ಇನ್ನೊಂದು ಮದುವೆಯಾಗಲು ಗಂಡನಿಗೆ ಒಪ್ಪಿಗೆ ಕೊಡಲು ಮಹಿಳೆಗೆ ಹಿಂಸೆ- ಆರೋಪಿಗಳಿಗೆ ಜೈಲು ಶಿಕ್ಷೆ ತೀರ್ಪು ನೀಡಿದ ಬೆಳ್ತಂಗಡಿ ನ್ಯಾಯಾಲಯ

0

ಪುತ್ತೂರು:ಇನ್ನೊಂದು ಮದುವೆಯಾಗಲು ಒಪ್ಪಿಗೆ ಕೊಡುವಂತೆ ಮಹಿಳೆಯೊಬ್ಬರಿಗೆ ಆಕೆಯ ಗಂಡನ ಸಂಬಂಧಿಕರು ಒತ್ತಡ ಹೇರಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ 37 ವರ್ಷದ ವಿವಾಹಿತ ಮಹಿಳೆಗೆ, ಆಕೆಯ ಗಂಡನಿಗೆ ಇನ್ನೊಂದು ಮದುವೆಯಾಗಲು ಒಪ್ಪಿಗೆ ನೀಡುವಂತೆ ಹೇಳಿ 2017ರ ಆಗಸ್ಟ್ 6ರಂದು ಗಂಡನ ಸಂಬಂಧಿಕರಾದ ಹಬೀಬ್, ಇಬ್ರಾಹಿಂ, ಹಸನಬ್ಬ, ಬಶೀರ್ ಯಾನೆ ಅಬ್ದುಲ್ ಬಶೀರ್ ಅವರು ಒತ್ತಡ ಹೇರಿದ್ದಲ್ಲದೆ ಅವಾಚ್ಯ ಶಬ್ಬಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು. ಘಟನೆ ಕುರಿತು ನೊಂದ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ದಾಖಲಿಸಿ ತನಿಖೆ ನಡೆಸಿದ್ದ ಆಗಿನ ಪೊಲೀಸ್ ಉಪ ನಿರೀಕ್ಷಕ ನಂದಕುಮಾರ್ ಎಂ.ಎಂ.ಅವರು ಆರೋಪಿಗಳ ವಿರುದ್ಧ ಬೆಳ್ತಂಗಡಿಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಫ್.ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಶಿಕ್ಷೆ ಪ್ರಮಾಣ: ಐಪಿಸಿ ಕಲಂ 498(ಎ)ರಡಿ ಆರೋಪ ಸಾಬೀತಾದ ಕಾರಣ ಆರೋಪಿಗಳಿಗೆ ಆರು ತಿಂಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ರೂಪಾಯಿ 1000 ದಂಡ ವಿಧಿಸಿ ನ್ಯಾಯಾಲಯ ಆದೇಶ ಮಾಡಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ಸರಕಾರದ ಪರವಾಗಿ ಬೆಳ್ತಂಗಡಿಯ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಪುತ್ತೂರು ಉರ್ಲಾಂಡಿ ನಿವಾಸಿ ದಿವ್ಯರಾಜ್ ಹೆಗ್ಡೆ ವಾದಿಸಿದ್ದರು.

LEAVE A REPLY

Please enter your comment!
Please enter your name here