ಪಾಪೆಮಜಲು ಸರಕಾರಿ ಪ್ರೌಢಶಾಲೆಯ ರಜತ ಸಂಭ್ರಮ

0

  • ಪಾಪೆಮಜಲು ಪ್ರೌಢಶಾಲೆ ನನ್ನದೇ ಕೂಸು –ಡಿ.ವಿ.ಎಸ್
  • ಊರಿನ ಬೆಳವಣಿಗೆ ಶಾಲೆಯ ಅಭಿವೃದ್ಧಿ ಅಗತ್ಯ-ಮಠಂದೂರು
  • ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಆಗಬೇಕಿದೆ –ಚನಿಲ
  • ಪ್ರೌಢಶಾಲೆ ಆರಂಭಕ್ಕೆ ಕಾರ್ಯಕರ್ತರ ಒತ್ತಡವೇ ಕಾರಣ –ನನ್ಯ
  • ಗ್ರಾ.ಪಂನಿಂದ ಸಹಕಾರ –ಸೌಮ್ಯ ಬಾಲಸುಬ್ರಹ್ಮಣ್ಯ
  • ಬದುಕುವ ಕಲೆ ಸಿಗುವುದು ಸರಕಾರಿ ಶಾಲೆಯಲ್ಲಿ –ವಿಷ್ಣುಪ್ರಸಾದ್
  • 1996ರಲ್ಲಿ ಆರಂಭವಾದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ –ತಿಲಕ್ ರೈ


ಕಾವು: ನನ್ನ ಕಾರ್ಯಕರ್ತರ ಹೋರಾಟದ ಕಿಚ್ಚು ಮತ್ತು ಆಗಿನ ಶಿಕ್ಷಣ ಸಚಿವರಾಗಿದ್ದ ಗೋವಿಂದೇ ಗೌಡರವರ ಉದಾರ ಮನಸ್ಸು, ಆಶೀರ್ವಾದದ ಫಲ 1996ರಲ್ಲಿ ಪಾಪೆಮಜಲುವಿನಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಲು ಕಾರಣವಾಯಿತು, ಪಾಪೆಮಜಲು ಸರ್ಕಾರಿ ಪ್ರೌಢಶಾಲೆ ನನ್ನದೇ ಕೂಸು ಆಗಿದ್ದು, ನಿಮ್ಮ ಮನವಿಯಂತೆ ಶಾಲೆಯ ಅಭಿವೃದ್ಧಿಗೆ ನನ್ನ ಸದಾಸ್ಮಿತ ಟ್ರಸ್ಟ್‌ನಿಂದ ಸಹಕಾರ ಸಿಗಲಿದೆ ಆದರೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಊರಿನವರದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರವರು ಹೇಳಿದರು.

ಅವರು ನ.12ರಂದು ಪಾಪೆಮಜಲು ಸರ್ಕಾರಿ ಪ್ರೌಢಶಾಲೆಯ ರಜತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿತ್ವ ವಿಕಸನಕ್ಕೆ ಮಾದರಿ: ಪಾಪೆಮಜಲು ಪ್ರೌಢಶಾಲೆಯ ಮಕ್ಕಳು ಕಳೆದ 25 ವರ್ಷದ ಅವಧಿಯಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ, ವ್ಯಕ್ತಿತ್ವ ವಿಕಸನಕ್ಕೆ ಮಾದರಿಯಾಗಿರುವ ಪಾಪೆಮಜಲು ಶಾಲೆಗೆ ಮಕ್ಕಳನ್ನು ಕಳುಹಿಸುವ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚು ಮಾಡಿ ಎಂದು ಡಿ.ವಿ ಸದಾನಂದ ಗೌಡರು ಹೇಳಿದರು.

ಊರಿನ ಬೆಳವಣಿಗೆ ಶಾಲೆಯ ಅಭಿವೃದ್ಧಿ ಅಗತ್ಯ -ಮಠಂದೂರು: ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ಊರಿನ ವಿದ್ಯಾಲಯ ಮಕ್ಕಳ ಭವಿಷ್ಯವನ್ನು ರೂಪಿಸುವ ದೇವಾಲಯವಾಗಿದೆ, ಶಾಲೆಯ ಅಭಿವೃದ್ಧಿಯು ಊರಿನ ಬೆಳವಣಿಗೆಗೆ ಅಗತ್ಯವಾಗಿದೆ. ಹಾಗಾಗಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅಂಗನವಾಡಿ ಮತ್ತು ಶಾಲೆಗಳಿಗೆ ಪ್ರಥಮ ಆದ್ಯತೆ ಕೊಟ್ಟು ಸಾಕಷ್ಟು ಅನುದಾನಗಳನ್ನು ನೀಡಲಾಗಿದೆ. ಪಾಪೆಮಜಲು ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದರೆ ಇಲ್ಲಿಗೂ ಪಿಯು ಕಾಲೇಜ್ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಆಗಬೇಕಿದೆ-ಚನಿಲ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ಆಧುನಿಕತೆಯ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೂ ಸಿಲುಕಿಕೊಂಡಿದೆ, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸ್ಪರ್ಧಾತ್ಮಕತೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅದೆಷ್ಟು ಸೌಲಭ್ಯ-ಸೌಕರ್ಯಗಳು ಇದ್ದರೂ ಪೋಷಕರ ಮನೋಭಾವನೆ ಖಾಸಗಿ ಶಿಕ್ಷಣಕ್ಕೆ ಹೆಚ್ಚು ಅವಲಂಬಿತವಾಗಿದೆ, ಹಾಗಾಗಿ ನಮ್ಮೂರಿನ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಆ ಊರಿನವರದ್ದೇ ಆಗಿದೆ ಎಂದು ಹೇಳಿದರು.

ಪ್ರೌಢಶಾಲೆ ಆರಂಭಕ್ಕೆ ಕಾರ್ಯಕರ್ತರ ಒತ್ತಡವೇ ಕಾರಣ-ನನ್ಯ: ಸನ್ಮಾನ ಸ್ವೀಕರಿಸಿದ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಪಾಪೆಮಜಲುವಿನಲ್ಲಿ ಪ್ರೌಢಶಾಲೆ ಆರಂಭಕ್ಕೆ ನಮ್ಮ ಕಾರ್ಯಕರ್ತರ ಒತ್ತಡ ಮತ್ತು ಒತ್ತಾಯವೇ ಪ್ರಮುಖ ಕಾರಣವಾಗಿದೆ, ಜವಾಬ್ದಾರಿ ನೆಲೆಯಲ್ಲಿ ಮತ್ತು ಕೊಟ್ಟ ಮಾತು ಉಳಿಸಿಕೊಳ್ಳಲು ಆಗಿನ ಶಾಸಕರಾಗಿದ್ದ ಡಿ.ವಿ ಸದಾನಂದ ಗೌಡರವರ ಮೂಲಕ ಕಾರ್ಯಕರ್ತರ ಅಪೇಕ್ಷೆಯಂತೆ ಪ್ರೌಢಶಾಲೆಯನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೆವು, ಆಗಿನ ಶಿಕ್ಷಣ ಸಚಿವ ಗೋವಿಂದೇ ಗೌಡರವರ ಉದಾರ ಮನಸ್ಸನ್ನು ಕೂಡ ಮರೆಯುವಂತಿಲ್ಲ, ಡಿ.ವಿಯವರು ಪ್ರೌಢಶಾಲೆ ಮಂಜೂರು ಮಾಡಿಸಿದ್ದಲ್ಲದೇ ಆರಂಭದಲ್ಲೇ 4 ಕೊಠಡಿಯನ್ನು ಕೂಡ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದರು. ಜತೆಗೆ ಪ್ರೌಢಶಾಲೆ ಆರಂಭಕ್ಕೆ ನಾವು ಮಾಡಿದ ಹೋರಾಟಕ್ಕೆ ಪ್ರತಿಯಾಗಿ ಈಗಲೂ ಈ ಭಾಗದ ಕಾರ್ಯಕರ್ತರು ನಮ್ಮ ನೆನಪನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಗ್ರಾ.ಪಂನಿಂದ ಸಹಕಾರ-ಸೌಮ್ಯ ಬಾಲಸುಬ್ರಹ್ಮಣ್ಯ: ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರು ಮಾತನಾಡಿ ನಮ್ಮ ಗ್ರಾ.ಪಂ ವ್ಯಾಪ್ತಿಯ ಏಕೈಕ ಸರಕಾರಿ ಪ್ರೌಢಶಾಲೆಯಾಗಿರುವ ಪಾಪೆಮಜಲು ಇಲ್ಲಿನ ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿದ್ದು, ಅನೇಕ ಸಾಧನೆಗಳನ್ನು ಮಾಡಿದ್ದಾರೆ, ಶಾಲೆಯ ಮಕ್ಕಳ ಕಲಿಕೆಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳಿಗೆ ಗ್ರಾ.ಪಂ ಸಹಕಾರ ನೀಡಲಿದೆ ಎಂದು ಹೇಳಿದರು.

ಬದುಕುವ ಕಲೆ ಸಿಗುವುದು ಸರಕಾರಿ ಶಾಲೆಯಲ್ಲಿ-ವಿಷ್ಣುಪ್ರಸಾದ್: ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್‌ರವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗೆ ಸಮಾನವಾದ ಶಿಕ್ಷಣ ಸಿಗುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಬದುಕುವ ಕಲೆಯ ಶಿಕ್ಷಣದ ವಾತಾವರಣವೂ ಸಿಗುತ್ತದೆ ಎಂದು ಹೇಳಿದರು.

1996ರಲ್ಲಿ ಆರಂಭವಾದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ-ತಿಲಕ್ ರೈ: ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿಯವರು ಮಾತನಾಡಿ 1996ರಲ್ಲಿ ಆಗಿನ ಶಾಸಕರಾಗಿದ್ದ ಡಿ.ವಿ ಸದಾನಂದ ಗೌಡರವರ ಪ್ರಯತ್ನದ ಫಲವಾಗಿ ನಮ್ಮೂರಲ್ಲಿ ಆರಂಭಗೊಂಡ ಪ್ರೌಢಶಾಲೆಯು ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದೆ, ನಮ್ಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡು ದೆಹಲಿಯಲ್ಲಿ ಭಾವುಟ ಹಾರಿಸಿದ ವಿಶೇಷ ಸಾಧನೆ ಮಾಡಿದ್ದಾರೆ, ಕ್ರೀಡಾ ಕ್ಷೇತ್ರ, ಇಂಗ್ಲೀಷ್ ನಾಟಕ ಸ್ಪರ್ಧೆ, ಜನಪದ ನೃತ್ಯದಲ್ಲಿ ನಮ್ಮ ಶಾಲಾ ಮಕ್ಕಳ ಸಾಧನೆ ರಾಷ್ಟ್ರಮಟ್ಟದವರೆಗೆ ತಲುಪಿದೆ, ರಜತ ಸಂಭ್ರಮದ ಅವಽಯಲ್ಲಿ ಶಾಸಕರು ಮತ್ತು ಸಂಸದರ ಅನುದಾನದಿಂದ ಹಾಗೂ ಊರಿನ ವಿದ್ಯಾಭಿಮಾನಿಗಳ ಸಹಕಾರದಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಮತ್ತು ವಿಜ್ರಂಭಣೆಯ ರಜತ ಸಂಭ್ರಮವನ್ನು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷರಿಗೆ ಸನ್ಮಾನ: ಪಾಪೆಮಜಲು ಶಾಲಾ 25 ವರ್ಷದ ಅವಧಿಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದ ನನ್ಯ ಅಚ್ಚುತ ಮೂಡೆತ್ತಾಯ, ಅಮ್ಮಣ್ಣ ರೈ ಡಿ ಪಾಪೆಮಜಲು, ಸುಬ್ರಾಯ ಬಲ್ಯಾಯ ಮದ್ಲರವರಿಗೆ ರಜತ ಸಂಭ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವಾರ್ಪಣೆ: ಸಂಸ್ಥೆಯಲ್ಲಿ 25 ವರ್ಷದ ಅಧಿಯಲ್ಲಿ ಸೇವೆ ಸಲ್ಲಿಸಿ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರುಗಳಾದ ಯಶವಂತ ಬೇಗಲ್, ಮಹೇಶ್, ಅಪ್ಪಣ್ಣ ನಾಯಕ್, ನಾರಾಯಣ, ಸುರೇಶ್ ಕುಮಾರ್ ಪಿ, ಗ್ರೆಗರಿ ರೋನಿ ಪಾಯಸ್, ರೆನಿಟಾ ಸುಷ್ಮಾ ಡಿಸೋಜಾ, ವಸಂತ ಮೂಲ್ಯ, ಪ್ರೇಮ್ ಕುಮಾರ್, ಲೋಕಾನಂದ ಎನ್, ಮಿಯಾಗೆ, ಕುಸುಮಾವತಿ ಪಿ, ಪ್ರಕಾಶ್ ಮೂಡಿತ್ತಾಯರವರಿಗೆ ರಜತ ಸಂಭ್ರಮದಲ್ಲಿ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ: ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತನ್ವಿ ಕರ, ದೀಕ್ಷಿತಾ ಬಿ, ಯಶ್ವಿತ್, ಜಿತಿನ್‌ರವರಿಗೆ ರಜತ ಸಂಭ್ರಮದಲ್ಲಿ ಶಾಲು ಹಾಕಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಡಿ.ವಿ.ಎಸ್.ಗೆ ಮನವಿ: ಪಾಪೆಮಜಲು ಶಾಲಾ ಕೊಠಡಿಯ ಟೈಲ್ಸ್ ಅಳವಡಿಕೆ ಮತ್ತು ಕ್ರೀಡಾಂಗಣದ ಅಭಿವೃದ್ಧಿಗಾಗಿ ಡಿ.ವಿ ಸದಾನಂದ ಗೌಡರವರ ಸದಾಸ್ಮಿತ ಚಾರಿಟೇಬಲ್ ಟ್ರಸ್ಟ್‌ನಿಂದ ಅನುದಾನ ಒದಗಿಸಿಕೊಡುವಂತೆ ಡಿ.ವಿ.ಎಸ್‌ರವರಿಗೆ ಶಾಲಾ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿಯವರು ಮನವಿ ಸಲ್ಲಿಸಿದರು.

ವಿವಿಧ ಕಾಮಗಾರಿಗಳ ಉದ್ಘಾಟನೆ: ರಜತ ಸಂಭ್ರಮ ವರ್ಷದಲ್ಲಿ ಶಾಸಕರ ಮತ್ತು ಸಂಸದರ ಅನುದಾನದಲ್ಲಿ ಸಂಸ್ಥೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಸಂಜೀವ ಮಠಂದೂರು ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರವರು ಉದ್ಘಾಟನೆ ಮಾಡಿದರು. ಸಂಸ್ಥೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಂ, ಶಾಲಾ ಕೊಠಡಿಗೆ ಟೈಲ್ಸ್ ಅಳವಡಿಕೆ, ಆವರಣ ಗೋಡೆ, ಸುಣ್ಣ ಬಣ್ಣ, ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ನಡೆಸಲಾಗಿತ್ತು.

ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಭಂಡಾರಿ ಕುತ್ಯಾಡಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಮೋನಪ್ಪ ಪೂಜಾರಿಯವರು ವರದಿ ವಾಚಿಸಿದರು.

ಶಾಲಾ ವಿದ್ಯಾಥಿಗಳು ಪ್ರಾರ್ಥಿಸಿದರು. ರಜತ ಸಂಭ್ರಮ ಸಮಿತಿ ಅಧ್ಯಕ್ಷ ಸಚಿನ್ ಪಾಪೆಮಜಲು ವಂದಿಸಿದರು. ನಿವೃತ್ತ ಪ್ರಾಂಶುಪಾಲ ಕೆ.ಆರ್ ಗೋಪಾಲಕೃಷ್ಣ ಮತ್ತು ಹರ್ಷಿತಾ ರೈಯವರು ಕಾರ್ಯಕ್ರಮ ನಿರ್ವಹಿಸಿದರು. ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಕುತ್ಯಾಡಿ, ರಜತ ಸಂಭ್ರಮ ಸಮಿತಿ ಕಾರ್ಯದರ್ಶಿ ವಿಶ್ವನಾಥ ಗೌಡ ಕನ್ನಯ, ರಕ್ಷಿತ್ ಪಾಪೆಮಜಲುರವರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಶಾಲಾ ಶಿಕ್ಷಕ ವೃಂದದವರು ವಿವಿಧ ಜವಾಬ್ದಾರಿ ನಿರ್ವಹಿಸಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: ಶಾಲಾ ರಜತ ಸಂಭ್ರಮದ ಸಲುವಾಗಿ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿತು.

ಚಾ ಪರ‍್ಕ ಕಲಾವಿದರಿಂದ ತುಳು ನಾಟಕ: ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ತೆಲಿಕೆದ ಬೊಳ್ಳಿ ಡಾ| ದೇವದಾಸ್ ಕಾಪಿಕಾಡ್‌ರವರು ರಚಿಸಿ ನಟಿಸಿ ನಿರ್ದೇಶಿಸಿದ ಚಾ ಪರ‍್ಕ ಕಲಾವಿದರಿಂದ ಕಾಪಿಕಾಡ್, ಬೋಳಾರ್, ವಾಮಂಜೂರು ಅಭಿನಯದಲ್ಲಿ ನಾಯಿದ ಬೀಲ ತುಳು ನಾಟಕ ನಡೆಯಿತು.

ಡಿ.ವಿ.ಎಸ್, ಮಠಂದೂರು, ಚನಿಲರವರಿಗೆ ಸನ್ಮಾನ:

ಪಾಪೆಮಜಲು ಪ್ರೌಢಶಾಲೆಯ ಆರಂಭಕ್ಕೆ ಕಾರಣರಾದ ಡಿ.ವಿ ಸದಾನಂದ ಗೌಡ, ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಿದ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಽಕಾರ ಸ್ವೀಕರಿಸಿರುವ ಚನಿಲ ತಿಮ್ಮಪ್ಪ ಶೆಟ್ಟಿಯವರಿಗೆ ರಜತ ಸಂಭ್ರಮ ಸಮಿತಿಯಿಂದ ಶಾಲು ಹೊದಿಸಿ, ಫಲಪುಷ, ಸ್ಮರಣಿಕೆ ನೀಡಿ ಅಭಿನಂದಿಸಿ ಸನ್ಮಾನಿಸಲಾಯಿತು.

ಶಾಲೆ ಮಂಜೂರು ಮಾಡಿದರೂ ನನ್ನ ಕಾರ್ಯಕರ್ತರಿಂದಲೇ ಹೋರಾಟ ಎದುರಿಸಬೇಕಾಯಿತು -ಡಿ.ವಿ.ಎಸ್

ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಆಗಿನ ಶಿಕ್ಷಣ ಮಂತ್ರಿಗಳು ಪ್ರತಿ ತಾಲೂಕಿಗೂ ಒಂದೊಂದು ಪ್ರೌಢಶಾಲೆಯನ್ನು ಮಂಜೂರು ಮಾಡಿದ್ದರು, ನನಗೆ ಸಿಕ್ಕಿದ ಶಾಲೆಯನ್ನು ನಾನು ಬೆಟ್ಟಂಪಾಡಿಗೆ ನೀಡಿ ಬೆಂಗಳೂರಿನಿಂದ ಪುತ್ತೂರಿಗೆ ಬರುವಾಗ ಹಾರ, ತುರಾಯಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ನನಗೆ ನನ್ನ ಕಾರ್ಯಕರ್ತರಿಂದಲೇ ಹೋರಾಟದ ಬಿಸಿ ಎದುರಿಸಬೇಕಾಯಿತು, ಅರಿಯಡ್ಕದ ಪಾಪೆಮಜಲುವಿನಲ್ಲಿ ಸರ್ಕಾರಿ ಪ್ರೌಢಶಾಲೆ ಬೇಕೆಂಬುದು ಇಲ್ಲಿನ ಕಾರ್ಯಕರ್ತರ ಬೇಡಿಕೆಯಾಗಿತ್ತು, ಹೋರಾಟದ ಮುಂಚೂಣಿಯಲ್ಲಿದ್ದ ನನ್ಯ ಅಚ್ಚುತ ಮೂಡೆತ್ತಾಯರವರ ತಂಡದಲ್ಲಿ ಶಿವಪ್ಪ ಕುಲಾಲ್, ಬಾಲಕೃಷ್ಣ, ಮರುದಮುತ್ತು ಸೇರಿದಂತೆ ಅನೇಕರು ನನ್ನ ಕಛೇರಿಯಲ್ಲಿ ಬಂದು ತಮ್ಮ ಹೋರಾಟದ ಬೇಡಿಕೆಯನ್ನು ಮುಂದಿಟ್ಟು ಪಾಪೆಮಜಲುವಿಗೆ ಪ್ರೌಢಶಾಲೆ ಸಿಗಲೇಬೇಕು ಎನ್ನುವ ಹಠ ಹಿಡಿದರು, ನನ್ನ ಕಾರ್ಯಕರ್ತರ ಭಾವನೆಗಳಿಗೆ, ಹೋರಾಟಕ್ಕೆ ಧಕ್ಕೆಯಾಗಬಾರದೆಂದು ಅವತ್ತೇ ರಾತ್ರಿ ಮತ್ತೆ ಬೆಂಗಳೂರಿಗೆ ತೆರಳಿ ಶಿಕ್ಷಣ ಸಚಿವರ ಮನೆಗೆ ಹೋಗಿ ಸಚಿವರಲ್ಲಿ ಬೇಡಿಕೊಂಡೆ, ನನ್ನ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಇನ್ನೊಂದು ಪ್ರೌಢಶಾಲೆಯನ್ನು ನೀಡಬೇಕೆಂದು ಹಠ ಹಿಡಿದೆ, ನನ್ನ ನಿವೇದನೆಗೆ, ಕಾರ್ಯಕರ್ತರ ಭಾವನೆಗಳಿಗೆ ಬೆಲೆ ನೀಡಿದ ಶಿಕ್ಷಣ ಸಚಿವರು, ನೀನು ಯುವ ಶಾಸಕ, ಯುವ ಶಾಸಕನ ಮಾತು ಯಾವತ್ತೂ ತಪ್ಪಾಗಬಾರದು ಎಂದು ಹೇಳಿ ಅವರ ಸ್ವಂತ ಊರು ಶೃಂಗೇರಿಗೆ ಮೀಸಲಿಟ್ಟಿದ್ದ ಒಂದು ಪ್ರೌಢಶಾಲೆಯನ್ನು ನನ್ನ ಪುತ್ತೂರಿಗೆ ಹೆಚ್ಚುವರಿಯಾಗಿ ನೀಡಿದ ಪರಿಣಾಮ ಪಾಪೆಮಜಲುವಿನಲ್ಲಿ ಪ್ರೌಢಶಾಲೆ ಆರಂಭಗೊಂಡಿತು, ನನ್ನ ಕಾರ್ಯಕರ್ತರ ಹೋರಾಟಕ್ಕೆ ಜಯ ಸಿಕ್ಕಿತು ಎಂದು 1996ರ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಆಗಿನ ಪುತ್ತೂರು ಶಾಸಕ ಡಿ.ವಿ ಸದಾನಂದ ಗೌಡರವರು ಸಭಾವೇದಿಕೆಯಲ್ಲಿ ನೆನಪು ಮಾಡಿದರು.

LEAVE A REPLY

Please enter your comment!
Please enter your name here