ಪ್ರತಿಭಾ ಕುಳಾಯಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಪ್ರಕರಣ : ಆರೋಪಿ ಶ್ಯಾಮಸುದರ್ಶನ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

0

 

ಕುತೂಹಲ ಸೃಷ್ಟಿಸಿತ್ತು…

ಪ್ರಕರಣದ ಆರೋಪಿಯಾಗಿರುವ ಶ್ಯಾಮಸುದರ್ಶನ ಭಟ್ ಹೊಸಮೂಲೆ ಅವರ ಪತ್ತೆ ಕಾರ್ಯಕ್ಕೆ ಪೊಲೀಸರ ನಾಲ್ಕು ತಂಡಗಳ ರಚನೆ ಮಾಡಿ ವ್ಯಾಪಕ ಹುಡುಕಾಟ ನಡೆಸಲಾಗಿತ್ತು.ಆದರೂ ಈವರೆಗೆ ಅವರನ್ನು ಪತ್ತೆ ಮಾಡಲು ಸಾಧ್ಯವಾಗದೇ ಇರುವುದು ಮತ್ತು ಪೊಲೀಸರು ಪತ್ತೆ ಮಾಡಲು ಸಾಧ್ಯವಾಗದೆ ಇರುವಂತಾಗಲು ಅವರು ಎಲ್ಲಿ ಅಡಗಿ ಕುಳಿತಿದ್ದರು ಎನ್ನುವ ವಿಚಾರ ಜನರಲ್ಲಿ ವ್ಯಾಪಕ ಕುತೂಹಲ ಸೃಷ್ಟಿಸಿತ್ತು.

 

ಪುತ್ತೂರು:ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕಿ ಪ್ರತಿಭಾ ಕುಳಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ್ದ ಪ್ರಕರಣದ ಆರೋಪಿಯಾಗಿರುವ ಪುತ್ತೂರಿನ ಕಹಳೆ ನ್ಯೂಸ್ ಸಂಪಾದಕ ಶ್ಯಾಮಸುದರ್ಶನ್ ಭಟ್ ಹೊಸಮೂಲೆ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ನ.9ರಂದು ಆದೇಶಿಸಿದೆ.
ಶ್ಯಾಮಸುದರ್ಶನ ಭಟ್ ಹೊಸಮೂಲೆ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅ.25ರಂದು ಅರ್ಜಿ ಸಲ್ಲಿಸಿದ್ದರು.ಅವರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರಂಭದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಸರಕಾರಿ ಅಭಿಯೋಜಕರು ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಅ.31ರಂದು ಆಕ್ಷೇಪಣೆ ಸಲ್ಲಿಸಲು ಸರಕಾರಿ ಅಭಿಯೋಜಕರಿಗೆ ಸೂಚಿಸಿತ್ತಲ್ಲದೆ ಈ ಅವಽಯವರೆಗೆ ಆರೋಪಿಯನ್ನು ಬಂಧಿಸದಂತೆ ಸೂಚಿಸಿತ್ತು.ಈ ವಿಚಾರವನ್ನು ಸರಕಾರಿ ಅಭಿಯೋಜಕರು ತನಿಖಾಧಿಕಾರಿಯವರಿಗೆ ತಿಳಿಸುವಂತೆ ನಿರ್ದೇಶನ ನೀಡಿದ್ದ ನ್ಯಾಯಾಲಯ ವಿಚಾರಣೆಯನ್ನು ಅ.31ಕ್ಕೆ ಮುಂದೂಡಿತ್ತು.ವಿಚಾರಣೆ ಮತ್ತೆ ನ.9ಕ್ಕೆ ಮುಂದೂಡಿಕೆಯಾಗಿತ್ತು.ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಪ್ರೀತಿ ಅವರು ಆರೋಪಿ ಶ್ಯಾಮಸುದರ್ಶನ್ ಭಟ್ ಹೊಸಮೂಲೆ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.ಆರೋಪಿ ಶ್ಯಾಮಸುದರ್ಶನ ಭಟ್ ಹೊಸಮೂಲೆ ಅವರ ಪರವಾಗಿ ವಕೀಲ ಶಂಭು ಶರ್ಮ ವಾದಿಸಿದ್ದರು.
ಸುರತ್ಕಲ್‌ನಲ್ಲಿರುವ ಅಕ್ರಮ ಟೋಲ್‌ಗೇಟ್ ತೆರವು ಮಾಡುವಂತೆ ಆಗ್ರಹಿಸಿ ಸಮಾನ ಮನಸ್ಕರ ನೇತೃತ್ವದಲ್ಲಿ ಅ.18ರಂದು ನಡೆದಿದ್ದ ಪ್ರತಿಭಟನೆಯ ವೇಳೆ ಪೊಲೀಸರು ತನ್ನನ್ನು ವಶಕ್ಕೆ ಪಡೆಯುತ್ತಿದ್ದುದನ್ನು ವಿರೋಧಿಸಿ ಪ್ರತಿಭಾ ಕುಳಾಯಿ ಅವರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ್ದರು.ಅವರ ಈ ಭಾವಚಿತ್ರಕ್ಕೆ ಸಂಬಧಿಸಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದ ಆರೋಪಕ್ಕೆ ಸಂಬಧಿಸಿ ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಮತ್ತು ಇನ್ನೋರ್ವ ಆರೋಪಿ ಕೆ.ಆರ್.ಶೆಟ್ಟಿ ಅಡ್ಯಾರಪದವು ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಕೆ.ಆರ್.ಶೆಟ್ಟಿಯವರು ನ್ಯಾಯಾಲಯಕ್ಕೆ ಶರಣಾಗಿದ್ದರು.ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು.ತಲೆಮರೆಸಿಕೊಂಡಿದ್ದ ಶ್ಯಾಮಸುದರ್ಶನ್ ಭಟ್ ಹೊಸಮೂಲೆ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here