ಕಿದು ಸಿಪಿಸಿಆರ್‌ಐ; ಬೃಹತ್ ಕೃಷಿ ಮೇಳ, ಕೃಷಿ ಪ್ರದರ್ಶಕ್ಕೆ ಚಾಲನೆ

0

ವಿಜ್ಞಾನಿಗಳ ಅಧ್ಯಯನದ ಫಲ ರೈತರಿಗೆ ತಲುಪಲಿ: ಕೊಡ್ಗಿ

ಕಡಬ: ಕಿಸಾನ್ ಮೇಳಗಳಲ್ಲಿ ಜನರ ಆಸಕ್ತಿ ಕಡಿಮೆ ಆಗುತ್ತಿದೆ. ಯಾಕೆಂದರೆ ವಿಜ್ಞಾನಿಗಳು ನಡೆಸುವ ಅಧ್ಯಯನದ ಫಲ ರೈತರಿಗೆ ನೇರವಾಗಿ ತಲುಪುತ್ತಿಲ್ಲ. ವಿಜ್ಞಾನಿಗಳು ತಮ್ಮ ಕಛೇರಿಯಿಂದ ಹೊರಬಂದು ರೈತರ ಮನೆಬಾಗಿಲಿಗೆ ಹೋಗಿ ಅಧ್ಯಯನ ಮಾಡಬೇಕು. ವಿಜ್ಞಾನಿಗಳು ನಡೆಸುವ ಅಧ್ಯಯನ, ಸಂಶೋಧನೆಯ ಪ್ರತಿಫಲ ರೈತರಿಗೆ ನೇರವಾಗಿ ತಲುಪಲಿ. ಆಗ ಇಂತಹ ಮೇಳಗಳು ಫಲಪ್ರದವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.

ನೆಟ್ಟಣದ ಕಿದುವಿನಲ್ಲಿರುವ ಐಸಿಎಆರ್-ಸಿಪಿಸಿಆರ್‌ಐ ಸಂಶೋಧನಾ ಸಂಸ್ಥೆಯಲ್ಲಿ ಸಂಸ್ಥೆಯ ವತಿಯಿಂದ ಮುಂದಿನ ಐದು ದಿನಗಳ ಕಾಲ ನಡೆಯುವ ಬೃಹತ್ ಕೃಷಿ ಮೇಳ ಮತ್ತು ಕೃಷಿ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇಂದು ವಿವಿಧ ಕಾರಣಗಳಿಂದ ಕೃಷಿಯ ಬಗ್ಗೆ ರೈತರು ಹಿಂದೆ ಸರಿಯುತ್ತಿದ್ದಾರೆ. ಅಡಿಕೆಗೆ ಪ್ರತ್ಯೇಕವಾದ ಕೃಷಿ ಕಂಡು ಹಿಡಿಯಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಿಪಿಸಿಆರ್‌ಐ ಸಂಸ್ಥೆ ಮುಂದೆ ಬರಲಿ, ಕ್ಯಾಂಪ್ಕೋ ನಿಮಗೆ ಕೈ ಜೋಡಿಸಲಿದೆ ಎಂದರು.

ಅಡಿಕೆ ಹೆಚ್ಚಾಗಿ ತಿನ್ನಿ;
ಅಡಿಕೆ ಬೆಳೆಯುವ ನಾವು ಅಡಿಕೆಯನ್ನು ಹೆಚ್ಚಾಗಿ ತಿನ್ನಬೇಕು. ಈ ಮೂಲಕ ಅಡಿಕೆ ಬೆಲೆ ಹೆಚ್ಚಾಗುವಂತೆ ಪ್ರಯತ್ನಿಸಬೇಕು. ಅಡಿಕೆ ಆರೋಗ್ಯಕ್ಕೆ ಉತ್ತಮ. ಅಡಿಕೆ ನಿಷೇಧ ಎಂಬುದು ತಪ್ಪು ಮಾಹಿತಿ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಬಗ್ಗೆ ಪೂರಕ ಸಂಶೋಧನೆ ನಡೆಸಿ ವರದಿ ನೀಡಬೇಕು ಜತೆಗೆ ಅಡಿಕೆ ಬೆಲೆಯಲ್ಲಿ ಸ್ಥಿರತೆ ಕಾಯಬೇಕಿದೆ ಎಂದ ಅವರು, ಕ್ಯಾಂಪ್ಕೋ ಮುಂದಿನ ತಿಂಗಳಿನಿಂದ ತೆಂಗು ಖರೀದಿ ಆರಂಭಿಸಲಿದೆ. ಮುಂದೆ ಕ್ಯಾಂಪ್ಕೋ ವತಿಯಿಂದ ತೆಂಗಿನ ಎಣ್ಣೆ ಮಾರುಕಟ್ಟೆಗೆ ಬಿಡಲಾಗುವುದು ಎಂದರು.

ಮಾನವರಿಗೆ ಮಾರಕವಾಗದಿರಲಿ; ಎಲೆರೋಗಕ್ಕೆ ಏಕಕಾಲದಲ್ಲಿ ಔಷಧಿ ಸಿಂಪಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಸಿಂಪಡಣೆ ಔಷಧಿ ಯುರೋಪಿಯನ್ ದೇಶದಲ್ಲಿ ನಿಷೇಧವಾಗಿದೆ. ಅದೇ ಔಷಧಿಯೋ ಎಂಬುದು ಗೊತ್ತಿಲ್ಲ. ಅದೇ ಆಗಿದ್ದಲ್ಲಿ ಮುಂದೆ ಎಂಡೋಸಲ್ಫಾನ್ ಮಾದರಿಯ ಅನಾಹುತ ಸಂಭವಿಸಲಿದೆ. ಈ ಬಗ್ಗೆ ಸೂಕ್ತ ಚರ್ಚೆ ಮಾಡಿ, ಅನಾಹುತ ಇಲ್ಲದೇ ಇದ್ದಲ್ಲಿ ಉಪಯೋಗಿಸಲಿ, ಅಡಿಕೆ ಮರದ ಕಾಯಿಲೆ ಗುಣಪಡಿಸಲು ಮನುಷ್ಯರ ಆರೋಗ್ಯಕ್ಕೆ ಆತಂಕ ತಂದೊಡ್ಡುವ ವಿಚಾರ ಸರಿಯಲ್ಲ ಎಂದು ಅವರು ವಿಜ್ಞಾನಿಗಳ ಗಮನ ಸೆಳೆದರು.

ಸಿಪಿಸಿಆರ್‌ಐ ಸಂಸ್ಥೆಯ ನಿರ್ದೇಶಕಿ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಕರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ನಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ. ಕೃಷಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು. ನವದೆಹಲಿಯ ಡಿಕೆಎಂಎ-ಐಸಿಎಆರ್ ಯೋಜನಾ ನಿರ್ದೇಶಕ ಡಾ| ಎಸ್.ಕೆ.ಮಲ್ಹೋತ್ರಾ ಮುಖ್ಯ ಅತಿಥಿಯಾಗಿದ್ದರು. ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷ ಶಿವಶಂಕರ್, ಡಿಸಿಸಿಡಿ ಉಪನಿರ್ದೇಶಕ ದಾದಸಾಹೇಬ್ ದೇಸಾಯಿ, ಹೋಮಿಯೋ ಚೆರಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮಶ್ರೀ ಪುರಸ್ಕೃತರಾಗಿರುವ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕ್ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಸಿಪಿಸಿಆರ್‌ಐ ನೋಡೆಲ್ ಅಧಿಕಾರಿ ಡಾ.ವಿ.ನಿರಳ್ ಸ್ವಾಗತಿಸಿದರು. ಸಂಸ್ಥೆಯ ವಿಜ್ಞಾನಿ ದಿವಾಕರ್ ವಂದಿಸಿದರು. ಹಿರಿಯ ತಾಂತ್ರಿಕ ಸಹಾಯಕ ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು

ಕೃಷಿ ಪ್ರದರ್ಶನ;

ಮುಂದಿನ ಐದು ದಿನಗಳು ನಡೆಯುವ ಕೃಷಿ ಮೇಳ, ಕೃಷಿ ಪ್ರದರ್ಶನದಲ್ಲಿ ಭಾಗವಹಿಸಲು ಸಾವಿರಾರು ಜನರು ಆಗಮಿಸಿದ್ದರು. ವಿವಿಧ ರೀತಿಯ ಕೃಷಿ ಪ್ರದರ್ಶನಗಳ ಸ್ಟಾಲ್‌ಗಳು, ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕೃಷಿಕರು ಅದರ ಪ್ರಯೋಜನ ಪಡೆದುಕೊಂಡರು. ಸುದ್ದಿ ಕೃಷಿ ಸೇವಾ ಕೇಂದ್ರದಿಂದಲೂ ಸ್ಟಾಲ್ ತೆರೆದು ಮಾಹಿತಿ ನೀಡಲಾಗುತ್ತಿದೆ. ಸಭಾ ಕಾರ್ಯಕ್ರಮದ ಬಳಿಕ ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ಸಂವಾದ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here