ಗಾಂಜಾ ಸರಬರಾಜಿನ ಜಾಲ ಹುಡುಕುತ್ತಿರುವ ಪೊಲೀಸರು
ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ಗಾಂಜಾ ಸೇವಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಡಬ ಎಸೈ ಆಂಜನೇಯ ರೆಡ್ಡಿ ಗಸ್ತಿನಲ್ಲಿದ್ದಾಗ ಕಳಾರ ಸಮೀಪದ ಮಸೀದಿ ಬಳಿಯ ಅಂಗಡಿಯ ಪಕ್ಕದಲ್ಲಿ ಓರ್ವ ಗಾಂಜಾ ಸೇವಿಸಿ ತೂರಾಟ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ್ದು,ಮಾದಕ ಸೇವಿಸಿರುವುದು ಅನುಮಾನ ಬರುತ್ತಿದ್ದಂತೆ ವ್ಯಕ್ತಿಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣವು ಮರ್ದಾಳದಲ್ಲಿ ನಡೆದಿದ್ದು, ಮರ್ದಾಳ ಮಸೀದಿಯ ಬಳಿಯ ಆಟೋ ರಿಕ್ಷಾ ನಿಲ್ದಾಣದ ಪಕ್ಕದಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದಾನೆ ಎನ್ನುವ ಸಾರ್ವಜನಿಕರ ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಗಾಂಜಾ ಸೇವಿಸಿರುವ ವಿಚಾರ ವೈದ್ಯರ ವರದಿಯಿಂದ ದೃಢಪಡುತ್ತಿದ್ದಂತೆ ಇಬ್ಬರನ್ನೂ ಬಂಧಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಬಂಟ್ರ ಪಿಲಿಮಜಲು ಮರುವಂತಿಲ ನಿವಾಸಿ ಮಹಮ್ಮದ್ ಶಾಫಿ(35) ಹಾಗೂ ಕಳಾರ ಕಾಲನಿ ನಿವಾಸಿ ಮಹಮ್ಮದ್ ತ್ವಾಹ(18) ಎಂದು ಗುರುತಿಸಲಾಗಿದೆ. ಸದ್ಯ ಬಂಧಿತರಿಂದ ಉಳಿದವರ ಬಗ್ಗೆ ಹಾಗೂ ಗಾಂಜಾ ಪೂರೈಸುವ ತಂಡದ ಬಗ್ಗೆ ತನಿಖೆ ನಡೆದಿದ್ದು, ಗ್ರಾಮೀಣ ಭಾಗಕ್ಕೆ ಎಂಟ್ರಿ ಪಡೆದ ಗಾಂಜಾ ಮಾಫಿಯಾಕ್ಕೆ ಬ್ರೇಕ್ ಹಾಕಲು ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಹಾಗೂ ನೈಟ್ ರೌಂಡ್ಸ್ ಬಿಗಿಗೊಳಿಸಿದೆ.