ಪುತ್ತೂರು:ದೂರದೃಷ್ಠಿ ಗ್ರಾಮ ಸಭೆಗೆ ನೋಡೆಲ್ ಅಧಿಕಾರಿಯವರು ಗೈರು ಹಾಜರಾದ ಮತ್ತು ಅಧಿಕಾರಿಗಳಿಲ್ಲದೆ ಗ್ರಾಮ ಸಭೆ ನಡೆಸುವುದಾದರೂ ಯಾಕೆ ಎಂದು ಪ್ರಶ್ನಿಸಿ ಸದಸ್ಯರೋರ್ವರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಟ್ಟಂಪಾಡಿ ಗ್ರಾ.ಪಂನ ದೂರ ದೃಷ್ಠಿ ಗ್ರಾಮ ಸಭೆಯಲ್ಲಿ ನಡೆದಿದೆ.
ಸಭೆಯು ಡಿ.19 ರಂದು ಅಧ್ಯಕ್ಷೆ ಪವಿತ್ರರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯ ಮೊದು ಕುಂಞಿ ಮಾತನಾಡಿ, ದೂರದೃಷ್ಠಿ ಗ್ರಾಮ ಸಭೆಗೆ ನೋಡೆಲ್ ಅಧಿಕಾರಿಗಳೇ ಗೈರಾಗಿದ್ದಾರೆ. ಹೀಗಾದರೆ ಮಾಹಿತಿ ನೀಡುವವರು ಯಾರು? ಇಷ್ಟೊಂದು ಪ್ರಚಾರ ಮಾಡಿ ಗ್ರಾಮಸ್ಥರನ್ನು ಸೇರಿಸಿ ಗ್ರಾಮಸಭೆ ನಡೆಸುತ್ತಿದ್ದರೂ ನೋಡೆಲ್ ಅಧಿಕಾರಿಗಳೇ ಗೈರಾದರೆ ಸಭೆ ನಡೆಸುವುದಾದರೂ ಯಾಕೆ? ಸೂಚಿಸಿದ ಅಧಿಕಾರಿಗಳಿಗೆ ಬರಲು ಅಸಾಧ್ಯವಾಗುವುದಾದರೆ ಬದಲಿ ಅಧಿಕಾರಿಗಳನ್ನಾದರೂ ಕಳುಹಿಸಿಕೊಡಬೇಕಿತ್ತು ಎಂದರು.
ನೋಡೆಲ್ ಅಧಿಕಾರಿಯವರಿಗೆ ಅನಾರೋಗ್ಯವಾಗಿರುವುದರಿಂದ, ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಸಭೆ ನಡೆಸುವಂತೆ ತಿಳಿಸಿರುವುದಾಗಿ ಅಧ್ಯಕ್ಷೆ ಪವಿತ್ರರವರು ತಿಳಿಸಿದರು.
ಉಪಾಧ್ಯಕ್ಷ ವಿನೋದ್ ಕುಮಾರ್ ರೈಯವರು ದೂರದೃಷ್ಠಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ಪ್ರಕಾಶ್ ರೈ, ಚಂದ್ರಶೇಖರ ರೈ, ಗಂಗಾಧರ, ವಿದ್ಯಾಶ್ರೀ ಸುರೇಶ್, ಉಮಾವತಿ ಎಸ್ ಮಣಿಯಾಣಿ, ರಮ್ಯ, ಲಲಿತಾ, ಪಾರ್ವತಿ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಸೌಮ್ಯ ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ್ ವಂದಿಸಿದರು.