ಯಶಸ್ಸಿನೆಡೆಗಿನ ದೃಢ ಚಿತ್ತ ವೈಯಕ್ತಿಕ ಅಭಿವೃದ್ಧಿಯ ಅಡಿಪಾಯ: ಪ್ರೊ. ವಿ.ಜಿ ಭಟ್

0

ಪುತ್ತೂರು : ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮುನ್ನುಡಿ ಇಡುತ್ತಿದೆ. ಕಾಲೇಜು ಒದಗಿಸುವ ಸೌಕರ್ಯಗಳನ್ನು ಸದ್ವಿನಿಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು. ಜೀವನದ ಗುರಿ ಯಶಸ್ಸಿನತ್ತ ಇರಬೇಕಾದುದು ಅವಶ್ಯಕ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕಾಲೇಜು ಪುನರಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಕಾಲೇಜು ಸ್ವಾಯತ್ತತೆ ಘೋಷಣೆಯಾದ ಬಳಿಕ ಶೈಕ್ಷಣಿಕವಾಗಿ ಉನ್ನತ ಸ್ತರದಲ್ಲಿ ಕಾಣಿಸಿಕೊಳ್ಳಲು ಬೇಕಾದ ಮೂಲಭೂತ ಸೌಕರ್ಯಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳೇ ಮುಕ್ತವಾಗಿ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಪ್ರಬುಧ್ದತೆಯನ್ನ ಹೊಂದಬೇಕು. ಶಿಕ್ಷಕರ ಮಾರ್ಗದರ್ಶನ ಮುಖೇನ ವೈಯಕ್ತಿಕ ಅಭಿವೃದ್ಧಿಯ ಕುರಿತು ಗಮನವಹಿಸಬೇಕು ಎಂದರು.

ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಹೆಚ್.ಜಿ.ಶ್ರೀಧರ್ ಮಾತನಾಡಿ, ಭಾಷೆ, ಜ್ಞಾನ ಮತ್ತು ಆಂತರಿಕ ಪ್ರಬುದ್ಧತೆಯನ್ನು ಸ್ನಾತಕೋತ್ತರ ವಿದ್ಯಾರ್ಥಿ ದೆಸೆಯಲ್ಲಿ ಸಾಧಿಸಿಕೊಳ್ಳಬೇಕು. ಪೂರಕವಾಗಿ ಗ್ರಂಥಾಲಯದ ಸದುಪಯೋಗಪಡಿಸಿಕೊಂಡು ಜ್ಞಾನರ್ಜನೆ ಮಾಡಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳುವುದು ಅಗತ್ಯ. ಅರಸಿ ಬರುವ ಅವಕಾಶಗಳನ್ನು ಪೂರಕ ಸಾಮರ್ಥ್ಯದೊಂದಿಗೆ ಬಳಸಿಕೊಳ್ಳಬೇಕು ಎಂದರು.

ವಿವೇಕಾನಂದ ಕಾಲೇಜಿನ ವಿಶೇಷ ಆಧಿಕಾರಿ ಡಾ.ಶ್ರೀಧರ್ ನಾಯಕ್ ಮಾತನಾಡಿ, ಯಾವುದೇ ವ್ಯವಸ್ಥೆಯಲ್ಲಿ ಬದಲಾವಣೆಗಳಾದಾಗ ಅಲ್ಲಿ ಹೊಸ ಆಲೋಚನೆಗಳಿಗೆ ಅವಕಾಶ ತೆರೆದುಕೊಳ್ಳುತ್ತದೆ. ಅದೇ ರೀತಿ ವಿದ್ಯಾಸಂಸ್ಥೆಯ ನೂತನ ವ್ಯವಸ್ಥೆ ಪ್ರಸ್ತುತ ಜಗತ್ತಿನ ವಿದ್ಯಾಮಾನಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರಿಸುವ ರೀತಿಯಲ್ಲೇ ರೂಪುಗೊಂಡಿದೆ. ಜೊತೆಗೆ ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಹೆಜ್ಜೆ ಇಟ್ಟು ಯಶಸ್ಸು ಸಾಧಿಸಿದಾಗ ಸಂಸ್ಥೆಯ ಪ್ರಯತ್ನ ಸಾರ್ಥಕವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ವಿಜಯ ಸರಸ್ವತಿ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗ ಉಪನ್ಯಾಸಕಿ ತಾರಾ ವಂದಿಸಿದರು. ವಿದ್ಯಾರ್ಥಿನಿ ಶ್ರಾವ್ಯ ಬಿ ಪ್ರಾರ್ಥಿಸಿ ಉಪನ್ಯಾಸಕಿ ಲಕ್ಷ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here