ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ ಡಿ.9ರಂದು ನಡೆಯಿತು.
ಶ್ರೀ ರಾಮಕುಂಜೇಶ್ವರ ದೇವಸ್ಥಾನದಿಂದ ವಿದ್ಯಾರ್ಥಿಗಳು ತಂದ ಕ್ರೀಡಾ ಜ್ಯೋತಿಯ ಮೂಲಕ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ನಿಂಗರಾಜುರವರು ದೀಪವನ್ನು ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯ ಒಂದು ಮುಖ್ಯ ಗುಣ ಮಾನವೀಯ ಮೌಲ್ಯಗಳನ್ನು ಬೆಳೆಸುವುದು. ಒಬ್ಬ ನಿಜವಾದ ಕ್ರೀಡಾಪಟು ಕಷ್ಟ-ಸುಖ ನೋವು-ನಲಿವು ಇವೆಲ್ಲವನ್ನ ಅನುಭವಿಸಿರುತ್ತಾನೆ. ಇದರಿಂದ ಸ್ವಾಭಾವಿಕವಾಗಿಯೇ ಅವನಲ್ಲಿ ಮಾನವೀಯ ಮೌಲ್ಯಗಳು ಹೆಚ್ಚು ಇರುತ್ತವೆ. ಹಾಗಾಗಿ ನೀವೆಲ್ಲರೂ ಕ್ರೀಡೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವಂತವರಾಗಬೇಕು ಎಂದು ಹೇಳಿದರು. ಇನ್ನೋರ್ವ ಅತಿಥಿ ಕುಂತೂರುಪದವು ಸಂತ ಜಾರ್ಜ್ ಹೈಸ್ಕೂಲ್‌ನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್‌ಕುಮಾರ್‌ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕ್ರೀಡೆಯಿಂದ ಒಬ್ಬ ವ್ಯಕ್ತಿಗೆ ಅನೇಕ ಅನುಕೂಲತೆಗಳು ಇವೆ. ಕ್ರೀಡೆಯಿಂದ ಒಬ್ಬ ವಿದ್ಯಾರ್ಥಿಯು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗುತ್ತಾನೆ. ಸ್ವಸ್ಥ ವ್ಯಕ್ತಿಗಳು ಖಂಡಿತವಾಗಿಯೂ ಸ್ವಸ್ಥ ಸಮಾಜವನ್ನು ನಿರ್ಮಿಸುತ್ತಾರೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ.ರವರು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕ ಅಶೋಕ್ ಕೊಯಿಲರವರು ಮಾತನಾಡಿ, ಕ್ರೀಡೆಯಿಂದ ಒಬ್ಬ ವಿದ್ಯಾರ್ಥಿಗೆ ತನ್ನ ಬದುಕನ್ನ ಕಟ್ಟಿಕೊಳ್ಳಲು ಬಹಳಷ್ಟು ಅವಕಾಶಗಳು ಇವೆ. ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜ್ಯ ರಾಷ್ಟ್ರಮಟ್ಟದ ಸಾಧನೆಗಳನ್ನು ಮಾಡಿದವರಿಗೆ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಉದ್ಯೋಗದಲ್ಲಿಯೂ ವಿಶೇಷ ಆದ್ಯತೆಯನ್ನ ನೀಡಲಾಗುತ್ತದೆ. ಇದರಿಂದ ಒಬ್ಬ ಕ್ರೀಡಾಪಟುವಿಗೆ ತನ್ನ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯವಾಗ್ತದೆ. ಹಾಗಾಗಿ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡುವಲ್ಲಿ ಈ ಕ್ರೀಡಾಕೂಟವು ಮೊದಲ ಹಂತವಾಗಲಿ ಎಂದರು. ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲೆಯ ಮುಖ್ಯಗುರು ಸತೀಶ್ ಭಟ್ ಸ್ವಾಗತಿಸಿದರು. ಪ್ರೌಢಶಾಲೆಯ ಶಿಕ್ಷಕಿ ಸುಪ್ರೀತಾ ವಂದಿಸಿದರು. ಕಾಲೇಜಿನ ಉಪನ್ಯಾಸಕ ಸತೀಶ್ ಜಿ.ಆರ್.ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಕ್ರೀಡೆಗಳು ಜರುಗಿದವು.