಿಸ್ಟ್ ಲೋಬೊ, ಪುಷ್ಪರಾಜ್ ಹೆಗ್ಡೆ, ಕಬಡ್ಡಿಯಲ್ಲಿ ದಿ.ಉದಯ ಚೌಟ, ರೋಸ್‌ಮೇರಿ ಪ್ರೆಸಿಲ್ಲ, ಪ್ರೊ ಕಬಡ್ಡಿ ಪ್ರಶಾಂತ್ ರೈ ಹೀಗೆ ಸಾಲು ಸಾಲು ಸಾಧಕರ ಪಟ್ಟಿ ಬೆಳೆಯುತ್ತದೆ. ಇದೀಗ ಕಳೆದ ಎರಡು ದಿನಗಳಿಂದ ಇದೇ ಫಿಲೋಮಿನಾ ಕ್ರೀಡಾಂಗಣದಲ್ಲಿ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳು ವಿದ್ಯಾಸಂಸ್ಥೆಯ ಸಂಸ್ಥಾಪಕರೆನಿಸಿದ ಮೊ|ಪತ್ರಾವೋರವರ ಸ್ಮರಣಾರ್ಥ ವಾರ್ಷಿಕ ಕ್ರೀಡಾಕೂಟ ವಿಜ್ರಂಭಣೆಯಿಂದ ನಡೆದಿದ್ದು, ಅ.೨೯ ರಂದು ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ ಬಿದ್ದಿದೆ.
7 ವಿದ್ಯಾಸಂಸ್ಥೆಗಳು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೭ ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು, ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾಕೂಟವು ನಡೆಯಿತು.
ಸ್ಪರ್ಧಾ ವಿಭಾಗಗಳು: ಈ ಎರಡು ದಿನದ ಕ್ರೀಡಾಕೂಟದಲ್ಲಿ ೫೦ಮೀ ಓಟ, ೧೦೦ಮೀ ಓಟ, ೨೦೦ಮೀ ಓಟ, ೪೦೦ಮೀ ಓಟ, ೬೦೦ಮೀ ಓಟ, ೮೦೦ಮೀ ಓಟ, ೧೫೦೦ಮೀ ಓಟ, ೩೦೦೦ಮೀ ಓಟ, ೫೦೦೦ಮೀ ಓಟ, ಶಾಟ್‌ಫುಟ್, ಹೈಜಂಪ್, ಲಾಂಗ್ ಜಂಪ್, ಡಿಸ್ಕಸ್ ತ್ರೋ, ರಿಲೇ ಓಟ, ಜಾವೆಲಿನ್ ತ್ರೋ, ಜ್ಯಾಮರ್ ತ್ರೋ, ೧೦ಕಿ.ಮೀ ನಡಿಗೆ, ೪ಕಿ.ಮೀ ನಡಿಗೆ, ೨ಕಿ.ಮೀ ನಡಿಗೆ, ತ್ರಿಪಲ್ ಜಂಪ್ ಈ ವಿಭಾಗಗಳಲ್ಲಿ ಹಿರಿಯ-ಕಿರಿಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ನಡೆಯಿತು.
ಕ್ಯಾಂಪಸ್‌ನಲ್ಲಿ ಪುಟಾಣಿ ಮಕ್ಕಳ ಕಲರವ: ಈ ವಿದ್ಯಾಸಂಸ್ಥೆಯಲ್ಲಿ ಕೆ.ಜಿಯಿಂದ ಪಿ.ಜಿವರೆಗೆ ವ್ಯಾಸಂಗಕ್ಕೆ ಅವಕಾಶವಿದ್ದು, ಹಿರಿಯ ಹಾಗೂ ಕಿರಿಯ ಎಲ್ಲಾ ವಿದ್ಯಾರ್ಥಿಗಳು ಆಯೋಜಕರು ಆಯೋಜಿಸಿದ ವಿವಿಧ ಕ್ರೀಡಾ ವಿಭಾಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಆದರೆ ಈ ಕ್ರೀಡಾಕೂಟದಲ್ಲಿ ಪುಟಾಣಿ ಮಕ್ಕಳು ಸ್ಪರ್ಧೆಯಲ್ಲಿ ಉತ್ಸುಕತೆಯಲ್ಲಿ ಪಾಲ್ಗೊಂಡು ಕಲರವ ಸೃಷ್ಟಿಸಿರುವುದು, ತನಗೂ ಬಹುಮಾನ ಬೇಕು ಎಂಬಂತೆ ಸ್ಪರ್ಧೆಗಿಳಿದವರಂತೆ ಭಾಗವಹಿಸಿರುವುದು ನೋಡಿದಾಗ ಎಲ್ಲರ ಕಣ್ಣಲ್ಲಿ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದಾರೆ. ೪೦೦ಮೀ.ಟ್ರ್ಯಾಕ್ ಮೈದಾನದಲ್ಲಿ ಅದರಲ್ಲೂ ಈ ಬಿರುಬಿಸಿಲಿನಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹಳ ತ್ರಾಸದಾಯಕವಾದರೂ ಈ ಪುಟಾಣಿ ಮಕ್ಕಳು ತಮಗೇನೂ ಗೊತ್ತೇ ಇಲ್ಲವೆಂಬಂತೆ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವುದು ಕ್ರೀಡಾಕೂಟಕ್ಕೆ ಮತ್ತಷ್ಟು ಮೆರುಗನ್ನು ತಂದು ಕೊಟ್ಟಿದೆ. ಪುಟಾಣಿ ಮಕ್ಕಳ ಹೆತ್ತವರೂ ಕ್ರೀಡಾಂಗಣದಲ್ಲಿ ಸೇರಿದ್ದು, ತಮ್ಮ ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಳ್ಳುತ್ತಿರುವುದು ಕಂಡು ಬರುತ್ತಿತ್ತು.
ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ: ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಯಲ್ಲಿ ಸುಮಾರು ೭ ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು, ಕ್ರೀಡೆಯಲ್ಲಿ ಆಸಕ್ತವಿರುವ ಸುಮಾರು ೨ ಸಾವಿರ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆಯಾ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ, ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದ ಕ್ರೀಡೆಯಲ್ಲಿ ಮತ್ತು ಕಾಲೇಜಿನ ಎನ್‌ಎಸ್‌ಎಸ್, ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟಾರೆಯಾಗಿ ಈ ಎರಡು ದಿನಗಳು ಕ್ರೀಡಾಕೂಟವು ಕಾಲೇಜು ಕ್ಯಾಂಪಸ್ ಅಕ್ಷರಶಃ ಹಬ್ಬದ ವಾತಾವರಣವಗಿ ಮೂಡಿ ಬಂದಿರುವುದಂತೂ ಸತ್ಯ.
ನಾವೇನೂ ಕಡಿಮೆಯಿಲ್ಲ, ಶಿಕ್ಷಕರಿಗೂ ಸ್ಪರ್ಧೆ: ಕ್ರೀಡಾಕೂಟದ ಎರಡೂ ದಿನವೂ ವಿದ್ಯಾರ್ಥಿಗಳ ಆಯಾ ವಿಭಾಗದ ಸ್ಪರ್ಧೆಗೆ ಸ್ವಯಂಸೇವಕರಾಗಿ ಸಾಥ್ ನೀಡುತ್ತಾ ಬಂದಿರುವ ಶಿಕ್ಷಕರು, ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವರ್ಗದವರಿಗೆ ಕೂಟದ ಎರಡನೇ ದಿನದ ಅಂತಿಮ ಅವಧಿಯಲ್ಲಿ ೪*೧೦೦ ರಿಲೇ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಹಿಳೆಯರ ವಿಭಾಗದಲ್ಲಿ ಫಿಲೋಮಿನಾ ಪ್ರೌಢಶಾಲೆ, ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಪುರುಷರ ವಿಭಾಗದಲ್ಲಿ ಫಿಲೋಮಿನಾ ಕಾಲೇಜು, ಫಿಲೋಮಿನಾ ಪದವಿ ಪೂರ್ವ ಕಾಲೇಜು ಸ್ಪರ್ಧಿಸಿ ಪ್ರೇಕ್ಷಕ ವಿದ್ಯಾರ್ಥಿಗಳಿಂದ ಶಿಳ್ಳೆ, ಕರತಾಡಣ ವ್ಯಕ್ತವಾಯಿತು.
ಸಹಕಾರ: ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರ ನೇತೃತ್ವದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಫಿಲೋಮಿನಾ ಪ್ರೌಢಶಾಲೆಯ ನರೇಶ್ ಲೋಬೊ ಹಾಗೂ ಐವಿ ಗ್ರೆಟ್ಟಾ ಪಾಸ್, ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಪ್ರೆಸ್ಸಿ ಡಿ’ಸೋಜ ಹಾಗೂ ಪೂರ್ಣಿಮಾ, ವಿಕ್ಟರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಜಯರಾಜ್ ಜೈನ್, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಪದ್ಮನಾಭ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸದಾಶಿವವರೊಂದಿಗೆ ಆಯಾ ಶಾಲೆ-ಕಾಲೇಜಿನ ಶಿಕ್ಷಕ-ಉಪನ್ಯಾಸಕ, ಆಡಳಿತ ಸಿಬ್ಬಂದಿ ವೃಂದದವರು ಸಹಕರಿಸಿದರು.
ಮಾಯಿದೆ ದೇವುಸ್ ಚರ್ಚ್ ಸಮೂಹ ವಿದ್ಯಾಸಂಸ್ಥೆಗಳ ಮಾಜಿ ಸಂಚಾಲಕ ವಂ|ವಲೇರಿಯನ್ ಡಿ’ಸೋಜ, ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೊ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆರಿ ಡಿ’ಸೋಜ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ್ ಪೈ, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್ ಡಿ’ಸೋಜ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯಿಸ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಆರ್ಥಿಕ ಸಮಿತಿ ಸದಸ್ಯ ಜೆರೋಮಿಯಸ್ ಪಾಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಲೋಮಿನಾ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.
12 ವರ್ಷಗಳ ಬಳಿಕದ ಭಾಗ್ಯ... ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳು ಆರಂಭದಿಂದಲೂ ಫಿಲೋಮಿನಾ ಕ್ರೀಡಾಂಗಣದಲ್ಲಿ ಒಟ್ಟಾಗಿ ವಾರ್ಷಿಕ ಕ್ರೀಡಾಕೂಟವನ್ನು ಆಚರಿಸುವುದು ರೂಢಿ. ಒಂದೊಂದು ವರ್ಷ ಒಂದೊಂದು ಶಾಲೆಗೆ ಅಥವಾ ಕಾಲೇಜಿಗೆ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸುವ ಜವಾಬ್ದಾರಿ ಇರುತ್ತಿತ್ತು. ಕ್ರೀಡಾಕೂಟದ ಸಮಾರೋಪ ಸಮಾರಂಭದ ಬಳಿಕ ಮುಂದಿನ ವರ್ಷ ಯಾರು ಕ್ರೀಡಾಕೂಟವನ್ನು ಸಂಘಟಿಸುವುದು ಎಂಬಂತೆ ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಅಥವಾ ಪ್ರಾಂಶುಪಾಲರಿಗೆ ಕ್ರೀಡಾಕೂಟದ ಧ್ವಜವನ್ನು ಹಸ್ತಾಂತರಿಸಲಾಗುತ್ತಿತ್ತು. ಕಾಲಕ್ರಮೇಣ ಪದವಿ ಕಾಲೇಜುಗಳಿಗೆ ಸೆಮಿಸ್ಟರ್ ಪದ್ಧತಿ ಜೊತೆಗೆ ವಿವಿಧ ಕಾರಣಗಳಿಗುಣವಾಗಿ ಕ್ರೀಡಾಕೂಟದಲ್ಲಿ ಮಹತ್ತರ ಬದಲಾವಣೆ ಬಂದು ಆಯಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮಾತ್ರ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿತ್ತು. ಇದೀಗ ೧೨ ವರ್ಷ ಬಳಿಕ ಮತ್ತೇ ೭ ವಿದ್ಯಾಸಂಸ್ಥೆಗಳು ಒಟ್ಟಾಗಿ ಕ್ರೀಡಾಕೂಟವನ್ನು ಆಚರಿಸುವ ಭಾಗ್ಯ ಒಲಿದು ಬಂದಿರೋದು ಶ್ಲಾಘನೀಯ ಮಾತ್ರವಲ್ಲ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಬಿದ್ದಿರೋದು ಕೂಡ ಉತ್ತಮ ನಡೆಯಾಗಿದೆ.
ಧ್ಜಜ ಅವರೋಹಣ:
ಕ್ರೀಡಾಕೂಟದ ಆರಂಭದಲ್ಲಿ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಮಾಜಿ ಸಂಚಾಲಕ ವಂ|ವಲೇರಿಯನ್ ಡಿ’ಸೋಜರವರು ಕ್ರೀಡಾ ಧ್ವಜಾರೋಹಣಗೈದು ಚಾಲನೆ ನೀಡಿದ್ದರು. ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಸ್ತುತ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಧ್ವಜ ಅವರೋಹಣಗೈದು ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಧ್ವಜವನ್ನು ಹಸ್ತಾಂತರಿಸಿದರು.
ವಿದ್ಯಾರ್ಥಿಗಳು ಭವಿಷ್ಯ ಉಜ್ವಲದತ್ತ ಗಮನಹರಿಸಿ..
ತಾನು ಈ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವುದು ನನಗೆ ಹೆಮ್ಮೆಯೆನಿಸಿದೆ. ಕಳೆದ ಕೆಲವು ವರ್ಷಗಳಿಂದ ಈ ವಿದ್ಯಾಸಂಸ್ಥೆಯಲ್ಲಿ ಸಾಕಷ್ಟು ಧನಾತ್ಮಕ ರೀತಿಯಲ್ಲಿ ಬದಲಾವಣೆಗಳಾಗಿವೆ. ಕಾಲೇಜು ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋರವರ ನೇತೃತ್ವದಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೀತಿವೆ ಜೊತೆಗೆ ಫಿಲೋಮಿನಾ ಕಾಲೇಜಿನ ಈರ್ವರು ಪ್ರಾಂಶುಪಾಲರಾದ ವಂ|ಆಂಟನಿ ಪ್ರಕಾಶ್ ಹಾಗೂ ವಂ|ಅಶೋಕ್ ರಾಯನ್‌ರವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕ್ರೀಡಾಕೂಟ ನೋಡುವಾಗ ನನ್ನ ವಿದ್ಯಾರ್ಥಿ ಜೀವನದ ನೆನಪಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಹೆಜ್ಜೆಯಿಡಬೇಕು.
-ಮೈಕಲ್ ಡಿ’ಸೋಜ, ಅನಿವಾಸಿ ಉದ್ಯಮಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ
-ಫಿಲೋ ಲೀಡ್-ವಂ.ಲಾರೆನ್ಸ್ ಮಸ್ಕರೇನ್ಹಸ್‌ರವರು ಧ್ವಜ ಅವರೋಹಣಗೊಳಿಸಿ ಹಸ್ತಾಂತರ
-ಫಿಲೋ ೧- ಪುಟಾಣಿ ಮಕ್ಕಳ ಓಟದ ಕಲರವ
-ಫಿಲೋ ೨- ಪದವಿ ವಿದ್ಯಾರ್ಥಿಯ ಹೈಜಂಪ್ ನೋಟ
ಫಿಲೋ-೩-ಮೈಲ್-೯೫೮೨ ನಂಬರ್-ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜ ಮಾತನಾಡುವುದು