ಉಪ್ಪಿನಂಗಡಿ: ಸಿ ಮತ್ತು ಡಿ ದರ್ಜೆ ಸ್ಥಾನಮಾನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಿರ್ಣಾಯಕ ಹೋರಾಟಕ್ಕೆ ಸಿದ್ಧಗೊಂಡಿರುವ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್.ಡಿ.ಪಿ.ಆರ್) ಬೆಳಗಾವಿಯ ಸುವರ್ಣ ಸೌಧದ ಮುಂದೆ ಡಿ.19ರಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಂಡಿದೆ. ಇದರಿಂದಾಗಿ ಬಹುತೇಕ ಗ್ರಾ.ಪಂ.ಗಳಲ್ಲಿ ಸಿಬ್ಬಂದಿಯ ರಜೆಯ ಕಾರಣ ಸಾರ್ವಜನಿಕರ ಕೆಲಸಗಳು ಸ್ತಬ್ಧಗೊಂಡಿವೆ. ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‌ಗಳ 98 ನೌಕರರು ಈ ಹೋರಾಟದಲ್ಲಿ ಭಾಗಿಯಾಗಿದ್ದು, ಇದರೊಂದಿಗೆ ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್. ನೌಕರರ ಸಂಘವೂ ನಿಶ್ಚಿತ ಪಿಂಚಣಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಮಾಡು ಇಲ್ಲವೆ ಮಡಿ’ ಹೋರಾಟಕ್ಕೆ ಕರೆ ಕೊಟ್ಟಿದ್ದು, ಇದರಲ್ಲಿ ಗ್ರಾಮ ಪಂಚಾಯತ್‌ಗಳ ಬಹುತೇಕ ಪಿಡಿಒಗಳು ಭಾಗಿಯಾಗುತ್ತಿದ್ದಾರೆ. ಇದರಿಂದ ಬಹುತೇಕ ಗ್ರಾ.ಪಂ.ಗಳಲ್ಲಿ ಗ್ರಾ.ಪಂ.ನ ಕಾರ್ಯಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವಂತಾಗಿದೆ.
ಗ್ರಾ.ಪಂ. ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್/ ಕ್ಲರ್ಕ್ ಕಮ್ ಡಿಇಓ, ಬಿಲ್ ಕಲೆಕ್ಟರ್ ಹಾಗೂ ಡಾಟ ಎಂಟ್ರಿ ಅಪರೇಟರ್‌ಗಳಿಗೆ ಸಿ ದರ್ಜೆ ಸ್ಥಾನಮಾನ ಮತ್ತು ಅಟೆಂಡರ್, ಕ್ಲೀನರ್, ವಾಟರ್‌ಮ್ಯಾನ್/ ಪಂಪುಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ಸ್ಥಾನಮಾನ ನೀಡಬೇಕು. ನಗರ ಮತ್ತು ಪಟ್ಟಣ ಪಂಚಾಯತ್‌ನಂತೆ ಸೇವಾ ನಿಯಮಾವಳಿ, ವೇತನ ಶ್ರೇಣಿ ನಿಗದಿಪಡಿಸಬೇಕು. ಸರಕಾರದ ಆದೇಶ ದಿನಾಂಕ 29-09-2020ರ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸದೇ ಹಾಗೂ ಪಂಚಾಯತ್‌ಗಳಲ್ಲಿ ಹುದ್ದೆಗಳ ಗರಿಷ್ಟ ಮಿತಿಯನ್ನು ನಿಗದಿಪಡಿಸದೇ ಜಿಲ್ಲಾ ಪಂಚಾಯತ್‌ನಿಂದ ಅನುಮೋದನೆ ನೀಡಬೇಕು. ಗ್ರಾಮ ಪಂಚಾಯತ್ ನೌಕರರು ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ಭದ್ರತೆಯೊಂದಿಗೆ ನಿವೃತ್ತಿ ಜೀವನಕ್ಕೆ ಭವಿಷ್ಯ ನಿಧಿ, ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘವು ಬೆಳಗಾವಿಯಲ್ಲಿ ಧರಣಿ ನಡೆಸುತ್ತಿದೆ.