ಕಬಕ ಪ.ಪೂ ಕಾಲೇಜಿನ ನೂತನ ತರಗತಿ ಕಟ್ಟಡ ಉದ್ಘಾಟನೆ, ವಾರ್ಷಿಕೋತ್ಸವ

0

ಸರಕಾರಿ ಶಾಲೆ, ಕಾಲೇಜುಗಳಿಗೆ ಸೌಲಭ್ಯ ನೀಡಿದರೂ ಮಕ್ಕಳ ಸಂಖ್ಯೆಯಿಲ್ಲದಿದ್ದರೆ ಪ್ರಯೋಜನವಿಲ್ಲ-ಮಠಂದೂರು

ಪುತ್ತೂರು:ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂ.55ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತರಗತಿ ಕಟ್ಟಡಗಳ ಉದ್ಘಾಟನೆ ಹಾಗೂ ಕಾಲೇಜಿನ ವಾರ್ಷಿಕೋತ್ಸವವು ನ.30ರಂದು ನಡೆಯಿತು.

ನೂತನ ಕಟ್ಟಡವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರ ಕೋಟ್ಯಾಂತರ ಖರ್ಚು ಮಾಡಿ ಸರಕಾರಿ ಶಾಲೆ, ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟರೂ ಮಕ್ಕಳ ಸಂಖ್ಯೆ ಇಲ್ಲದೇ ಇದ್ದರೆ ಯಾವುದೇ ಪ್ರಯೋಜನವಿಲ್ಲ. ಸರಕಾರದ ಯೋಜನೆಗಳು ಸದುಪಯೋಗವಾಗದಿದ್ದರೆ ಸಾರ್ಥಕವಾಗಲು ಸಾಧ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರ ಪಾತ್ರವೂ ಮುಖ್ಯವಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಭಾಗದ ಮಕ್ಕಳ ಪೋಷಕರು ಈ ಸಂಸ್ಥೆಯಲ್ಲಿ ದಾಖಲಾತಿ ಮಾಡುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳುವಂತೆ ವಿನಂತಿಸಿದರು. ಕಬಕ ಕಾಲೇಜು ಅಭಿವೃದ್ಧಿ ಪಥದಲ್ಲಿ ಸಾಗಿ ಮೂಲಭೂತ ಸೌಲಭ್ಯಗಳನ್ನು ಈಡೇರಿಸಿದ್ದು ಪ್ರಾಂಶುಪಾಲರು ಮನಸ್ಸು ಮಾಡಿದರೆ ಯಾವ ರೀತಿಯಲ್ಲಿ ಅಭಿವೃದ್ಧಿ ಪಡಿಸಬಹುದು ಎನ್ನುವುದಕ್ಕೆ ಇಲ್ಲಿನ ಪ್ರಾಂಶುಪಾಲರೇ ಉದಾಹರಣೆಯಾಗಿದ್ದಾರೆ ಎಂದು ಶಾಸಕರು ಪ್ರಶಂಸೆ ವ್ಯಕ್ತಪಡಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿಯೂ ಖಾಸಗಿ ಸಂಸ್ಥೆಗಳಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿ ಈ ಭಾಗದ ಎಲ್ಲಾ ವಿದ್ಯಾರ್ಥಿಗಳು ಇಲ್ಲಿಯೇ ದಾಖಲಾತಿ ಪಡೆದುಕೊಂಡು ವಿದ್ಯಾರ್ಜನೆ ಮಾಡುವಂತೆ ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಟಿ.ಎಸ್ ಸುಬ್ರಹ್ಮಣ್ಯ ಭಟ್, ಪ್ರೌಢಶಾಲಾ ವಿಭಾಗದ ಕಾರ್ಯಾಧ್ಯಕ್ಷ, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಪುರುಷೋತ್ತಮ ಮುಂಗ್ಲಿಮನೆ, ಸದಸ್ಯ ಆನಂದ ಗೌಡ ನೆಕ್ಕರೆ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ರೂಪ್ಲಾ ನಾಯಕ್ ಎಸ್, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಪಿಡಿಓ ಆಶಾ ಇ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ನಿವೃತ್ತರಾದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಚಂದ್ರಹಾಸ ರೈ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಡಿ. ಜಯಣ್ಣ, ಕಟ್ಟಡದ ಗುತ್ತಿಗೆದಾರ ಪ್ರಭಾಕರ, ಕೆಂಚಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಬಕ ಪ್ರೌಢಶಾಲಾ ಶಿಕ್ಷಕಿ ಶಾಂತಾ, ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಶಿವರಾಮ ಭಟ್ ಕಜೆ, ಅನ್ನದಾನದ ಪ್ರಾಯೋಜಕ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ಬನ್ನೂರು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಶಾನಿಯಾ, ಫಾತಿಮತ್ ಸೌಫಿಯ, ಆಜಾದಿಕ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಸಂಜೆ ಕಾಲೇಜು ನಡೆಸಿದ ಜಿಲ್ಲಾ ಮಟ್ಟದ ರಶಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಪಡೆದ ಖದಿಜತುಲ್ ಝಕಿಯರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ದತ್ತಿನಿಧಿ ವಿತರಣೆ: ಕಾಲೇಜು ಅಭಿವೃದ್ಧಿ ಸಮಿತಿಯ ಸ್ಥಾಪಕ ಅಧ್ಯಕ್ಷ ಶಿವರಾಮ ಕಜೆ ಹಾಗೂ ವೆಂಕಟ್ರಮಣ ಭಟ್ ಸ್ಥಾಪಿಸಿದ ದತ್ತಿನಿಧಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಪ್ರಾಂಶುಪಾಲೆ ಪ್ರೇಮಲತಾ ಜೆ. ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ತೇಜಾಕ್ಷಿಣಿ ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ವಿಜೇತ ವಂದಿಸಿದರು. ಶ್ರೀನಿವಾಸ ಬಡೆಕಿಲ್ಲಾಯ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಶ್ರೀಧರ ರೈ, ವನಿತಾ ಕೆ, ನಯನ ಕುಮಾರಿ, ಅಶ್ವಿತಾ, ಲತಾಶ್ರೀ, ಜಯಲಕ್ಷ್ಮೀ, ಕವನ, ಜಯಲಕ್ಷ್ಮೀ ರೈ, ಚಂದ್ರಿಕಾ, ಬೋಧಕೇತರ ಸಿಬ್ಬಂದಿ ಮಮತಾ ಆನಂದ್, ವಿದ್ಯಾರ್ಥಿ ನಾಯಕ ಲಿಖಿತ್, ಉಪನಾಯಕಿ ತಶ್ಮೀಯ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಅಪರಾಹ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

45 ಪ.ಪೂ ಕಾಲೇಜುಗಳ ಕಟ್ಟಡಗಳಿಗೆ ರೂ.16.40ಲಕ್ಷ, ಪ್ರೌಢಶಾಲೆಗಳಿಗೆ ರೂ.13.90ಲಕ್ಷ ಅನುದಾನ ನೀಡಲಾಗಿದೆ. 111 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುದ್ದ ಕುಡಿಯುವ ನೀರು, ಪೀಠೋಪಕರಣಗಳು, ಸ್ಮಾರ್ಟ್ ಕ್ಲಾಸ್‌ಗಳಿಗೆ ರೂ.5ಕೋಟಿ, ಜೊತೆಗೆ ಜಿ.ಪಂ ಹಾಗೂ ತಾ.ಪಂ ಅನುದಾನದಲ್ಲಿ 18 ತರಗತಿ ಅನುದಾನ, ನರೇಗಾ ಯೋಜನೆಯಲ್ಲಿ ಶೌಚಾಲಯಗಳನ್ನು ಒದಗಿಸಲಾಗಿದೆ. ಡಿಜಿಟಲ್ ಶಿಕ್ಷಣದ ಸ್ವಾದ ಸರಕಾರಿ ಶಾಲಾ ಮಕ್ಕಳಿಗೂ ದೊರೆಯುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ಒದಗಿಸಲಾಗುವುದು.

-ಸಂಜೀವ ಮಠಂದೂರು, ಶಾಸಕರು

LEAVE A REPLY

Please enter your comment!
Please enter your name here