ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವಾನ್ ಮಸ್ಕರೇನ್ಹಸ್ ಹಾಗೂ ಲಿಲ್ಲಿ ಡಿ’ಸೋಜರವರು ಅ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ದರ್ಬೆ ಪಾಂಗ್ಲಾಯಿ ಜೇಕಬ್ ಸೆಬಾಸ್ಟಿಯನ್ ಮಸ್ಕರೇನಸ್ ಹಾಗೂ ಸಿಸಿಲಿಯಾ ಮಸ್ಕರೇನಸ್ ರವರ ಪುತ್ರಿ ಇವಾನ್ ಮಸ್ಕರೇನ್ಹಸ್ ರವರು 1986ರಲ್ಲಿ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. ಬಳಿಕ 1988ರಿಂದ 2006ರ ತನಕ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ, 2006ರಿಂದ 2018ರ ವರೆಗೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ, 2018ರಿಂದ ಪ್ರಸ್ತುತ ನಿವೃತ್ತರಾಗುವರೆಗೆ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಸೇವೆ ನೀಡಿರುತ್ತಾರೆ. ಇವಾನ್ ಮಸ್ಕರೇನ್ಹಸ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ, ಬಿಎಡ್ ಶಿಕ್ಷಣವನ್ನು ಮಂಗಳೂರು ಸೈಂಟ್ ಆನ್ಸ್ ಕಾಲೇಜು ಆಫ್ ಎಜ್ಯುಕೇಶನ್ ಇಲ್ಲಿ ಪೂರೈಸಿದ್ದರು. ಪ್ರಸ್ತುತ ಇವಾನ್ ಮಸ್ಕರೇನ್ಹಸ್ ರವರು ಪತಿ ಫಿಲೋಮಿನಾ ಕಾಲೇಜಿನ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿರುವ ವಿ.ಜೆ ಫೆರ್ನಾಂಡೀಸ್, ಪುತ್ರ ಫಿನ್ ಲ್ಯಾಂಡ್ ನಲ್ಲಿ ಎಂ.ಎಸ್ ವ್ಯಾಸಂಗ ಮಾಡುತ್ತಿರುವ ರೂಬನ್ ಫೆರ್ನಾಂಡೀಸ್, ಪುತ್ರಿ ಬೆಲ್ಜಿಯಂನ ಇನ್ಫೋಸಿಸ್ ನಲ್ಲಿನ ಉದ್ಯೋಗಿ ಶರೋನ್ ಫೆರ್ನಾಂಡೀಸ್ ರವರೊಂದಿಗೆ ವಾಸ್ತವ್ಯ ಹೊಂದಿದ್ದಾರೆ.
ಪಾಂಗ್ಲಾಯಿ ಕಾಸ್ಮೀರ್ ಡಿ’ಸೋಜ ಹಾಗೂ ಬ್ರಿಜಿಟ್ ಡಿ’ಸೋಜರವರ ಪುತ್ರಿ, ದಿ.ಸೆಬಾಸ್ಟಿಯನ್ ವಿಲಿಯಂ ರೊಡ್ರಿಗಸ್ ರವರ ಪತ್ನಿ ಲಿಲ್ಲಿ ಡಿ’ಸೋಜರವರು ಮೈಸೂರಿನ ಕೆ.ಆರ್ ನಗರದಲ್ಲಿ ಶಿಕ್ಷಕಿ ವೃತ್ತಿ ಜೀವನ ಆರಂಭಿಸಿ ಅಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ, ಬಳಿಕ ಪುತ್ತೂರು ಫಿಲೋಮಿನಾ ಪ್ರೌಢಶಾಲೆಯಲ್ಲಿ ಎರಡು ವರ್ಷ, ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯಲ್ಲಿ ಎರಡು ವರ್ಷ, ಪಾಂಗ್ಲಾಯಿ ಬೆಥನಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಪುನಹ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಗೆ 2016 ರಂದು ಆಗಮಿಸಿ ಸೇವೆಯನ್ನು ಮುಂದುವರೆಸಿ ನಿವೃತ್ತಿ ಹೊಂದಲಿರುವರು. ಲಿಲ್ಲಿ ಡಿ’ಸೋಜರವರು ತಮ್ಮ ಪ್ರಾಥಮಿಕ ಶಿಕ್ಷಣವನ್ಙು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಿಕ್ಷಣವನ್ನು ಉಡುಪಿ ಸಂತ ಸಿಸಿಲೀಸಾ ಕಾನ್ವೆಂಟಿನಲ್ಲಿ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಜೊತೆಗೆ ಕಂಪ್ಯೂಟರ್ ನಲ್ಲಿ ಎಚ್.ಡಿ.ಸಿ.ಎ ಶಿಕ್ಷಣವನ್ನು ಪೂರೈಸಿದ್ದರು. ಪ್ರಸ್ತುತ ಲಿಲ್ಲಿ ಡಿ’ಸೋಜರವರು ಪುತ್ರಿಯರಾದ ಎಲ್ವಿನ್ ಕಿರಣ್,ಆನ್ಸಿಲ್ ನಿಶಾ, ಅಳಿಯ ರೋಶನ್ ಲಸ್ರಾದೋರವರೊಂದಿಗೆ ಪಾಂಗ್ಲಾಯಿಯಲ್ಲಿ ನೆಲೆಸಿದ್ದಾರೆ.