ಹರಿದು ಬಂದ ಭಕ್ತ ಸಾಗರ
- ಲಕ್ಷ ಬಿಲ್ವಾರ್ಚನೆ, ಭಜನೆ, ಸಾಮೂಹಿಕ ಕುಂಕುಮಾರ್ಚನೆ
- ರಥ ಬೀದಿಯಲ್ಲಿ ಕಂಗೊಳಿಸಿದ ಹಣತೆಯ ಬೆಳಕು
- ಶ್ರೀ ದೇವರ ಬಲಿ ಉತ್ಸವ, ಚಂದ್ರಮಂಡಲ, ತೆಪ್ಪೋತ್ಸವ
ಪುತ್ತೂರು:ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.23ರಂದು ಲಕ್ಷದೀಪೋತ್ಸವ ಸಂಭ್ರಮ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ವೈಭವಯುತವಾಗಿ ನಡೆಯಿತು.
ಕೇವಲ ಧಾರ್ಮಿಕ ವಿಧಿವಿಧಾನಗಳಲ್ಲದೆ, ಧ್ಯಾನಕ್ಕೆ ಹಾಗೂ ಜ್ಞಾನಕ್ಕೆ ಬೆಳಕಾಗುವಂತಹ ಹಲವಾರು ಕಾರ್ಯಕ್ರಮಗಳು ದೀಪೋತ್ಸವದ ಸಂದರ್ಭದಲ್ಲಿ ಭಕ್ತರ ಗಮನ ಸೆಳೆಯಿತು. ದೇವಳದ ರಥ ಬೀದಿಯ ಉದ್ದಕ್ಕೂ ಬಣ್ಣ ಬಣ್ಣದ ರಂಗೋಲಿಯ ನಡುವೆ ಸಾಲು ಸಾಲು ಹಣತೆ ದೀಪಗಳು ಕಂಗೊಳಿಸುತ್ತಿದ್ದವು. ಇದರ ಜೊತೆಗೆ ಅಯ್ಯಪ್ಪ ಭಕ್ತವೃಂದದಿಂದ ಅಯ್ಯಪ್ಪ ಗುಡಿಯಲ್ಲಿ, ಪತಂಜಲಿ ಯೋಗ ಕೇಂದ್ರದಿಂದ ಸಭಾಭವನ, ಮಹಾಲಿಂಗೇಶ್ವರ ಭಜನಾ ಮಂಡಳಿ ಮತ್ತು ತಿಯಾ ಸಮಾಜ ಹಾಗು ಈಶ ವಿದ್ಯಾಲಯದಿಂದ ಧ್ಯಾನಾರೂಢ ಶಿವನ ಮೂರ್ತಿ ಬಳಿ, ಗುರುದೇವ ಒಡಿಯೂರು ಗ್ರಾಮ ವಿಕಾಸದವರಿಂದ ಪುಷ್ಕರಣಿಯ ಸುತ್ತ, ನಿತ್ಯ ಕರಸೇವಕರಿಂದ ರಥಬೀದಿ ಮೊದಲ ಭಾಗ, ಆರ್ಟ್ ಆಫ್ ಲಿವಿಂಗ್‌ನವರಿಂದ ರಥಬೀದಿಯ ಮಧ್ಯದಿಂದ ಕೊನೆಯ ತನಕ, ಒಕ್ಕಲಿಗ ಗೌಡ ಸಮಾಜದಿಂದ ದೇವಳದ ಎದುರು ಗೋಪುರದಲ್ಲಿ, ಗೃಹರಕ್ಷಕ ದಳದಿಂದ ಗೋಶಾಲೆ, ಮುಂಡ್ಯತ್ತಾಯ ದೈವಸ್ಥಾನದಿಂದ ದೇವಸ್ಥಾನದ ಸುತ್ತ, ಮೊಗೇರ ಸಮಾಜದಿಂದ ಪಂಚಾಕ್ಷರಿ ಮಂಟಪ, ಶಿವಾಜಿ ಕ್ರಿಕೆಟ್ ತಂಡದಿಂದ ಮೂಲನಾಗನ ಸನ್ನಿಧಿಯಲ್ಲಿ, ರಕ್ತೇಶ್ವರಿ ಸಮಿತಿಯಿಂದ ಬ್ರಹ್ಮರಥ ಮಂದಿರದಲ್ಲಿ, ಕಂಬಳ ಸಮಿತಿಯಿಂದ ಕಂಬಳ ಕರೆಯ ಸುತ್ತಮುತ್ತ ಹಣತೆ ದೀಪಗಳನ್ನು ಬೆಳಗಿಸುವ ಮೂಲಕ ಒಟ್ಟು ದೇವಳದ 18 ಎಕ್ರೆ ಜಾಗದಲ್ಲೂ ಭಕ್ತರು ಹಣತೆಯ ದೀಪ ಬೆಳಗಿಸಿದರು. ಜಾತ್ರೆ ಗದ್ದೆ ಲಕ್ಷ ಲಕ್ಷ ದೀಪಗಳಿಂದ ಪ್ರಜ್ವಲಿಸಿತು. ದೇವರ ಬಲಿ ಉತ್ಸವದಲ್ಲಿ ಚಂದ್ರಮಂಡಲ ರಥೋತ್ಸವ, ತೆಪ್ಪೋತ್ಸವ ನಡೆಯಿತು.
ಲಕ್ಷ ಬಿಲ್ವಾರ್ಚನೆ: ಬೆಳಿಗ್ಗೆ ಪೂಜೆಯ ಬಳಿಕ ದೇವಳದಲ್ಲಿ ಲಕ್ಷ ಬಿಲ್ವಾರ್ಚನೆ ಮತ್ತು ದೇವಳದ ಗದ್ದೆಯಲ್ಲಿ ಭಜನಾ ಕಾರ್ಯಕ್ರಮ ಆರಂಭಗೊಂಡಿತ್ತು.ದೇವಳದ ಒಳಾಂಗಣ ಗೋಪುರದಲ್ಲಿ ದೀಪವನ್ನು ಇರಿಸಿ ಲಕ್ಷ ಬಿಲ್ವಾರ್ಚಣೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. 20 ಮಂದಿ ವೈದಿಕರು 5 ಬಾರಿಗೆ ಒಂದು ಲಕ್ಷ ಶಿವಶಾಸ ನಾಮದಿಂದ 1 ಲಕ್ಷ ಸಲ ಪಠಣ ಮಾಡಿ, ಒಂದೊಂದು ನಾಮದಿಂದ ಒಂದೊಂದು ಬಿಲ್ವಾರ್ಚನೆ ಮಾಡಲಾಯಿತು. ಮಧ್ಯಾಹ್ನದ ಮಹಾಪೂಜೆಯ ಸಂದರ್ಭ ಅರ್ಚನೆ ಮಾಡಲ್ಪಟ್ಟ ಬಿಲ್ವಪತ್ರೆಗಳನ್ನು ದೇವಳದ ಗರ್ಭಗುಡಿಗೆ ವೈದಿಕರು ಕೊಂಡೊಯ್ದು ದೇವರಿಗೆ ಸಮರ್ಪಣೆ ಮಾಡಿದರು.ವೇ.ಮೂ.ಜಯರಾಮ ಜೋಯಿಸರು ಬಿಲ್ವಾರ್ಚನೆ ಸಮರ್ಪಣೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ದೇವಳದ ಪ್ರಧಾನ ಅರ್ಚಕರಾದ ವೇ.ಮೂ.ವಿ.ಎಸ್ ಭಟ್ ಮತ್ತು ವಸಂತ ಕೆದಿಲಾಯ ಅವರು ಪ್ರಧಾನ ವೈದಿಕ ಕಾರ್ಯಕ್ರಮ ನೆರವೇರಿಸಿದರು.
ಭಜನೆ: ಬೆಳಿಗ್ಗೆ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ವಿವಿಧ ಭಜನಾ ಮಂಡಳಿಯಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.ಸಂಜೆ ರಥ ಬೀದಿಯ ಬಳಿ ಸಂಕೀರ್ತನೆಕಾರ ಭಜನಾ ಗುರು ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ ಭಜನಾ ಸತ್ಸಂಗ ನಡೆಯಿತು.ಸಾವಿರಾರು ಮಂದಿ ಭಜಕರು ಸತ್ಸಂಗದಲ್ಲಿ ಭಾಗವಹಿಸಿದ್ದರು.
ಸಾಮೂಹಿಕ ಕುಂಕುಮಾರ್ಚನೆ: ಭಜನೆಯ ನಡುವೆ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಕುವರಿಯರಿಂದ ವಿದ್ವಾನ್ ತೇಜಶಂಕರ ಸೋಮಯಾಜಿ ಮತ್ತು ವೇ.ಮೂ.ಮುರಳಿಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಲಲಿತ ಸಹಸ್ರನಾಮ ಪಠಣದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.ಬಳಿಕ ಮತ್ತೆ ಭಜನಾ ಕಾರ್ಯಕ್ರಮ ಆರಂಭಗೊಂಡಿತು.
ರಥ ಬೀದಿಯಲ್ಲಿ ದೀಪ ಪ್ರಜ್ವಲನೆ: ಸಂಜೆ ಸರಿ ಸುಮಾರು ಗಂಟೆ 7.15ರ ಬಳಿಕ ರಥ ಬೀದಿ ಸೇರಿದಂತೆ ದೇವಳದಿಂದ ಸೂಚಿಸಿದ ಕಡೆಗಳಲ್ಲಿ ಹಣತೆಯನ್ನು ಬೆಳಗಿಸಲಾಯಿತು. ದೇವಳದ ಗರ್ಭಗುಡಿಯ ನಂದಾದೀಪದಿಂದ ತಂದ ಬೆಳಕನ್ನು ದೇವಳದ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್ ಭಟ್ ಅವರು ರಥ ಬೀದಿಯಲ್ಲಿ ಬಾಳೆ ದಿಂಡಿನಲ್ಲಿ ಶೃಂಗರಿಸಿದ ಹಣತೆಗಳಿಗೆ ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ್ ಗೌಡ, ಶೇಖರ್ ನಾರಾವಿ, ವೀಣಾ ಬಿ.ಕೆ, ಡಾ. ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರು ದೀಪ ಪ್ರಜ್ವಲನೆ ಮಾಡಿದರು. ಭಕ್ತರು ಹಣತೆಯ ಮೂಲಕ ಎಲ್ಲಾ ಕಡೆ ದೀಪ ಪ್ರಜ್ವಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಸಹಿತ ನಿತ್ಯ ಕರಸೇವಕರು, ಭಕ್ತರು ಉಪಸ್ಥಿತರಿದ್ದರು. ಬಹುತೇಕ ಮಂದಿ ಭಕ್ತರು ಮನೆಮಂದಿಯೊಂದಿಗೆ ಬಂದಿದ್ದು, ಹಣತೆ ಬೆಳಗಿಸಿ ಸೆಲ್ಫಿ ತೆಗೆಯುವ ಮೂಲಕ ಲಕ್ಷದೀಪೋತ್ಸವವನ್ನು ಸಂಭ್ರಮಿಸಿದರು. ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರು ಒಟ್ಟು ಕಾರ್ಯಕ್ರಮದ ಉದ್ಘೋಷಕರಾಗಿ ಕಾರ್ಯನಿರ್ವಹಿಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರ ನೇತೃತ್ವದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.ದೇವಳದ ಗದ್ದೆಯಲ್ಲಿ ಅಗ್ನಿಶಾಮಕ ದಳದವರನ್ನು ನಿಯೋಜಿಸಲಾಗಿತ್ತು.