ಪುತ್ತೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಸಕ್ತಿ ಇರುವವರು ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕೆಪಿಸಿಸಿಗೆ ಅರ್ಜಿ ಸಲ್ಲಿಸಲು ನ.15 ಕೊನೇಯ ದಿನ ಎಂದು ಹೇಳಲಾಗಿತ್ತಾದರೂ ಈ ಅವಧಿಯನ್ನು ನ.21ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ಡಾ.ದಿವ್ಯಪ್ರಭಾ ಚಿಲ್ತಡ್ಕ, ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ಪುತ್ತೂರಿನವರೇ ಆಗಿರುವ ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತು ಅಭಿಷೇಕ್ ಬೆಳ್ಳಿಪ್ಪಾಡಿ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಛೇರಿಗೆ ಅರ್ಜಿ ಸಲ್ಲಿಸಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಖ್ಯಾತ ಕ್ಯಾನ್ಸರ್ ತಜ್ಞರೂ, ಕೆಪಿಸಿಸಿ ಸದಸ್ಯರೂ ಆಗಿರುವ ಡಾ.ರಘು ಬೆಳ್ಳಿಪ್ಪಾಡಿ ಅವರು ಈ ಬಾರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿಲ್ಲ. ಬದಲಾಗಿ ಅವರ ಪುತ್ರರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತು ಅಭಿಷೇಕ್ ಬೆಳ್ಳಿಪ್ಪಾಡಿ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿಗಳಾಗಿದ್ದು ಯುವ ಕಾಂಗ್ರೆಸ್, ಯುವ ಬ್ರಿಗೇಡ್, ಕಾಂಗ್ರೆಸ್ ಎಸ್ಸಿ ಘಟಕ, ದಲಿತ ಸಂಘಟನೆ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಪ್ರಹ್ಲಾದ್ ಮತ್ತು ಅಭಿಷೇಕ್ ಸಹೋದರರು ಕೆಪಿಸಿಸಿಗೆ ಅರ್ಜಿ ಸಲ್ಲಿಸುವ ವೇಳೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾರ್ಗದರ್ಶನ ನೀಡಿದ್ದರು.