ಅಂಗಾರ ಅವರ ಬಂಗಾರದ ಬದುಕು ಬೆಳಗಲಿ – ಶಕುಂತಳಾ ಶೆಟ್ಟಿ
ಸರಕಾರಿ ಅಧಿಕಾರಿಗಳಿಗೆ ಆದರ್ಶರು – ಡಾ. ರಘು ಬೆಳ್ಳಿಪ್ಪಾಡಿ
ಯಾರ ಮನಸ್ಸಿಗೂ ನೋವು ಮಾಡಿಲ್ಲ – ಅಂಗಾರ ಪಿ
ಪುತ್ತೂರು : ಸಾಮಾನ್ಯವಾಗಿ ವಿದಾಯ ಕೂಟದಲ್ಲಿ ಎಲ್ಲರಿಗೂ ಆತಿಥ್ಯ ನೀಡುವುದು ಸಹಜವಾದರೂ ಆತಿಥ್ಯದ ನಡುವೆಯೂ ಸಮಾಜದಲ್ಲಿನ ಅಶಕ್ತರನ್ನು ಗುರುತಿಸಿ ಅವರಿಗೆ ಸರಕಾರಿ ಸೇವೆಯ ಕೊನೆಯಲ್ಲೂ ತಮ್ಮಿಂದಾದ ಆರ್ಥಿಕ ನೆರವು ನೀಡುವ ಮೂಲಕ ಪುತ್ತೂರು ಅಬಕಾರಿ ವಲಯ ಕಚೇರಿಯ ಸಬ್ ಇನ್‌ಸ್ಪೆಕ್ಟರ್ ಅಂಗಾರ ಪಿ ಅವರು ತಮ್ಮ ನಿವೃತ್ತದ ಸಂರ್ಭದಲ್ಲಿ ಎಲ್ಲರಿಗೂ ಮಾದರಿ ಕಾರ್ಯವನ್ನು ಮಾಡಿದ್ದಾರೆ.
ನ.30ರಂದು ನಿವೃತ್ತರಾದ ಅಬಕಾರಿ ಇಲಾಖೆಯ ಪುತ್ತೂರು ವಲಯ ಕಛೇರಿಯ ಸಬ್ ಇನ್‌ಸ್ಪೆಕ್ಟರ್ ಅಂಗಾರ ಪಿ ಅವರ ವಿದಾಯ ಕೂಟ ಡಿ.1ರಂದು ಹಾರಾಡಿ ಮುಗೇರ ನಿಲಯದಲ್ಲಿ ನಡೆಯಿತು. ಈ ಸಂದರ್ಭ ಅವರು ಮನೆಕಟ್ಟಲು ಅಸಹಾಯಕರಾದ ಕೇಪುಳು ನಿವಾಸಿ ಕಮಲ ಅವರಿಗೆ ಆರ್ಥಿಕ ನೆರವು, ಅನಾರೋಗ್ಯದಿಂದ ಬಳಲುತ್ತಿರುವ ಹರಿಣಿ ಬಪ್ಪಳಿಗೆ ಅವರಿಗೆ ದಿನಸಿ ಸಾಮಾಗ್ರಿಗಳು, ವಿದ್ಯಾರ್ಥಿಯೊಬ್ಬರಿಗೆ ಶೈಕ್ಷಣಿಕ ಸಹಾಯ ಮಾಡಿದರು.
ಅಂಗಾರ ಅವರ ಬಂಗಾರದ ಬದುಕು ಬೆಳಗಲಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಅಂಗಾರ ಅವರು ದೈವ ಭಕ್ತರು. ಅವರ ಸಮಾಜಮುಖಿ ಕೆಲಸ ಮಾದರಿ. ಅವರ ಬಂಗಾರದ ಬದುಕು ಬೆಳಗಾಗಲಿ ಎಂದು ಹಾರೈಸಿದರು.
ಸರಕಾರಿ ಅಧಿಕಾರಿಗಳಿಗೆ ಆದರ್ಶರು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಗೇರ ಸಂಘದ ಅಧ್ಯಕ್ಷ ಡಾ.ರಘು ಬೆಳ್ಳಿಪ್ಪಾಡಿ ಅವರು ಮಾತನಾಡಿ ಅಂಗಾರ ಅವರು ಅಧಿಕಾರಿಗಿಂತಲೂ ಹೆಚ್ಚಾಗಿ ಸಮಾಜ ಸೇವೆಯಲ್ಲಿ ನಾನು ಅವರನ್ನು ಗುರುತಿಸಿದ್ದೇನೆ. ಅವರು ಸರಕಾರಿ ಅಧಿಕಾರಿಗಳಿಗೆ ಆದರ್ಶರು ಎಂದರು.
ಯಾರ ಮನಸ್ಸಿಗೂ ನೋವು ಮಾಡಿಲ್ಲ:
ನಿವೃತ್ತ ಅಬಕಾರಿ ವಲಯ ಕಚೇರಿಯ ಸಬ್‌ಇನ್‌ಸ್ಪೆಕ್ಟರ್ ಅಂಗಾರ ಪಿ ಅವರು ಮಾತನಾಡಿ ಕರ್ತವ್ಯದ ಅವಧಿಯಲ್ಲಿ ರಾಜಕೀಯ ನೋಡಿಲ್ಲ. ಎಲ್ಲಾ ಪಕ್ಷಕ್ಕೂ ಸಮಾನವಾಗಿ ಯಾರಿಗೂ ಅನ್ಯಾಯ ಮಾಡದೆ ಕರ್ತವ್ಯ ನಿರ್ವಹಿಸಿದ್ದೇನೆ. ಅದೇ ರೀತಿ ಪ್ರಕರಣದ ವಿಚಾರ ಬಂದಾಗ ನಾನು ಜಾತಿಯನ್ನು ಕೂಡಾ ನೋಡದೆ ಕೇಸು ಹಾಕಿದ್ದೇನೆ. ಅದೇ ರೀತಿ ಯಾರ ಮನಸ್ಸಿಗೂ ನೋವು ಮಾಡಿಲ್ಲ. ಇನ್ನೊಂದು ಕಡೆ ಸಾಮಾಜಿಕ ಚಿಂತನೆ ಮಾಡುವಾಗ ಅದಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಧರ್ಮ ಎಂದು ಹಲವರ ಬದುಕಿಗೆ ಸಹಾಯ ಹಸ್ತ ಮಾಡಿದ್ದೇನೆ ಎಂದರು. ವೇದಿಕೆಯಲ್ಲಿ ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮೊಹಮ್ಮದ್, ನಗರಸಭೆ ಮಾಜಿ ಅಧ್ಯಕ್ಷೆ ವಾಣಿ ಶ್ರೀಧರ್, ಡಾ. ರಾಜರಾಮ್, ಬನ್ನೂರು ಶಿವ ಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ನವೋದಯ ಯುವಕ ವೃಂದದ ಅಧ್ಯಕ್ಷ ರಾಧಾಕೃಷ್ಣ ರೈ, ಪಡೀಲು ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಸಂಚಾಲಕ ಸುಧೀರ್ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ಬಿ.ವಿಶ್ವನಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಲೋಚನಾ ಪ್ರಾರ್ಥಿಸಿದರು. ಬನ್ನೂರು ನವೋದಯ ಯುವಕ ವೃಂದದ ಸಂಚಾಲಕ ಚಂದ್ರಾಕ್ಷ ಬಿ.ಎನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಪಡೀಲ್ ವಂದಿಸಿದರು. ವಿದಾಯ ಕೂಟದಲ್ಲಿ ಅನೇಕ ಗಣ್ಯರು, ಸಂಘ ಸಂಸ್ಥೆಯವರು, ಸ್ಥಳೀಯರುಆಗಮಿಸಿ ಅಂಗಾರ ಪಿ ಅವರಿಗೆ ಶುಭ ಹಾರೈಸಿದರು.
ವಿದಾಯದ ಸಂದರ್ಭ ಹುಟ್ಟು ಹಬ್ಬ ಆಚರಣೆ:
ಅಂಗಾರ ಪಿ ನಿವೃತ್ತಿಯ ಜೊತೆಗೆ ಅವರ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭ ಅವರ ಪತ್ನಿ ಎಲ್.ಐ.ಸಿ ನಿವೃತ್ತಿ ಉದ್ಯೋಗಿ ಸುಂದರಿ ಅವರ ನಿವೃತ್ತಿಗೂ ಶುಭಹಾರೈಸಿಲಾಯಿತು. ದೀಪ ಬೆಳಗಿಸಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಣೆ ವೇಳೆ ಅಂಗಾರ ದಂಪತಿ ಪುತ್ರ ಅರವಿಂದ, ಪುತ್ರಿ ಸತ್ಯಶ್ರೀ, ಅಳಿಯ ಸಂದೀಪ್ ಎನ್ ಉಪಸ್ಥಿತರಿದ್ದರು.